5 ರೂ ಚಿಲ್ಲರೆ ಕೇಳಿದ್ದಕ್ಕೆ ಪ್ರಯಾಣಿಕನ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ!
ಐದು ರೂ ಚಿಲ್ಲರೆ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಬಸ್ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಘಟನೆ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.;
ಬಸ್‌ನಲ್ಲಿ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಚಿಲ್ಲರೆ ಕುರಿತಾಗಿ ಚರ್ಚೆಗಳಾಗುವುದು, ಜಗಳವಾಗುವುದು ಮಾಮೂಲಿ. ಈ ಚಿಲ್ಲರೆ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಬಸ್ ಕಂಡೆಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಐದು ರೂ ಚಿಲ್ಲರೆ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಬಸ್ ಕಂಡೆಕ್ಟರ್ ಆತನ ಮೇಲೆ ಹಲ್ಲೆ ನಡೆಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರತಹಳ್ಳಿಯ ರೈನ್‌ಬೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಂಡೆಕ್ಟರ್ ಅನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ಪ್ರಯಾಣಿಕ ಕೆ.ಆರ್ ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್ ತೆಗೆದುಕೊಂಡಿದ್ದ. ಟಿಕೆಟ್ ದರ 15 ರೂ. ಇತ್ತು. ಆತ 20 ರೂ. ಕೊಟ್ಟಿದ್ದ. ಬಾಕಿ 5 ರೂ. ವಾಪಸ್ ಕೇಳಿದ್ದಕ್ಕೆ ಕಂಡಕ್ಟರ್, ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಭಿನವ್ ರಾಜ್ ಎಂಬ ಯುವಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಬಸ್ಸಿನೊಳಗೆ ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “ಕಳೆದ ರಾತ್ರಿ ಬೆಂಗಳೂರಿನ ಮಾರತಹಳ್ಳಿಯ ರೈನ್‌ಬೋ ಆಸ್ಪತ್ರೆಯ ಬಳಿ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ನಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನನಗೆ ಚಿಲ್ಲರೆ ನೀಡಲು ಅಥವಾ ಯುಪಿಐ ಮೂಲಕ ಪಾವತಿಸಲು ನಿರಾಕರಿಸಿ, ಬಿಎಂಟಿಸಿ ಕಂಡಕ್ಟರ್ ನನ್ನ ಮೇಲೆ ಹಲ್ಲೆ ನಡೆಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ನಗರಕ್ಕೆ ಹೊಸಬನಾಗಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹಿಂಸಾತ್ಮಕ ಅಥವಾ ನಿಂದನೀಯವಾಗಿ ವರ್ತಿಸುವ ಕಂಡಕ್ಟರ್ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಅಭಿನವ್ ಚೇಂಜ್ ವಿಚಾರವಾಗಿ ಕೇಳುತ್ತಿದ್ದಾಗ ಕಂಡಕ್ಟರ್ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾರೆ. "ವೀಡಿಯೋ ರೆಕಾರ್ಡ್ ಮಾಡಿ ಯಾರಿಗೆ ಬೇಕೋ ಅವರಿಗೆ ತೋರಿಸು" ಎಂದು ಹೇಳಿ ಹಲ್ಲೆ ನಡೆಸಿದ್ದಾರೆ.
ಈ ಮಧ್ಯೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಂಡಕ್ಟರ್‌ನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. “ಡಿಪೋ 32 (ಸೂರ್ಯ ಸಿಟಿ) ನಿಂದ BMTC ಬಸ್ ಕಂಡಕ್ಟರ್ 500 DC/7 ಮಾರ್ಗದಲ್ಲಿ ಕರ್ತವ್ಯದಲ್ಲಿರುವಾಗ ಅಭಿನವ್ ರಾಜ್ ಎಂಬ ಹೆಸರಿನ ಪ್ರಯಾಣಿಕರೊಂದಿಗೆ 21:40 PM ಕ್ಕೆ ರೂ.5/- ಚೇಂಜ್‌ಗಾಗಿ ಅನುಚಿತವಾಗಿ ವರ್ತಿಸಿದ್ದಾರೆ. ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ, ದಿನಾಂಕ 08-08-2024 ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ" ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.