Mysore MUDA Controversy | ನಿವೇಶನ ಹಿಂತಿರುಗಿಸಿದ ಬಿಜೆಪಿ ಶಾಸಕ; ಸಿಎಂಗೆ ಪತ್ರ ಬರೆದು ಮನವಿ
2020 ರಿಂದ ಅಕ್ರಮ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಂತಹ ಎಲ್ಲ ಅಕ್ರಮ ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಿ ಎಂದು ಶಾಸಕ ಶ್ರೀವತ್ಸ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ರೂಪದಲ್ಲಿ ನಿವೇಶನ ಪಡೆದವರಿಗೆ ಈಗ ತನಿಖೆಯ ಭೀತಿ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ವಾಪಸ್ ನೀಡಿದ ಬೆನ್ನಲ್ಲೇ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ಮುಡಾದಿಂದ ತಾವು ಪಡೆದಿದ್ದ ನಿವೇಶನಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಶಾಸಕರ ಪತ್ರಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದು, ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ವೇಳೆ ಸಿಎಂ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ತಾವು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ಹಿಂತಿರುಗಿಸಿದ್ದರು.
ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಳವಾದ ತನಿಖೆ ಆರಂಭಿಸಿದ್ದು, ಈಚೆಗೆ ಸಿಎಂ ಆಪ್ತ ರಾಕೇಶ್ ಪಾಪಣ್ಣ ನಿವಾಸದಲ್ಲಿ ಶೋಧ ನಡೆಸಿದ್ದರು.
ಮುಡಾ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಬದಲಿ ರೂಪದಲ್ಲಿ ನೀಡಲಾಗಿದ್ದ ನಿವೇಶನಗಳ ದಾಖಲೆಗಳಿಗಾಗಿ ಇಡಿ ಅಧಿಕಾರಿಗಳು ಹಲವೆಡೆ ಜಾಲಾಡಿದ್ದರು.
ಇದರ ಬೆನ್ನಲ್ಲೇ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಅವರು 2020ರಲ್ಲಿ 50:50 ಅನುಪಾತದಲ್ಲಿ ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಹಗರಣಕ್ಕೆ ಹೊಸ ತಿರುವು ನೀಡಿದೆ. ಮುಡಾದಿಂದ 50:50 ಅನುಪಾತದಲ್ಲಿ ನಿವೇಶನ ಪಡೆದ ಇತರರಿಗೂ ಢವ ಢವ ಶುರುವಾಗಿದೆ.
2020 ರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಟೇಶ್ ಅವಧಿಯಿಂದ ದಿನೇಶ್ ಅವಧಿಯವರೆಗೆ ಅಕ್ರಮ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಂತಹ ಎಲ್ಲ ಅಕ್ರಮ ನಿವೇಶನಗಳ ಆದೇಶಗಳನ್ನು ಸಾರ್ವಜನಿಕರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ರದ್ದುಗೊಳಿಸಿ ನಿವೇಶನ ಹಿಂಪಡೆಯಲು ಸೂಕ್ತ ಆದೇಶ ನೀಡಬೇಕು ಎಂದು ಶಾಸಕ ಶ್ರೀವತ್ಸ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದ ತಾಂತ್ರಿಕ ಸಮಿತಿಯ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿಗೊಳಿಸಬೇಕು. ಅಕ್ರಮ ನಿವೇಶನಗಳ ಬಗ್ಗೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿ/ ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಆಸ್ತಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ ಆಸ್ತಿಗಳು ಎಂದು ಇಸಿಯಲ್ಲಿ ದಾಖಲಿಸಬೇಕು. ಮುಡಾದಿಂದ ಪಡೆದಿರುವ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಸದಂತೆ ಆದೇಶಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.