ವಿಧಾನ ಪರಿಷತ್ ಚುನಾವಣೆಗೂ ಮೈತ್ರಿ ಮುಂದುವರಿಕೆ: ಬಿಎಸ್‌ವೈ

ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತದೆ. ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.;

Update: 2024-05-11 13:15 GMT
ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ
Click the Play button to listen to article

ಮೈಸೂರು: ವಿಧಾನ ಪರಿಷತ್‌ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತದೆ. ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಶನಿವಾರ (ಮೇ 11) ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜೆಡಿಎಸ್‌ಗೆ 2 ಸ್ಥಾನ ಬಿಟ್ಟುಕೊಟ್ಟು ನಾವು 4 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಯಾವ ಕ್ಷೇತ್ರ ಬಿಟ್ಟು ಕೊಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಇಂದು ಸಂಜೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ವಿವರ ಬಿಡುಗಡೆ ಮಾಡಲಿದ್ದಾರೆ' ಎಂದು ಮಾಹಿತಿ ನೀಡಿದರು.

'ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಬರಗಾಲ ಜನರನ್ನು ಕಿತ್ತು ತಿನ್ನುತ್ತಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕು' ಎಂದು ಒತ್ತಾಯಿಸಿದರು.

'ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದೂ ಅಷ್ಟೇ ಸತ್ಯ. ಮುಂದೆ ಪ್ರಧಾನಿಯಾಗಿ ಏನು ಕೆಲಸ ಮಾಡಬೇಕು ಎಂಬುದನ್ನು ಅವರು ಈಗಾಗಲೇ ಚಿಂತಿಸಿದ್ದಾರೆ. ರಾಜ್ಯದಲ್ಲಿ ನಾವು ಕನಿಷ್ಠ 24-25 ಸ್ಥಾನಗಳನ್ನು ಗೆಲ್ಲುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕಾಂಗ್ರೆಸ್‌ನವರು ಏನೇ ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಆಗುವ ಯೋಗ್ಯತೆ ಯಾರಿಗಿದೆ? ವಿಧಾನಸಭೆ ಚುನಾವಣೆಯಲ್ಲಿ ಬೇರೆ ಚರ್ಚೆಯಾಗಬಹುದು. ಆದರೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ' ಎಂದರು.

'ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಸಿಬಿಐಗೆ ಕೊಡಬೇಕು. ಬಹುತೇಕರ ಅಭಿಪ್ರಾಯ ಇದೇ ಆಗಿದೆ' ಎಂದರು.

ಕೆ.ಎಸ್. ಈಶ್ವರಪ್ಪ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, 'ಆ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಶಿವಮೊಗ್ಗದಲ್ಲಿ ರಾಘವೇಂದ್ರ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ' ಎಂದು ಹೇಳಿದರು.

Tags:    

Similar News