Waqf Asset Dispute | ಬಿಜೆಪಿಯಲ್ಲಿ ವಕ್ಫ್ ಹೋರಾಟ ಪೈಪೋಟಿ: ಯತ್ನಾಳ್ ವಿರುದ್ಧ ಸಿಡಿದೆದ್ದ ಅಪ್ಪ-ಮಗ, ಶಿಸ್ತುಕ್ರಮದ ಎಚ್ಚರಿಕೆ
ವಕ್ಫ್ ವಿವಾದ, ಉಪ ಚುನಾವಣೆ ಸೋಲು, ಅಪರೇಷನ್ ಕಮಲ ಸೇರಿದಂತೆ ಹಲವು ವಿಷಯಗಳಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಟೀಕಿಸಿದ್ದ ಯತ್ನಾಳ್ ವಿರುದ್ಧ ಈಗ ಅಪ್ಪ ಮಗ ಇಬ್ಬರೂ ಗರಂ ಆಗಿದ್ದಾರೆ.;
ವಕ್ಫ್ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ವಿರುದ್ಧ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ವಿವಾದ, ಉಪ ಚುನಾವಣೆ ಸೋಲು, ಅಪರೇಷನ್ ಕಮಲ ಸೇರಿದಂತೆ ಹಲವು ವಿಷಯಗಳಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆ, ಆರೋಪಗಳನ್ನು ಮಾಡಿದ್ದ ಯತ್ನಾಳ್ ವಿರುದ್ಧ ಈಗ ಅಪ್ಪ-ಮಗ ಇಬ್ಬರೂ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಕ್ಫ್ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡುವ ಬದಲು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆಲವರು ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ. ಒಗ್ಗಟ್ಟಿನಿಂದ ಹೋರಾಟ ಮಾಡುವಂತೆ ಬಿ.ವೈ. ವಿಜಯೇಂದ್ರ ವಿನಂತಿ ಮಾಡಿದರೂ ಯತ್ನಾಳ್ ಅವರು ಪ್ರತ್ಯೇಕ ಹೋರಾಟ ರೂಪಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಪ್ರತಿಷ್ಠೆಗಾಗಿ ಪ್ರತ್ಯೇಕವಾಗಿ ಹೋರಾಟ ಮಾಡುವುದು ಶೋಭೆ ತರುವುದಿಲ್ಲ. ಇನ್ನಾದರೂ ಜಾಗೃತರಾಗಿ ಒಟ್ಟಿಗೆ ಸೇರಿ ಪಕ್ಷವನ್ನು ಬಲಪಡಿಸಲು ಸಹಕಾರ ನೀಡಬೇಕು. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ನೋಡೋಣ ಎಂದು ಹೇಳಿದ್ದಾರೆ.
ಉಪ ಚುನಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಹಿನ್ನಡೆ ಆಗಿದೆ. ಸೋಲಿಗೆ ಕಾರಣಗಳನ್ನು ಕುರಿತು ಪರಾಮರ್ಶಿಸುತ್ತೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎನ್ನುವ ಪ್ರಶ್ನೆ ಉದ್ಭವಿಸಲ್ಲ. ಎಲ್ಲರೂ ಜವಾಬ್ದಾರರೇ ಎಂದು ಯತ್ನಾಳ್ ಆರೋಪಕ್ಕೆ ಸಿಡಿಮಿಡಿಗೊಂಡರು.
ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ವಿಜಯೇಂದ್ರ
ವಕ್ಫ್ ವಿರುದ್ಧ ಪ್ರತ್ಯೇಕ ಹೋರಾಟ ರೂಪಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಬಿ ಟೀಮ್ ನಾಯಕರಿಗೆ ಈ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶವಿದೆ. ಅದೇ ರೀತಿಯಲ್ಲಿ ಶಿಸ್ತು, ಸಂಯಮಗಳು ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರೈತರಿಗೆ ವಕ್ಫ್ ನೋಟಿಸ್ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹಾಗೂ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪ್ರತ್ಯೇಕ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಬಿಜೆಪಿಯ ಎಲ್ಲ ನಾಯಕರ ಬೆಂಬಲ ನೀಡಬೇಕು ಎಂದು ಯತ್ನಾಳ್ ಇತ್ತೀಚೆಗೆ ಹೇಳಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಡಿ.3 ರಂದು ವಕ್ಫ್ ವಿರುದ್ಧ ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಬಿಜೆಪಿಯಲ್ಲಿ ಎರಡು ಬಣಗಳು ಪ್ರತ್ಯೇಕ ಹೋರಾಟ ರೂಪಿಸಿರುವುದರಿಂದ ಕಾರ್ಯಕರ್ತರಿಗೆ ಬೇರೆ ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಉಪಚುನಾವಣೆ ಸೋಲಿಗೆ ಅಪ್ಪ-ಮಗನೇ ಕಾರಣ ಎಂದು ಯತ್ನಾಳ್ ಈಚೆಗೆ ಆರೋಪಿಸಿದ್ದರು.