ಮಂಡ್ಯದ ವಿಸಿ ನಾಲೆಯಲ್ಲಿ ಕಾರಿನೊಳಗೆ ಇಬ್ಬರು ಮಕ್ಕಳು ಸೇರಿ ಮೂವರ ಮೃತದೇಹ ಪತ್ತೆ

ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಕಾರದೊಂದಿಗೆ ವಿ.ಸಿ. ನಾಲೆಯಿಂದ ಕಾರು ಹಾಗೂ ಮೃತದೇಹಗಳನ್ನು ಮೇಲಕ್ಕೆ ಎತ್ತಲಾಗಿದ್ದು, ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದುಬಂದಿಲ್ಲ.;

Update: 2025-04-29 10:57 GMT

ಮಂಡ್ಯದ ವಿಸಿ ನಾಲೆಯಲ್ಲಿನ ಕಾರನ್ನು ಹೊರತೆಗೆಯುತ್ತಿರುವ ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಸಿ ನಾಲೆಯಲ್ಲಿ ಮಂಗಳವಾರ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರ ಮೃತದೇಹ ಪತ್ತೆಯಾಗಿವೆ. ಮೃತರನ್ನು ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಅವರ ಮಕ್ಕಳಾದ ಅದ್ವೈತ್‌ (8) ಹಾಗೂ ಅಕ್ಷತಾ (3) ಎಂದು ಗುರುತಿಸಲಾಗಿದೆ. 

ಕುಮಾರಸ್ವಾಮಿ ತಮ್ಮ ಮಕ್ಕಳೊಂದಿಗೆ ಏಪ್ರಿಲ್‌ 16ರಂದು ಬೆಂಗಳೂರಿನಿಂದ ಕೆ.ಆರ್‌. ನಗರಕ್ಕೆತೆರಳುತ್ತಿದ್ದರು. ನಂತರ ನಾಪತ್ತೆಯಾಗಿದ್ದರು. ಅವರ ಕುಟುಂಬದವರು ಏಪ್ರಿಲ್‌ 19ರಂದು ಕೆ.ಆರ್‌. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಕಾರದೊಂದಿಗೆ ವಿ.ಸಿ. ನಾಲೆಯಿಂದ ಕಾರು ಹಾಗೂ ಮೃತದೇಹಗಳನ್ನು ಮೇಲಕ್ಕೆ ಎತ್ತಲಾಗಿದೆ, ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆದ ಜಲ ಅವಘಡದಲ್ಲಿ 208 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ರಸ್ತೆಪಕ್ಕದಲ್ಲಿ ಹಾದು ಹೋಗಿರುವ ನಾಲೆಗಳು ವಾಹನ ಸವಾರರಿಗೆ ಸದಾ ಅಪಾಯವನ್ನು ಆಹ್ವಾನಿಸುವಂತಿವೆ. ಇದೇ ವರ್ಷ ಕಳೆದ ಫೆಬ್ರವರಿಯಲ್ಲಿ ಕಾರು ನಾಲೆಗೆ ಬಿದ್ದು ಮೂವರು ಮೃತಪಟ್ಟಿದ್ದರು.   

Tags:    

Similar News