ಚಾಮುಂಡೇಶ್ವರಿ ಕಾಲ್ಪನಿಕವಾದರೆ ಮಹಿಷಾಸುರ ಮತ್ತೇನು?- ಪ್ರೊ-ಭಗವಾನ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ
ಪ್ರೊ. ಭಗವಾನ್ ಅವರು ಹೆಸರಿಗೆ ತಕ್ಕಂತೆ ಭಗವಂತನ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಗವಂತನ ಮೇಲೆ ನಂಬಿಕೆ ಎಲ್ಲ ಅಂದರೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೇ ಅಪಾರ್ಥವಾಗಿದೆ;
ಪ್ರೊ.ಕೆ. ಎಸ್ ಭಗವಾನ್ ಅವರು ಚಾಮುಂಡೇಶ್ವರಿ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರ ಮಾತಿಗೆ ಯಾರೂ ಮಹತ್ವ ಕೊಟ್ಟಿಲ್ಲ, ಕೊಡಲೂಬಾರದು ಎಂದು ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೊ. ಭಗವಾನ್ ಅವರು ಹೆಸರಿಗೆ ತಕ್ಕಂತೆ ಭಗವಂತನ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಗವಂತನ ಮೇಲೆ ನಂಬಿಕೆ ಎಲ್ಲ ಅಂದರೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೇ ಅಪಾರ್ಥವಾಗಿದೆ ಎಂದು ವ್ಯಂಗ್ಯವಾಡಿದರು.
ಒಂದು ಧರ್ಮದ ವಿರುದ್ಧ ಮಾತನಾಡುವುದು ಮಾನವೀಯತೆ ಅಲ್ಲ. ಚಾಮುಂಡೇಶ್ವರಿ ದೇವಿ ಕಾಲ್ಪನಿಕ ಅಂತ ಕೆಲವರು ಬೊಬ್ಬೆ ಹೊಡೆಯುತ್ತಾರೆ. ಚಾಮುಂಡೇಶ್ವರಿ ಕಾಲ್ಪನಿಕ ಅಂದರೆ, ಮಹಿಷಾಸುರನು ಕಾಲ್ಪನಿಕವಲ್ಲವೇ?ಮ ಇವರೇಕೆ ಮಹಿಷಾಸುರನನ್ನು ಆರಾಧಿಸಬೇಕು. ಇಂತಹ ದ್ವಂದ್ವ ಅಭಿಪ್ರಾಯಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಭಗವಾನ್ ಅವರಿಗೆ ವಾಸ್ತವಾಂಶ ಗೊತ್ತಿದ್ದರೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶ್ರೀರಾಮನ ಬಗ್ಗೆ ಹಿಂದೆ ಏನು ಮಾತಾಡಿದ್ದರು ಎಂಬುದನ್ನು ಜನ ಮರೆತಿಲ್ಲ. ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಇಂತಹ ಶಕ್ತಿಗಳ ಕುರಿತು ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೈಸೂರಿನಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಸೆ.29 ರಂದು ಮಹಿಷಾ ಮಂಡಲೋತ್ಸವ ಆಚರಿಸಲಾಯಿತು. ಇಲ್ಲಿನ ಟೌನ್ ಹಾಲ್ ಭವನದಲ್ಲಿ ಸಭಾ ಕಾರ್ಯಕ್ರಮ ಮುಗಿಸಿ, ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ತೆರಳಿದ್ದ ಗುಂಪನ್ನು ಪೊಲೀಸರು ತಡೆದರು. ಜಿಲ್ಲಾಡಳಿತ ಶನಿವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಚಾಮುಂಡಿ ಬೆಟ್ಟದ ಮೇಲೆ ನಿಷೇಧಾಜ್ಙೆ ಜಾರಿ ಮಾಡಿದ್ದರಿಂದ ಮಹಿಷ ದಸರಾ ಆಚರಣಾ ಸಮಿತಿಯು ಪುಷ್ಪಾರ್ಚನೆ ಮಾಡಲು ಅವಕಾಶ ನೀಡಿರಲಿಲ್ಲ.