ಧರ್ಮಸ್ಥಳದಲ್ಲಿ ಮೂಳೆ ಪತ್ತೆ ಪ್ರಕರಣ : ವಿದೇಶ ಮಾದರಿ ಪರೀಕ್ಷೆಗೆ ಮುಂದಾದ ಎಸ್‌ಐಟಿ
ಧರ್ಮಸ್ಥಳದಲ್ಲಿ ಪತ್ತೆಯಾದ ಮೂಳೆಗಳನ್ನು ವಿದೇಶಿ ಮಾದರಿ ಪರೀಕ್ಷೆ ನಡೆಸಲು ಎಸ್‌ಐಟಿ ಚಿಂತನೆ ನಡೆಸಿದೆ. ಈ ಪರೀಕ್ಷೆ ದೇಶದಲ್ಲಿಯೇ ಮೊದಲು ಎಂದು ಹೇಳಲಾಗಿದೆ.;
ಧರ್ಮಸ್ಥಳದಲ್ಲಿ ಪತ್ತೆಯಾದ ಮೂಳೆಗಳ ರಹಸ್ಯವನ್ನು ಭೇದಿಸುವುದು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಮಾದರಿಯ ವೈಜ್ಞಾನಿಕ ಪರೀಕ್ಷೆ ನಡೆಸಲು ಗಂಭೀರವಾಗಿ ಚಿಂತನೆ ನಡೆಸಿದೆ. ಒಂದು ವೇಳೆ ವಿದೇಶಿ ಮಾದರಿಯ ಪರೀಕ್ಷೆ ನಡೆಸಿದರೆ ದೇಶದಲ್ಲಿಯೇ ಮೊದಲ ಬಾರಿಗೆ ಅಪರಾಧ ಪ್ರಕರಣ ಕುರಿತು ನಡೆಸಿದ ಪರೀಕ್ಷೆಯಾಗಲಿದೆ.
ಅಸ್ಪಾರ್ಟಿಕ್ ಅಮಿನೋ ಆ್ಯಸಿಡ್ ರೆಸಮೈಜಸನ್, ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೋಫಿ ಮತ್ತು ರಾಮನ್ ಸ್ಪೆಕ್ಟ್ರೋಸ್ಕೋಫಿ ಪರೀಕ್ಷೆಗಳಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಶಿಫಾರಸ್ಸು ಮೇರೆಗೆ ಈ ಪರೀಕ್ಷೆಗಳನ್ನು ನಡೆಸಲು ಎಸ್‌ಐಟಿ ಯೋಚನೆ ಮಾಡಿದೆ. ಎಫ್‌ಎಸ್‌ಎಲ್ ಅಧಿಕಾರಿಗಳು ನೀಡಿದ ಶಿಫಾರಸ್ಸಿನಂತೆ ವಿದೇಶದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ನೆರವು ಪಡೆಯವು ಬಗ್ಗೆ ಎಸ್‌ಐಟಿ ಗಂಭೀರವಾಗಿ ಚಿಂತನೆ ನಡೆಸಿದೆ. ಇದಕ್ಕೆ ಸರ್ಕಾರದ ಅನುಮತಿ ಬೇಕಾಗಿದೆ. ವಿದೇಶಿ ಮಾದರಿಯ ಪರೀಕ್ಷೆ ನಡೆಸಲು ನಿರ್ಧರಿಸಿದರೆ ಸರ್ಕಾರದ ಅನುಮತಿ ಪಡೆಯಲಾಗುವುದು ಎಂದು ಮೂಲಗಳು ಹೇಳಿವೆ.
.ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟಿರುವ ಬಗ್ಗೆ ಅಪರಿಚಿತ ವ್ಯಕ್ತಿ ನೀಡಿದ ದೂರಿನ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಗುಂಡಿಗಳನ್ನು ಅಗೆಯುತ್ತಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಆರನೇ ಪಾಯಿಂಟ್‌ನಲ್ಲಿ ಆಸ್ಥಿಪಂಜರ ಲಭ್ಯವಾಗಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದು ಪುರುಷನ ಮೂಳೆಗಳು ಎಂಬುದು ಖಚಿತವಾಗಿದೆ. ಆದರೆ, ಯಾವ ಸಮಯದಲ್ಲಿ ಹೂತು ಹಾಕಲಾಗಿದೆ ಎಂಬುದು ಪರೀಕ್ಷೆಯಲ್ಲಿ ಗೊತ್ತಾಗಿಲ್ಲ. ಈ ಕಾರಣಕ್ಕಾಗಿ ವಿದೇಶಿ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.
ವಿದೇಶಿ ಮಾದರಿ ಪರೀಕ್ಷೆಗಳಿಂದ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅಂಶಗಳನ್ನು ಆಧರಿಸಿ ಮೃತದೇಹ ಯಾವಾಗ ಹೂತು ಹಾಕಲಾಯಿತು ಹಾಗೂ ಆ ವ್ಯಕ್ತಿ ಮೃತಪಟ್ಟಿದ್ದು ಯಾವಾಗ ಎಂಬ ಅಂಶ ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಮಾದರಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ. ಈ ಪರೀಕ್ಷೆಯು ದೇಶದಲ್ಲಿಯೇ ಎಲ್ಲಿಯೂ ನಡೆದಿಲ್ಲ. ರಾಜ್ಯದಲ್ಲಿ ನಡೆದರೆ ಅದು ದೇಶದಲ್ಲಿಯೇ ಮೊದಲ ಬಾರಿ ಎಂಬ ದಾಖಲೆಯಾಗಲಿದೆ.
ಅಪರಿಚಿತ ವ್ಯಕ್ತಿ ತೋರಿಸಿದ ಸ್ಥಳಗಳನ್ನು ಅಗೆಯಲಾಗಿದೆ. ಈವರೆಗೆ 17ಸ್ಥಳಗಳಲ್ಲಿ ಅಗೆಯಲಾಗಿದ್ದು, ಆರನೇ ಸ್ಥಳದಲ್ಲಿ ಮಾತ್ರ ಆಸ್ಥಿಪಂಜರಗಳು ಲಭ್ಯವಾಗಿವೆ. ಧರ್ಮಸ್ಥಳದಲ್ಲಿ ನಡೆದಿರುವ ಘಟನೆಗಳಿಗೆ ಪತ್ತೆಯಾದ ಆಸ್ಥಿಪಂಜರವೇ ಪ್ರಮುಖ ಸಾಕ್ಷಿಯಾಗಿದೆ. ಈ ಹಿನ್ನೆಲಯಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.