ತಿರುಪತಿಯಲ್ಲಿ 'ಅಂಕುರಾರ್ಪಣ'ದೊಂದಿಗೆ ಬ್ರಹ್ಮೋತ್ಸವ ಆರಂಭ

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀನಿವಾಸ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವಗಳು ಸೆ.24ರಿಂದ ಪ್ರಾರಂಭವಾಗಲಿವೆ.

Update: 2025-09-22 07:06 GMT

ತಿರುಪತಿ

Click the Play button to listen to article

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀನಿವಾಸ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಸೆ.24ರಿಂದ ಪ್ರಾರಂಭವಾಗಲಿವೆ. ವೈಖಾನಸ ಆಗಮ ಸಂಪ್ರದಾಯದ ಪ್ರಕಾರ, ಈ ಬ್ರಹ್ಮೋತ್ಸವಗಳ ಭಾಗವಾಗಿ ನವ ಧಾನ್ಯಗಳನ್ನು ಸೆ.23ರಂದು ಸಂಜೆ 7ರಿಂದ 8 ಗಂಟೆಯವರೆಗೆ ನಡೆಯಲಿರುವ ''ಅಂಕುರಾರ್ಪಣ'' ಸಮಾರಂಭದ ವೇಳೆ ಬಿತ್ತಲಾಗುತ್ತದೆ.

ದೇವಾಲಯದ ಯಾಗಶಾಲೆಯಲ್ಲಿ ಶಾಸ್ತ್ರಗಳ ಪ್ರಕಾರ ಅಂಕುರಾರ್ಪಣ ಸಮಾರಂಭವನ್ನು ನಡೆಸಲಾಗುತ್ತದೆ. ಆಗಮ ಶಾಸ್ತ್ರದ ಪ್ರಕಾರ, ಪ್ರತೀ ವೈದಿಕ ಉತ್ಸವದ ಮೊದಲು ಅಂಕುರಾರ್ಪಣ ನಡೆಸಲಾಗುತ್ತದೆ. ಈ ವೇಳೆ, ಬಿತ್ತಲಾದ ಈ ನವಧಾನ್ಯಗಳು ಇಡೀ ಭೂಮಂಡಲದಾದ್ಯಂತ ಮೊಳಕೆಯೊಡೆಯಲಿ, ಹಾಗೆ ಬೆಳೆದ ಬೆಳೆಗಳು ಜಾನುವಾರು ಮತ್ತು ಪಕ್ಷಿಗಳಿಗೆ ಸಮೃದ್ಧವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.

ಸೇನಾಧಿಪತಿ ಉತ್ಸವ

ಈ ಸಂದರ್ಭದಲ್ಲಿ ಬಾಲಾಜಿಯ ಸರ್ವ ಸೈನ್ಯದ ಅಧ್ಯಕ್ಷನಾಗಿದ್ದ ವಿಶ್ವಕ್ಸೇನನನ್ನು ದೇವಾಲಯದ ನಾಲ್ಕೂ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಕರೆದೊಯ್ಯಲಾಗುತ್ತದೆ. ಲೋಕ ರಕ್ಷಕ ಬಾಲಾಜಿಯೇ ಆಯೋಜಿಸುವ ಬ್ರಹ್ಮೋತ್ಸವಗಳ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ವಿಶ್ವಕ್ಸೇನರನ್ನು ಈ ರೀತಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಮೇದಿನಿ ಪೂಜೆ

ಹೊಸ ಧಾನ್ಯಗಳು ಮೊಳಕೆಯೊಡೆಯಲು ಅಗತ್ಯವಾದ ಮಣ್ಣನ್ನು ಪಡೆಯುವ ಸಲುವಾಗಿ ಮೊದಲು ಭೂದೇವಿಯನ್ನು ಸಮಾಧಾನಪಡಿಸಿ ಮೇದಿನಿ ಪೂಜೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ, ಪುರೋಹಿತರು ಭೂಸೂಕ್ತ ಮಂತ್ರಗಳನ್ನು ಪಠಿಸುತ್ತಾರೆ.

ಅಂಕುರಾರ್ಪಣ

ವೈಖಾನಸ ಆಗಮದಲ್ಲಿ ಅತ್ಯಂತ ಮುಖ್ಯವಾದ ಆಚರಣೆಯೆಂದರೆ ಬಿತ್ತನೆ ಬೀಜಗಳ ಮೊಳಕೆ ಒಡೆಯುವಿಕೆಯಾಗಿದೆ. ಮೊದಲು ನೆಲದ ಮೇಲೆ ಮಣ್ಣಿನ ಮಡಿಕೆಗಳನ್ನು ಇರಿಸಲಾಗುತ್ತದೆ. ಇವುಗಳಿಗೆ ನವಗ್ರಹಗಳ ಪ್ರತೀಕವಾಗಿ ನವ ಧಾನ್ಯಗಳನ್ನು ಹಾಕಲಾಗುತ್ತದೆ. ಈ ಬೀಜಗಳು ಉತ್ತಮವಾಗಿ ಮೊಳಕೆ ಒಡೆಯಲೆಂದು ಪ್ರಾರ್ಥಿಸಲು ಓಷಧಿ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಧಾನ್ಯಗಳಲ್ಲಿ ಗೋಧಿಯು ಸೂರ್ಯನನ್ನು ಪ್ರತಿನಿಧಿಸಿದರೆ, ಅಕ್ಕಿ - ಚಂದ್ರ, ಬೇಳೆ - ಮಂಗಳ, ಬಟಾಣಿ - ಬುಧ, ಕಡಲೆ - ಗುರು, ಅಲಸಂದಿ - ಶುಕ್ರ, ಎಳ್ಳು - ಶನಿ, ಹೆಸರುಕಾಳು - ರಾಹು ಮತ್ತು ಉರುಳಿ ಕಾಳು ಕೇತುವನ್ನು ಪ್ರತಿನಿಧಿಸುತ್ತವೆ. ಅಲ್ಲದೆ, ಯಾಗಶಾಲೆಯಲ್ಲಿ ಎಂಟು ದಿಕ್ಕುಗಳ ರಕ್ಷಕರಾದ ಇಂದ್ರ, ಅಗ್ನಿ, ಯಮ, ನಿರಿತಿ, ವರುಣ, ವಾಯುದೇವ, ಕುಬೇರ ಮತ್ತು ಈಶಾನ ಸೇರಿದಂತೆ ಒಟ್ಟು 49 ದೇವತೆಗಳನ್ನು ಈ ಮಡಿಕೆಗಳ ಸುತ್ತಲೂ ಆವಾಹಿಸಲಾಗುತ್ತದೆ.

ಅಕ್ಷತಾರೋಪಣ

ಈ ಮಣ್ಣಿನ ಮಡಿಕೆಗಳಲ್ಲಿನ ನವಧಾನ್ಯಗಳನ್ನು ಬ್ರಹ್ಮೋತ್ಸವದ 9 ದಿನಗಳವರೆಗೆ ಬೆಳೆಸಲಾಗುತ್ತದೆ. ಕೊನೆಯ ದಿನದಂದು ಈ ಮೊಳಕೆಗಳನ್ನು ಬೇರ್ಪಡಿಸಿ ಭಗವಂತನಿಗೆ ಅರ್ಪಿಸಲಾಗುತ್ತದೆ. ಈ ಮೊಳಕೆಗಳು ಹೆಚ್ಚು ಮೊಳಕೆಯೊಡೆದಷ್ಟೂ ಬ್ರಹ್ಮೋತ್ಸವವು ಹೆಚ್ಚು ಭವ್ಯವಾಗಿ ನಡೆಯುತ್ತದೆ ಎಂದು ಭಕ್ತರು ನಂಬುತ್ತಾರೆ.

Tags:    

Similar News