Waqf Assets Dispute | ವಕ್ಫ್ ಆಸ್ತಿ ವಿವಾದ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತು.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಶುಕ್ರವಾರ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಿತು.
ಬೆಂಗಳೂರು, ಕಲಬುರಗಿ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಉಡುಪಿ ಸೇರಿದಂತೆ ಹಲವೆಡೆ ಗುರುವಾರ ‘ನಮ್ಮ ಭೂಮಿ, ನಮ್ಮ ಹಕ್ಕುʼ ಘೋಷಣೆಯಡಿ ಬಿಜೆಪಿ ಪ್ರತಿಭಟನೆ ನಡೆಸಿತು.
ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರೊಂದಿಗೆ ಜಮಾಯಿಸಿದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಸಚಿವ ಜಮೀರ್ ಅಹಮದ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದರು.
ವಿಶ್ವವಿಖ್ಯಾತ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಕ್ಫ್ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್ ಮಂಡಳಿ ರೈತರ ಜಮೀನನ್ನು ಆಕ್ರಮಿಸುತ್ತಿದೆ. ಕಾಂಗ್ರೆಸ್ ಅಧಿಕಾರ ಪಡೆಯುವ ರಾಜ್ಯಗಳಲ್ಲಿ ಮಿನಿ ಪಾಕಿಸ್ತಾನ ನಿರ್ಮಿಸುತ್ತಿದೆ. ವಿಧಾನಸೌಧ, ಲಾಲ್‌ಬಾಗ್ ಕೂಡ ನಮ್ಮದು ಎಂದು ಇವರು ಹೇಳುತ್ತಾರೆ. ಹೀಗಾಗಿ, ರಾಜ್ಯದಲ್ಲಿ ವಕ್ಫ್ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್ ಹೆಸರು ತೆಗೆದುಹಾಕಬೇಕು ಎಂದು ಆರ್ ಅಶೋಕ್ ಆಗ್ರಹಿಸಿದರು.
ರೈತರ ಜಮೀನಿನ ಮಾಲೀಕತ್ವವನ್ನು ರಾತ್ರೋರಾತ್ರಿ ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಿ ಕಾಂಗ್ರೆಸ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ರೈತರನ್ನು ರಾತ್ರೋರಾತ್ರಿ ಬೀದಿಗೆ ತಳ್ಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ದೇವಸ್ಥಾನದ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ. ಸಂತ್ರಸ್ತ ರೈತರ ಕುಂದುಕೊರತೆಗಳನ್ನು ದಾಖಲಿಸಲು ಬಿಜೆಪಿಯ ಮೂರು ತಂಡಗಳು ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ಸಂಚರಿಸಲಿವೆ ಎಂದು ವಿಜಯೇಂದ್ರ ಈ ಸಂದರ್ಭದಲ್ಲಿ ಘೋಷಿಸಿದರು.
ರಾಜ್ಯದ ವಿವಿಧೆಡೆ ಪ್ರತಿಭಟನೆ
ಮೈಸೂರಿನಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪಕ್ಷದ ನೂರಾರು ಕಾರ್ಯಕರ್ತರು ಮತ್ತು ರೈತರೊಂದಿಗೆ ಕೊಡಗಿನಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಬಿಜೆಪಿ ಹೋರಾಟದಲ್ಲಿ ಕಾಣಿಸಿಕೊಂಡರು. ಮಂಡ್ಯದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಚಿಕ್ಕೋಡಿಯ ಎ.ಸಿ ಕಚೇರಿ ಎದುರು ಸಂಪಾದನಾ ಚರಮೂರ್ತಿ ಮಠದ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯಿತು. ನಿಪ್ಪಾಣಿಯಲ್ಲಿ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
ಮಂಗಳೂರಿನಲ್ಲಿ ಟೌನ್ ಹಾಲ್ ಎದುರಿನ ಗಾಂಧಿ ಪ್ರತಿಮೆ ಎದುರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರಾಮನಗರದಲ್ಲಿ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.