Water Bottle: ಅಂಗಡಿಗಳಲ್ಲಿ ಸಿಗುವ ಮಿನರಲ್ ವಾಟರ್ ಬಾಟಲ್​ ಸುರಕ್ಷಿತವಲ್ಲ; ವರದಿ

ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಆಹಾರ ಇಲಾಖೆ ವಿವಿಧೆಡೆ ದಾಳಿ ನಡೆಸಿ ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.;

Update: 2025-04-08 07:06 GMT

ಬಾಟಲ್‌ ನೀರು ಕೂಡ ಸುರಕ್ಷಿತವಲ್ಲ. 

ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಬಹಿರಂಗ ಮಾಡಿರುವ ಇತ್ತೀಚಿನ ಪ್ರಯೋಗಾಲಯ ವರದಿಯ ಪ್ರಕಾರ, ರಾಜ್ಯದ ನಾನಾ ಕಡೆ ಮಾರುಕಟ್ಟೆಗಳಲಿ ಲಭ್ಯವಿರುವ ಕುಡಿಯುವ ಬಾಟಲ್ ನೀರು (ವಾಟರ್ ಬಾಟಲ್) ಸುರಕ್ಷಿತವಲ್ಲ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಏಪ್ರಿಲ್ 07ರಂದು ಪ್ರಕಟವಾದ ಈ ವರದಿಯಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಿದ 288 ವಾಟರ್ ಬಾಟಲ್ ಮಾದರಿಗಳ ಪೈಕಿ ಶೇಕಡ 50 ರಷ್ಟು ನೀರು ಕಳಪೆ ಗುಣಮಟ್ಟದ್ದು ಎಂದು ತಿಳಿದುಬಂದಿದೆ.

ಈ ಪರೀಕ್ಷೆಯಲ್ಲಿ, ಹಲವು ಕಂಪನಿಗಳು 'ಮಿನರಲ್ ವಾಟರ್' ಎಂದು ಮಾರಾಟ ಮಾಡುವ ಬಾಟಲ್ ನೀರಿನಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿವೆ. ಈ ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿ, ಜ್ವರ, ಸುಸ್ತು ಮತ್ತು ವಿಶೇಷವಾಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆಯ ಮೂಲಗಳು ಎಚ್ಚರಿಸಿವೆ.

ಈ ಆಘಾತಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ, ಆಹಾರ ಇಲಾಖೆಯು ಕಳಪೆ ಗುಣಮಟ್ಟದ ನೀರು ಪೂರೈಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಜನರಲ್ಲಿ ಗೊಂದಲ ಸೃಷ್ಟಿಸಿ, ಆರೋಗ್ಯದ ಜೊತೆಗೆ ಚೆಲ್ಲಾಟವಾಡುವ ಈ ಬಾಟಲ್‌ಗಳ ''ಅಸಲಿ ಬಣ್ಣ''ವನ್ನು ಬಯಲಿಗೆಳೆಯಲು ಇಲಾಖೆ ತೀರ್ಮಾನಿಸಿದೆ. ಜೊತೆಗೆ, ಗ್ರಾಹಕರು ಖರೀದಿಸುವ ಮುನ್ನ ಬಾಟಲ್ ನೀರಿನ ಗುಣಮಟ್ಟ ಪರಿಶೀಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. 

ಇಲಾಖೆಯ ದಿಟ್ಟ ಕ್ರಮ

ಇಡ್ಲಿ, ಗೋಬಿ ಸೇರಿದಂತೆ ಅನೇಕ‌ ಆಹಾರಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಜತೆಗೆ, ಆಹಾರಗಳ ತಯಾರಿ ಹಾಗೂ ಮಾರಾಟ ಸಂಬಂಧ ಕೆಲವೊಂದು ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಆ ನಂತರ ಕುಡಿಯುವ ನೀರು ಸುರಕ್ಷಿತವೇ ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಆಘಾತಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ಸರ್ಕಾರ ಇನ್ನೇನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Tags:    

Similar News