Federal Ground Report | ಕೊಳವೆ ಬಾವಿ ನೀರಲ್ಲೂ ಕ್ಯಾನ್ಸರ್ ಅಂಶ; ಜೀವಕಂಟಕವಾದ ಕಲುಷಿತ ಕೆರೆ ನೀರು!

ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಕೊಳವೆಬಾವಿಗಳ ನೀರಿನ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಕ್ಯಾಡ್ಮಿಯಂ ಮತ್ತು ಸೀಸ ಅಪಾಯಕಾರಿ ಪ್ರಮಾಣದಲ್ಲಿ ಪತ್ತೆಯಾಗಿವೆ;

Update: 2024-12-16 08:13 GMT
ದೊಡ್ಡ ತುಮಕೂರು ಕೆರೆಯ ದುಸ್ಥಿತಿ

ಗ್ರಾಮೀಣ ಜನರ ಜೀವನಾಡಿಯಂತಿರುವ ಕೆರೆಗಳು ಈಗ ಕಲುಷಿತಗೊಂಡು ಜನ-ಜಾನುವಾರು ಜೀವಕ್ಕೆ ಮಾರಕವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಎರಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕೆರೆಗಳು ಕಲುಷಿತಗೊಂಡು ಸುತ್ತಲಿನ ಗ್ರಾಮಗಳ ಜನರಲ್ಲಿ ಮಾರಣಾಂತಿಕ ರೋಗಗಳನ್ನು ಹರಡುತ್ತಿವೆ.

ಇಲ್ಲಿನ ದೊಡ್ಡತುಮಕೂರು ಹಾಗೂ ಚಿಕ್ಕತುಮಕೂರು ಕೆರೆಗಳಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಹಾಗೂ ನಗರಸಭೆಯ ಒಳಚರಂಡಿ ನೀರು ಸೇರಿ ಕೆರೆಯ ಒಡಲು ವಿಷವಾಗಿದೆ. ಈ ಕೆರೆಗಳ ಕಲುಷಿತ ನೀರು ಅಂತರ್ಜಲವನ್ನೂ ಕಲುಷಿತಗೊಳಿಸಿದ್ದು, ಸುತ್ತಮುತ್ತಲ ಕೊಳವೆಬಾವಿಗಳಲ್ಲಿ ಕೂಡ ಅಪಾಯಕಾರಿ ರಾಸಾಯನಿಕಯುಕ್ತ ನೀರು ಬರುತ್ತಿದೆ.

ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಕೊಳವೆಬಾವಿಗಳ ನೀರಿನ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಕ್ಯಾಡ್ಮಿಯಂ ಮತ್ತು ಸೀಸ ಅಪಾಯಕಾರಿ ಪ್ರಮಾಣದಲ್ಲಿ ಪತ್ತೆಯಾಗಿವೆ.

2023 ಜುಲೈ ತಿಂಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ದೊಡ್ಡತುಮಕೂರು ಗ್ರಾಮ ಹಾಗೂ ಮಜರಾ ಹೊಸಹಳ್ಳಿ ಪಂಚಾಯ್ತಿಯ ಕರೀಂ ಸೊಣ್ಣೇನಹಳ್ಳಿಯಲ್ಲಿರುವ ಎರಡು ಬೋರ್‌ವೆಲ್‌ಗಳಲ್ಲಿ ಕ್ಯಾಡ್ಮಿಯಂ, ಸೀಸ ಪತ್ತೆಯಾಗಿತ್ತು. ಉಳಿದ ಬೋರ್‌ವೆಲ್‌ಗಳಲ್ಲಿಇಕೋಲಿ, ಫ್ಲೋರೈಡ್‌ ಹಾಗೂ ಗಡುಸು ನೀರು ಪೂರೈಕೆಯಾಗುತ್ತಿದ್ದು, ಆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ. 

ಬೋರ್‌ವೆಲ್‌ ನೀರಿನ ಪರೀಕ್ಷಾ ವರದಿ

ಕೈಗಾರಿಕೆಗಳು ಹೊರಬಿಡುವ ತ್ಯಾಜ್ಯ ನೀರು, ಹೊಗೆಯಲ್ಲಿ ಕಾರ್ಸಿನೋಜೆನ್ಸ್‌ (ಕ್ಯಾನ್ಸರ್‌ಕಾರಕ ಅಂಶ) ಇರುತ್ತವೆ. ತ್ಯಾಜ್ಯ ನೀರು ಕೆರೆಗೆ ಸೇರಿ ಇತರೆ ರಾಸಾಯನಿಕಗಳೊಂದಿಗೆ ಸಂಯೋಜನೆಗೊಳ್ಳುತ್ತವೆ. ಕ್ಯಾಡ್ಮಿಯಂ ಕೂಡ ಅಂತರ್ಜಲ ಸೇರಿ ಕೊಳವಿಬಾವಿಗಳ ಮೂಲಕ ಮಾನವ ದೇಹ ಸೇರುತ್ತಿದೆ. ಈ ಅಪಾಯಕಾರಿ ರಾಸಾಯನಿಕಗಳು ನಿಯಮಿತವಾಗಿ ದೇಹ ಸೇರುವುದರಿಂದ ಕ್ಯಾನ್ಸರ್ ಕಾಯಿಲೆ ರೂಪುಗೊಳ್ಳಲಿದೆ ಎಂದು ಕ್ಯಾನ್ಸರ್ ತಜ್ಞ ಡಾ. ಟಿ.ಎಚ್.ಆಂಜಿನಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಬ್ಯಾಟರಿ, ಸಿಮೆಂಟ್, ಕಬ್ಬಿಣಕ್ಕೆ ಹೊಳಪು ನೀಡುವ ಹಾಗೂ ಸಂಯುಕ್ತ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಕ್ಯಾಡ್ಮಿಯಂ ಹೆಚ್ಚು ಬಳಸಲಾಗುತ್ತಿದೆ.  

ಕೆರೆಯಲ್ಲಿ ಹೆಚ್ಚು ರಾಸಾಯನಿಕ ಪತ್ತೆ

ಚಿಕ್ಕತುಮಕೂರು ಕೆರೆಯ ನೀರಿನಲ್ಲಿ ಸಾಕಷ್ಟು ರಾಸಾಯನಿಕಗಳು ಇರುವುದು ಕೂಡ ನೀರಿನ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಪ್ರತಿ ಲೀಟರ್ ನೀರಿನಲ್ಲಿ ಕೆಮಿಕಲ್‌ ಆಕ್ಸಿಜನ್‌ 12750ಮಿಲಿ ಗ್ರಾಂ ರಷ್ಟಿದೆ. ಇದರ ಒಪ್ಪಿತ ಪ್ರಮಾಣ 250ಮಿಲಿ ಗ್ರಾಂ ಇರಬೇಕಿತ್ತು. ಅಂತೆಯೇ ಬಯೋ ಕೆಮಿಕಲ್‌ ಆಕ್ಸಿಜನ್‌ 4100 ಎಂ.ಜಿ ಇದೆ . ಇದು 30 ಎಂ.ಜಿ ಇರಬೇಕಿತ್ತು. ಅಮೋನಿಯಂ 487 ಎಂ ಜಿ ಇದೆ. ಇದು 50 ರಷ್ಟು ಇರಬೇಕಿತ್ತು. ಫ್ಲೋರೈಡ್‌ 9.12 ಎಂ ಜಿ ಇದೆ. ಇದು 0.1 ಎಂ ಜಿ ಇರಬೇಕಿತ್ತು. ಸೀಸದ ಅಂಶ 3.05 ಎಂ ಜಿ ಇದೆ. ಇದೂ ಕೂಡ 0.1 ಇರಬೇಕಿತ್ತು ಎಂಬುದು 2022ರಲ್ಲಿ ಖಾಸಗಿ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ದೊಡ್ಡತುಮಕೂರು ಕೆರೆಯ ನೀರು ಕೂಡ ಇದೇ ರೀತಿಯ ರಾಸಾಯನಿಕಗಳಿಂದ ಕಲುಷಿತಗೊಂಡಿದೆ. 

ಚಿಕ್ಕತುಮಕೂರು ಕೆರೆಯ ನೀರಿನಲ್ಲಿರುವ ರಾಸಾಯನಿಕಗಳ ವರದಿ

ಡೈಯಿಂಗ್ ಕಾರ್ಖಾನೆಗಳ ನೀರು ಕೆರೆಗೆ

ದೊಡ್ಡಬಳ್ಳಾಪುರದಲ್ಲಿ ಡೈಯಿಂಗ್(ಬಣ್ಣ) ಕಾರ್ಖಾನೆಗಳು ರಾಸಾಯನಿಕ ಬಣ್ಣದ ನೀರನ್ನು ರಾಜಕಾಲುವೆಗೆ ಬಿಡುತ್ತಿದ್ದು, ಇದು ನೇರವಾಗಿ ಕೆರೆಗಳನ್ನು ಸೇರುತ್ತಿದೆ. ಅನಧಿಕೃತ ರೇಷ್ಮೆ ನೂಲು ಕಾರ್ಖಾನೆಗಳ ವಿರುದ್ಧ ನಗರಸಭೆ ಸಾಕಷ್ಟು ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸ್‌ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡ ವಸಂತ್ ಕುಮಾರ್ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.

ಇನ್ನು ವೀರಾಪುರ ಕೆರೆಯ ದಂಡೆಯ ಮೇಲೆ ಒಟ್ಟು 27 ಕೈಗಾರಿಕೆಗಳಿವೆ. ಇವು ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೇ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳಲ್ಲಿ ಹರಿಸುತ್ತಿವೆ ಎಂದು ಆರೋಪಿಸಿದರು.

ದೊಡ್ಡತುಮಕೂರು ಗ್ರಾಮಸ್ಥರು ಕೆರೆ ಸಂರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು

ಗ್ರಾಮಸ್ಥರಲ್ಲಿ ಕಾಯಿಲೆಪೀಡಿತರೇ ಹೆಚ್ಚು

ಚಿಕ್ಕತುಮಕೂರು ಹಾಗೂ ದೊಡ್ಡತುಮಕೂರು ಗ್ರಾಮದಲ್ಲಿ ಕೆರೆ ನೀರು ಕಲುಷಿತಗೊಂಡಿರುವ ಪರಿಣಾಮವನ್ನು ಜನರು ಎದುರಿಸುತ್ತಿದ್ದಾರೆ. ಚಿಕ್ಕತುಮಕೂರು ಗ್ರಾಮದಲ್ಲಿ ಕೆರೆಯ ದುರ್ವಾಸನೆಯಿಂದ ಜನ ಬೇಸತ್ತಿದ್ದಾರೆ. ಆ ಕೆರೆಯ ಆಸುಪಾಸಿನ ಪ್ರದೇಶದ ಬೋರ್ ವೆಲ್ ನೀರು ಸೇವನೆಯಿಂದ ಹಲವರಲ್ಲಿ ಕೈ- ಕಾಲು ಸೆಳೆತ, ಚರ್ಮಕಾಯಿಲೆ ಹಾಗೂ ಕ್ಯಾನ್ಸರ್‌ ಕಾಣಿಸಿಕೊಂಡಿದೆ.

ʼನಾವು ಸಣ್ಣವರಿದ್ದಾಗ ಕೆರೆ ನೀರನ್ನೇ ಕುಡಿಯುತ್ತಿದ್ದೆವು. ಈಗ ಕೆರೆ ಸಂಪೂರ್ಣ ಕಲುಷಿತವಾಗಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಬೋರ್ ವೆಲ್ ನೀರು ಕೂಡ ಕೆಟ್ಟುಹೋಗಿದೆ. ಕಲುಷಿತ ನೀರು ಕುಡಿದ ಜನ ಸಹಜವಾಗಿ ನಡೆದಾಡಲೂ ಪ್ರಯಾಸಪಡುವ ಪರಿಸ್ಥಿತಿ ಇದೆ. ತೋಟದಲ್ಲಿ ನೀರು ಹಾಯಿಸುವ ವೇಳೆ ನೀರಿನಲ್ಲಿ ನಿಂತುಕೊಳ್ಳುವುದರಿಂದ ಚರ್ಮ ಸುಲಿಯುತ್ತಿದೆʼ ಎಂದು ಚಿಕ್ಕತುಮಕೂರು ಗ್ರಾಮದ ದೊಡ್ಡಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ಗ್ರಾಮದ ಜನರು ಎದುರಿಸುತ್ತಿರುವ ಬವಣೆಗಳ ಕುರಿತು ವಿವರಿಸಿದರು.

ಕೆರೆ ಸಂರಕ್ಷಣೆಗಾಗಿ ತೆಪ್ಪದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು

ಕಾರ್ಯನಿರ್ವಹಿಸದ ಎಸ್ ಟಿ ಪಿ ಘಟಕ

ಚಿಕ್ಕತುಮಕೂರು ಸಮೀಪ ದಶಕದ ಹಿಂದೆಯೇ ತ್ಯಾಜ್ಯ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ನಿರ್ಮಿಸಲಾಗಿದೆ. ಆದರೆ, ಅದು ಈಗ ನಿಷ್ಕ್ರಿಯ ಸ್ಥಿತಿಯಲ್ಲಿದೆ. ಎಸ್‌ಟಿಪಿ ಘಟಕದವರೆಗೆ ನಗರಸಭೆ ನಿರ್ಮಿಸಿರುವ ಮ್ಯಾನ್‌ ಹೋಲ್‌ಗಳು ಹಾಳಾಗಿ ತ್ಯಾಜ್ಯ ನೀರು ಚಿಕ್ಕತುಮಕೂರು ಕೆರೆಗೆ ಹರಿಯುತ್ತಿದೆ. 2022 ರಲ್ಲಿ ಚಿಕ್ಕತುಮಕೂರು ಹಾಗೂ ನಾಗರಕೆರೆಗೆ ತ್ಯಾಜ್ಯ ನೀರು ಬಿಡದಂತೆ ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ಹಸಿರುಪೀಠ ರಚಿಸಿದ್ದ ಜಂಟಿ ಸಮಿತಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಆದರೂ, ನ್ಯಾಯಾಲಯದ ಆದೇಶಕ್ಕೆ ಜಿಲ್ಲಾಡಳಿತ ಕಿಮ್ಮತ್ತು ಕೊಡುತ್ತಿಲ್ಲ ಎಂದು ವಕೀಲರಾದ ಸತೀಶ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಹಸಿರು ನ್ಯಾಯಪೀಠದ ಸೂಚನೆ ಬಳಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆಗಳನ್ನು ಪರಿಶೀಲನೆ ನಡೆಸಿತ್ತು. 71ಎಕರೆ ವಿಸ್ತೀರ್ಣದ ಚಿಕ್ಕತುಮಕೂರು ಕೆರೆ, 295 ಎಕರೆ ವಿಸ್ತೀರ್ಣದ ದೊಡ್ಡತುಮಕೂರು ಕೆರೆ ಸಂಪೂರ್ಣ ಕಲುಷಿತವಾಗಿದೆ. ತ್ವರಿತವಾಗಿ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು. ಆದರೆ ಜಿಲ್ಲಾಡಳಿತ ಮಾತ್ರ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ದೂರಿದರು.

ಇನ್ನು ಹಾಲಿ ಇರುವ ಎಸ್‌ಟಿಪಿ ಘಟಕವನ್ನೇ ಮೇಲ್ದರ್ಜೆಗೇರಿಸಿ, ಎರಡು ಹಂತದ ನೀರಿನ ಶುದ್ಧೀಕರಿಸುವ ಮಾತುಗಳು ಕೇಳಿಬರುತ್ತಿವೆ. ಆದರೆ, ಎರಡೂ ಪಂಚಾಯ್ತಿಗಳ ಜನರು, ನಮಗೆ ಎರಡನೇ ಹಂತದ ಶುದ್ಧೀಕರಣದ ಬದಲು ಮೂರನೇ ಹಂತದ ಶುದ್ಧೀಕರಣ ಘಟಕ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. 

ಚಿಕ್ಕತುಮಕೂರು ಕೆರೆಯ ದುಸ್ಥಿತಿ

ದೂರು ಕೊಟ್ಟರೂ ಸ್ಪಂದಿಸದ ಅಧಿಕಾರಿಗಳು

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ರಾಜಕಾಲುವೆಗೆ ರಾಸಾಯನಿಕ ನೀರು ಹರಿಸುತ್ತಿವೆ. ಕೆಲ ಕಾರ್ಖಾನೆಗಳು ಟ್ಯಾಂಕರ್‌ ಮೂಲಕ ರಾಸಾಯನಿಕ ತ್ಯಾಜ್ಯದ ನೀರನ್ನು ಖಾಲಿ ಜಾಗಗಳಲ್ಲಿ ತಂದು ಬಿಡುತ್ತಿವೆ. ಈ ಬಗ್ಗೆ ಸಾಕ್ಷ್ಯಗಳ ಸಮೇತ ದೂರು ನೀಡಿದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಲವು ಕಾರ್ಖಾನೆಗಳಿಗೆ ಕಾಟಾಚಾರದ ನೋಟಿಸ್‌ ಕೊಟ್ಟು ಕೈ ತೊಳೆದುಕೊಂಡಿದೆ. ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ ಎಂದು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣೆ ವೇದಿಕೆ ಮುಖಂಡರು ಆರೋಪಿಸಿದ್ದಾರೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆರು ಕೈಗಾರಿಕಾ ವಲಯಗಳಿವೆ. 52 ಕಾರ್ಖಾನೆಗಳು ಕೆಂಪು ಪಟ್ಟಿಯಲ್ಲಿವೆ. ಐದು ಕಾರ್ಖಾನೆಗಳು ʼ17ಕೆಟಗರಿʼ( ಹೆಚ್ಚು ಮಾಲೀನ್ಯಕಾರಿ ಕಾರ್ಖಾನೆಗಳು) ಯಲ್ಲಿವೆ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ನೀಡಿದ್ದರೂ, ಅಂತಹ ಕಾರ್ಖಾನೆಗಳ ವಿರುದ್ಧ ಕ್ರಮ ಮಾತ್ರ ಜರುಗಿಸಿಲ್ಲ ಎಂದು ಅವರು ದೂರಿದ್ದಾರೆ.  

ಬೆಂಗಳೂರಿನ ವೃಷಾಭಾವತಿ ಕೊಳಚೆ ನೀರನ್ನು ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆ ಹೆಸರಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಯೋಜನೆಯಲ್ಲಿ ಎರಡು ಹಂತದ ಶುದ್ಧೀಕರಣ ಮಾಡಿ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ಈ ಹಂತದ ಶುದ್ಧೀಕರಿಸಿದ ನೀರಿನಲ್ಲೂ ರಾಸಾಯನಿಕಗಳಿವೆ. ಜೊತೆಗೆ ಬಳಕೆಗೂ ಯೋಗ್ಯವಾಗಿಲ್ಲ ಎಂಬುದು ಅಧ್ಯಯನದಿಂದ ಕಂಡು ಬಂದಿದೆ. ಹಾಗಾಗಿ ಮೂರನೇ ಹಂತದ ಶುದ್ದೀಕರಣ ಅಗತ್ಯ ಎಂದು ಶಾಶ್ವತ ನೀರಾವರಿ ಹೋರಾಟ ವೇದಿಕೆ ಅಧ್ಯಕ್ಷ ಆಂಜನೇಯ ರೆಡ್ಡಿ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.

ಈಡೇರದ ಭರವಸೆ

ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವಂತೆ ಮೂರು ವರ್ಷದಿಂದ ಪ್ರತಿಭಟನೆ ನಡೆಯುತ್ತಿದೆ. ಚುನಾವಣೆ ಬಹಿಷ್ಕಾರ, ಜಿಲ್ಲಾಧಿಕಾರಿ ಕಚೇರಿ ಸುತ್ತ ಉರುಳು ಸೇವೆ, ಉಪವಾಸ ಸತ್ಯಾಗ್ರಹ, ತೆಪ್ಪದಲ್ಲಿ ಕೆರೆಗೆ ತೆರಳಿ ಪ್ರತಿಭಟನೆ ಸೇರಿದಂತೆ ಹಲವು ರೀತಿಯಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟ ನಡೆಸಿದೆ. ಚುನಾವಣೆ ಬಹಿಷ್ಕಾರದಿಂದ ಹೆದರಿದ್ದ ಜಿಲ್ಲಾಡಳಿತ ತಾತ್ಕಾಲಿಕವಾಗಿ ಚಿಕ್ಕಬಳ್ಳಾಪುರದ ಜಕ್ಕಲಮಡಗು ಜಲಾಶಯದಿಂದ ಗ್ರಾಮಗಳಿಗೆ ತಲಾ ಒಂದು ಟ್ಯಾಂಕರ್‌ ನೀರು ಪೂರೈಸುತ್ತಿದೆ. ಆದರೆ, ಇಡೀ ಗ್ರಾಮಕ್ಕೆ ಒಂದು ಟ್ಯಾಂಕರ್‌ ನೀರು ಸಾಕಾಗುವುದಿಲ್ಲ ಎಂದು ಮತ್ತೆ ಹೋರಾಟ ತೀವ್ರಗೊಳಿಸಲಾಗಿತ್ತು.

ಆಗ ಕಾಡನೂರು ಸಮೀಪ 10 ಕೊಳವೆಬಾವಿಗಳನ್ನು ಕೊರೆಸಿ, ಪೈಪ್‌ಲೈನ್‌ ಮೂಲಕ ಈ ಎರಡೂ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೂ ಅದು ಈಡೇರಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್‌, ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಒಟ್ಟು 10 ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಕೊಳವೆಬಾವಿ ಕೊರೆಸಲಿದೆ. ಈಗಾಗಲೇ ಜಾಗ ಗುರುತಿಸಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

Tags:    

Similar News