Waqf Asset Issue : ವಕ್ಫ್ ಆಸ್ತಿ ನೋಟಿಸ್ ವಿರುದ್ಧ ನ.4 ರಂದು ಬಿಜೆಪಿ ಪ್ರತಿಭಟನೆ
ಕೋಲಾರದ ಕೋಲಾರದಮ್ಮ ದೇವಸ್ಥಾನದ ಜಾಗಕ್ಕೂ ವಕ್ಫ್ ಬೋರ್ಡ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ. ಧಾರವಾಡ, ಬೆಳಗಾವಿ ಸೇರಿದಂತೆ ಎಲ್ಲ ಕಡೆ ದಾಖಲೆ ತಿದ್ದಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಆರ್. ಅಶೋಕ್ ತಿಳಿಸಿದರು.;
ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್ ನೋಟಿಸ್ ನೀಡಿರುವ ರಾಜ್ಯ ಸರ್ಕಾರ ಕ್ರಮ ಖಂಡಿಸಿ ನ.4 ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಿದ್ದು, ವಕ್ಫ್ ವಿವಾದವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ತೆಗೆಯುವಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಅನ್ನದಾತರಿಗೆ ಕನ್ನ ಹಾಕುವ ಕೆಲಸ ಜಮೀರ್ ಟೀಂ ಮತ್ತು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಭೂತ ಹಿಡಿದಿದೆ ಎಂದು ಕಿಡಿಕಾರಿದರು. (waqf board amendment)
ಕೋಲಾರದ ಕೋಲಾರದಮ್ಮ ದೇವಸ್ಥಾನದ ಜಾಗಕ್ಕೂ ವಕ್ಫ್ ಬೋರ್ಡ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ. ಧಾರವಾಡ, ಬೆಳಗಾವಿ ಸೇರಿದಂತೆ ಎಲ್ಲ ಕಡೆ ದಾಖಲೆ ತಿದ್ದಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಸರ್ಕಾರವೇ ರೈತರ ಭೂಮಿ ಕಬಳಿಸುತ್ತಿದೆ. ರೈತ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕು. ಇಲ್ಲದಿದ್ದರೆ ವ್ಯವಸಾಯಕ್ಕೂ ಭೂಮಿ ಇರದಂತಾಗುತ್ತದೆ. ಇಂದು ರೈತರ ಭೂಮಿ, ಮಠ ಮಂದಿರದತ್ತ ದೃಷ್ಟಿ ನೆಟ್ಟಿದ್ದಾರೆ, ಸಂಸತ್ತು ನಮ್ಮದೇ ಎಂದು ಮತಾಂಧರು ಹೇಳುತ್ತಿದ್ದಾರೆ. ತಲೆಕೆಟ್ಟವರು ನಾಳೆಯ ದಿನ ವಿಧಾನಸೌಧವೂ ನಮ್ಮದೇ ಎಂದರೂ ಆಶ್ಚರ್ಯ ಪಡಬೇಕಿಲ್ಲ. ರೈತರ ಹೆಸರು ಮರಳಿ ಪಹಣಿಯಲ್ಲಿ ಬರುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿಯವರು ಯಾವುದಾದರೂ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸಿದ್ದಾರಾ ಎಂಬ ಸಿಎಂ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹೋರಾಟ ಮಾಡದಿದ್ದರೆ ಮುಡಾ ಕೇಸ್ ಈ ಹಂತಕ್ಕೆ ಬರುತ್ತಿರಲಿಲ್ಲ. ಸಿಎಂ ವಿರುದ್ಧ 420 ದೂರು ದಾಖಲಾಗಿದೆ. ಇಡಿ ತನಿಖೆ ಚುರುಕುಗೊಳಿಸಿದೆ. ಇದೆಲ್ಲವೂ ಬಿಜೆಪಿ ಹೋರಾಟದ ಪರಿಣಾಮ ಆಗಿದೆ ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದರು.
ವಕ್ಫ್ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ರೈತರು ಈಗಾಗಲೇ ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಬಿಜೆಪಿ ಬೆಂಬಲಿಸಲಿದೆ. ರೈತರು ಬೀದಿಗೆ ಇಳಿಯುವಂತೆ ಮಾಡಿದ್ದು ಯಾರು? ನೋಟಿಸ್ ಕೊಟ್ಟ ಅಧಿಕಾರಿಗಳನ್ನು ಜೈಲಿಗೆ ಹಾಕಲು ಧಮ್ ಇದೆಯಾ ಎಂದು ಕಿಡಿಕಾರಿದರು.
ಶಕ್ತಿ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಉಚಿತ ಪ್ರಯಾಣ ಬೇಡ ಎಂದು ಮಹಿಳೆಯರು ಸಾರಿಗೆ ಸಚಿವರಿಗೆ ಫೋನ್ ಮಾಡದೇ ಡಿ.ಕೆ.ಶಿವಕುಮಾರ್ ಅವರಿಗೆ ಮಾಡಿದ್ದರಾ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಖಜಾನೆ ಖಾಯಿಯಾಘಿದೆ. ಹಾಗಾಗಿ ಗ್ಯಾರೆಂಟಿ ಯೋಜನೆಗಳ ವೆಚ್ಚ ಇಳಿಸಲು ಮುಂದಾಗಿದ್ದಾರೆ. ಬಡವರ ಶಾಪ ಸರ್ಕಾರಕ್ಕೆ ತಟ್ಟದೇ ಇರದು. ಅದ್ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಉಪಚುನಾವಣೆ ಎದುರಿಸುತ್ತಿದೆಯೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.