Karnataka Budget 2025 | ದಾಖಲೆಯ 16ನೇ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು
ʼಕುರಿ ಲೆಕ್ಕ ಹಾಕಲು ಬಾರದವ ಹೇಗೆ ಬಜೆಟ್ ಮಂಡಿಸುವʼ ಎಂಬ ಟೀಕಾಕಾರರಿಗೆ ಮಾತಿಗೆ ತಿರುಗೇಟು ನೀಡುವಂತೆ ಯಶಸ್ವಿಯಾಗಿ ಹಣಕಾಸು ಖಾತೆ ನಿಭಾಯಿಸಿರುವ ಸಿದ್ದರಾಮಯ್ಯ ಅವರು, ತಮ್ಮ16 ನೇ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16 ನೇ ಬಜೆಟ್ ಮಂಡನೆ ನಾಳೆ(ಶುಕ್ರವಾರ) ನಡೆಯಲಿದೆ.
ʼಕುರಿ ಲೆಕ್ಕ ಹಾಕಲು ಬಾರದವ ಹೇಗೆ ಬಜೆಟ್ ಮಂಡಿಸುವʼ ಎಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದಾಗ ಎದುರಿಸಿದ್ದ ಕುಹಕವನ್ನು ಎದುರಿಸಿ ತಿರುಗೇಟು ನೀಡುವಂತೆ ಯಶಸ್ವಿಯಾಗಿ ಹಣಕಾಸು ಖಾತೆ ನಿಭಾಯಿಸಿರುವ ಸಿದ್ದರಾಮಯ್ಯ ಅವರು, ಶುಕ್ರವಾರ ತಮ್ಮ16 ನೇ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ.
ರಾಜ್ಯದ ಆಯವ್ಯಯ ಕೇವಲ 21 ಕೋಟಿ ರೂ.ಇದ್ದಾಗ ಬಜೆಟ್ ಮಂಡನೆಗೆ ಮುಂದಡಿ ಇಟ್ಟಿದ್ದ ಸಿದ್ದರಾಮಯ್ಯ ಅವರು ಕಳೆದ ವರ್ಷ 3.71 ಲಕ್ಷ ಕೋಟಿ ರೂ. ಗಾತ್ರದ 15ನೇ ಬಜೆಟ್ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಬಜೆಟ್ ಗಾತ್ರ ನಾಲ್ಕು ಲಕ್ಷ ಕೋಟಿ ಮೀರಲಿದೆ ಎನ್ನಲಾಗಿದ್ದು, ದಾಖಲೆಯ 16ನೇ ಬಜೆಟ್ ಮಂಡನೆಗೆ ತಯಾರಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಅವರ ಬಳಿಕ ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರಿಗೆ ಸಲ್ಲಲಿದೆ. ರಾಮಕೃಷ್ಣ ಹೆಗಡೆ ಅವರು 13 ಬಾರಿ ಬಜೆಟ್ ಮಂಡಿಸಿದ್ದರು. ಈ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಅವರು ಏಳು ವರ್ಷದ ಹಿಂದೆಯೇ ಸರಿಗಟ್ಟಿದ್ದರು. ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಒಟ್ಟು 8 ಬಜೆಟ್ ಮಂಡಿಸಿ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.
ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡನೆ
ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಗುಜರಾತ್ ಹಣಕಾಸು ಸಚಿವರಾಗಿದ್ದ ವಜೂಭಾಯಿ ವಾಲ ಅವರ ಹೆಸರಲ್ಲಿದೆ. ವಜೂಭಾಯಿ ಅವರು ತಮ್ಮ ಸುದೀರ್ಘ ಆಡಳಿತದಲ್ಲಿ ಒಟ್ಟು 18 ಬಾರಿ ಬಜೆಟ್ ಮಂಡಿಸಿದ್ದರು. ಇವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಎರಡನೇ ಸ್ಥಾನದಲ್ಲಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಇತಿಹಾಸ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಜೆ.ಎಚ್.ಪಟೇಲ್ ಆಡಳಿತದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸಿದ್ದರಾಮಯ್ಯ ಅವರು 1995 - 96ನೇ ಸಾಲಿನಲ್ಲಿ ಚೊಚ್ಚಲ ಬಜೆಟ್ ಮಂಡಿಸಿದ್ದರು. ನಂತರ 1996-97 ರಿಂದ 1999-2000 ನೇ ಸಾಲಿನವರೆಗೂ ಬಜೆಟ್ ಮಂಡಿಸಿದ್ದರು. ಇದಾದ ಬಳಿಕ 2004-05, 2005-06ನೇ ಸಾಲಿನಲ್ಲಿ ಬಜೆಟ್ ಮಂಡನೆ ಮಾಡಿದ್ದರು.
2013-14 ರಿಂದ 2018-19 ರವರೆಗೆ ಮುಖ್ಯಮಂತ್ರಿಯಾಗಿ ಬಜೆಟ್ ಮಂಡನೆ ಮಾಡಿದರು. ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 2023-24 ನೇ ಸಾಲಿನಿಂದ 2025-26 ನೇ ಸಾಲಿನವರೆಗೆ ಬಜೆಟ್ ಮಂಡಿಸುತ್ತಿದ್ದು, ಪ್ರಸಕ್ತ ಸಾಲಿನ ಬಜೆಟ್ ಸಿದ್ದರಾಮಯ್ಯ ಅವರ 16 ನೇ ಬಜೆಟ್ ಆಗಿದೆ.
ಹಿಗ್ಗಿದ ಬಜೆಟ್ ಗಾತ್ರ
ಕರ್ನಾಟಕದಲ್ಲಿ ಬಜೆಟ್ ಗಾತ್ರ ವರ್ಷದಿಂದ ವರ್ಷದಕ್ಕೆ ಹಿಗ್ಗುತ್ತಿದೆ. ತೆರಿಗೆ ಸಂಗ್ರಹ, ಅಬಕಾರಿ ಸುಂಕ, ಐಟಿ ಉತ್ಪನ್ನಗಳ ರಫ್ತು ಸೇರಿದಂತೆ ವಿವಿಧ ವಲಯಗಳಲ್ಲಿ ಆದಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯವ್ಯಯದ ಗಾತ್ರವೂ ಹೆಚ್ಚುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು 21ಕೋಟಿ ರೂ,ಗಳಿಂದ ಆರಂಭಿಸಿದ ಬಜೆಟ್ ಈಗ ಅಂದಾಜು ನಾಲ್ಕು ಲಕ್ಷ ಕೋಟಿ ರೂ. ಮೀರುತ್ತಿದೆ.
ಸಿದ್ದರಾಮಯ್ಯ ಅವರು ಮಂಡಿಸಿದ ಹಲವು ಬಜೆಟ್‌ಗಳು ಜನಪರ ಕಾರ್ಯಕ್ರಮಗಳ ಘೋಷಣೆಯಿಂದ ಮಹತ್ವ ಪಡೆದುಕೊಂಡಿವೆ. ಹಸಿವು ಮುಕ್ತ ರಾಜ್ಯ ಮಾಡುವ ಸಂಕಲ್ಪದಿಂದ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಯೋಜನೆ ಆರಂಭಿಸುವ ಮೂಲಕ ಬಡವರಿಗಾಗಿ ಹಸಿವು ನೀಗಿಸಿದ ಹೆಗ್ಗಳಿಕೆಯೂ ಸಿದ್ದರಾಮಯ್ಯ ಅವರಿಗಿದೆ.
ಇನ್ನು16ನೇ ಬಜೆಟ್‌ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಆದ್ಯತಾ ವಲಯಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ. ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರ ಸಬಲೀಕರಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಲದ ಹೊರೆ ಹೆಚ್ಚುವ ಭೀತಿ
ಕಳೆದ ಬಜೆಟ್‌ನಲ್ಲಿ ಸುಮಾರು 1,05,246 ಕೋಟಿ ರೂ. ಸಾಲ ಮಾಡಲು ಅಂದಾಜಿಸಲಾಗಿತ್ತು. 2025-26ನೇ ಸಾಲಿನಲ್ಲಿ ಸುಮಾರು 1.25 ಲಕ್ಷ ಕೋಟಿ ರೂ. ಸಾಲ ಮಾಡಲು ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ವ ಕೊರತೆಯಿಂದ ಆದಾಯ ಸಂಗ್ರಹ ಇಳಿಕೆಯಾಗಲಿದ್ದು, ಬಂಡವಾಳ ವೆಚ್ಚಕ್ಕಾಗಿ ಸಾಲ ಅನಿವಾರ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಬಹುತೇಕ ರಾಜಸ್ವ ಸಂಗ್ರಹ ಹಣ ವ್ಯಯವಾಗುತ್ತಿದೆ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್ ಸರ್ಕಾರ ಅಧಿಕ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಸರ್ವ ಜನಾಂಗದ ಆಶೋತ್ತರಗಳ ಪ್ರತಿಫಲನ
ಬಜೆಟ್ ಮಂಡನೆ ಬಗ್ಗೆ ತಮ್ಮ ಎಕ್ಸ್ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್ ತಯಾರಿ ಬಗ್ಗೆ ಹೇಳಿಕೊಂಡಿದ್ದಾರೆ.
"ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಧರ್ಮಗಳ ಗುರುಗಳೊಂದಿಗೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ," ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.