ಪತ್ರಕರ್ತೆ ವಿರುದ್ದ ಅವಹೇಳನ ಹೇಳಿಕೆ, ಆರ್.ವಿ. ದೇಶಪಾಂಡೆ ವಿರುದ್ಧ ಸೆ.4ಕ್ಕೆ ಬಿಜೆಪಿ ಪ್ರತಿಭಟನೆ

ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಹೇಳಿದ ಪ್ರಶ್ನೆಗೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಆಗ್ರಹಿಸಿದ್ದಾರೆ.;

Update: 2025-09-03 09:12 GMT

ಕಾಂಗ್ರೆಸ್‌ ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ

Click the Play button to listen to article

ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಪತ್ರಕರ್ತೆ ರಾಧಾ ಹೀರೇಗೌಡರ್​ ಬಗ್ಗೆ ಕೀಳು ಅಭಿರುಚಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಸೆ.4 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಹೇಳಿದ ಪ್ರಶ್ನೆಗೆ ಅವಮಾನಿಸಿರುವುದು ಖಂಡನೀಯ, ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ  ಹೆರಿಗೆ ಆಸ್ಪತ್ರೆಯನ್ನು ಯಾವಾಗ ನಿರ್ಮಿಸುತ್ತೀರಿ ಎಂದು ಆರ್.ವಿ. ದೇಶಪಾಂಡೆ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕರು, ತುಂಬಾ ಹಗುರವಾಗಿ ಮತ್ತು ಅವಮಾನದ ರೀತಿಯಲ್ಲಿ “ನಿನ್ನ ಹೆರಿಗೆ ಆಗುವ ವೇಳೆ  ಮಾಡಿಸುತ್ತೀನಿ” ಎಂದು ಹೇಳುವ ಮೂಲಕ ಕೀಳು ಅಭಿರುಚಿ ವ್ಯಕ್ತಪಡಿಸಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ. 

ದೇಶಪಾಂಡೆ ಹೇಳಿಕೆಗೆ ಸಾರ್ವಜನಿಕರ ಖಂಡನೆ

ಆರ್​ವಿ ದೇಶಪಾಂಡೆ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆಗಳು ವ್ಯಕ್ತಗೊಂಡಿವೆ.  2022ನೇ ಸಾಲಿನ ಅತ್ಯತ್ತಮ ಶಾಸಕ ಪ್ರಶಸ್ತಿ ಪುರಸ್ಕೃತರಾಗಿ, ಮಾಜಿ ಸಚಿವರಾಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ, ರಾಜ್ಯ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಯುತ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿರುವ ಹಿರಿಯ ಶಾಸಕರು ಈ ರೀತಿ ಮಾತನಾಡಿರುವುದು ದುರದೃಷ್ಟಕರ. ಶೀಘ್ರವೇ ಅವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.  

Tags:    

Similar News