ಬಿಜೆಪಿ, ಹಿಂದೂ ಸಂಘಟನೆಗಳಿಂದ ʼಚಾಮುಂಡಿ ಬೆಟ್ಟ ಚಲೋʼ; ಮಾಜಿ ಸಂಸದ, ಶಾಸಕ ಬಂಧನ
ʼಚಾಮುಂಡಿ ಬೆಟ್ಟ ಚಲೋʼ ಹಿನ್ನೆಲೆಯಲ್ಲಿ ಕಮಾಂಡೋ ಪಡೆ, ಸಿಎಆರ್ ತುಕಡಿ ಹಾಗೂ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.;
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹಾಗೂ ಹಿಂದು ಜಾಗರಣ ವೇದಿಕೆ ಕರೆ ನೀಡಿದ್ದ ʼಚಾಮುಂಡಿ ಬೆಟ್ಟ ಚಲೋʼಗೆ ಪೊಲೀಸರು ತಡೆಯೊಡ್ಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಮೈಸೂರಿನ ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಅಲ್ಲಿಂದ ಚಾಮುಂಡಿ ಬೆಟ್ಟದತ್ತ ಮೆರವಣಿಗೆ ನಡೆಸಲು ತಯಾರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವ ಎಲ್.ನಾಗೇಂದ್ರ, ನಗರಾಧ್ಯಕ್ಷ ಸಂದೇಶ ಸ್ವಾಮಿ, ಮಾಜಿ ಉಪಮೇಯರ್ ವಿ. ಶೈಲೇಂದ್ರ, ಮಹಿಳಾ ಕಾರ್ಯಕರ್ತೆ ಹೇಮಾ ನಂದೀಶ್ ಸೇರಿದಂತೆ 500 ಕ್ಕೂ ಹೆಚ್ಚು ಜನರನ್ನು ಬಂಧಿಸಿದರು.
ʼಚಾಮುಂಡಿ ಬೆಟ್ಟ ಚಲೋʼ ಹಿನ್ನೆಲೆಯಲ್ಲಿ ಕಮಾಂಡೋ ಪಡೆ, ಸಿಎಆರ್ ತುಕಡಿ ಹಾಗೂ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ “ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಎಲ್ಲರಿಗೂ ಸೇರಿದೆ ಎಂದು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರು “ಚಾಮುಂಡಿ ಬೆಟ್ಟ ಹಿಂದೂಗಳ ಧಾರ್ಮಿಕ ಸ್ಥಳವಾದರೂ, ದಸರಾ ನಾಡಹಬ್ಬ, ಎಲ್ಲರ ಹಬ್ಬ” ಎಂದು ಸ್ಪಷ್ಟನೆ ನೀಡಿದ್ದರು. ಈ ಹೇಳಿಕೆಗಳು ಹಾಗೂ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ ನಿರ್ಧಾರವನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಖಂಡಿಸಿದ್ದವು. ಈ ಹಿನ್ನೆಲೆಯಲ್ಲಿ ಹಿಂದು ಜಾಗರಣಾ ವೇದಿಕೆ ಇಂದು ಚಾಮುಂಡಿ ಬೆಟ್ಟ ಚಲೋಗೆ ಕರೆ ನೀಡಿತ್ತು. ಬಿಜೆಪಿ ಬೆಂಬಲ ವ್ಯಕ್ತಪಡಿಸಿತ್ತು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಚಾಮುಂಡಿ ಬೆಟ್ಟ ಚಲೋ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿಗೆ ಕಾಂಗ್ರೆಸ್ಸಿಗರು ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ನಾವು ತಡೆದಿರಲಿಲ್ಲ. ಆದರೆ, ಈಗ ಕಾಂಗ್ರೆಸ್ ಸರ್ಕಾರ ಚಾಮುಂಡಿ ಬೆಟ್ಟ ಚಲೋಗೆ ತೆರಳಲು ಸಜ್ಜಾಗಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲನಹಳ್ಳಿ ಠಾಣೆಯ ಮುಂಭಾಗವೇ ಹಿಂದೂ ಕಾರ್ಯಕರ್ತರು ಭಜನೆ ಹಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.