ಜಾತಿ ಸಮೀಕ್ಷೆ ತಂತ್ರಾಂಶದಿಂದ ಪರಿಶಿಷ್ಟ ಕ್ರೈಸ್ತ ಜಾತಿಗಳನ್ನು ಕೈಬಿಡುವಂತೆ ಬಿಜೆಪಿ ಅಗ್ರಹ
ಆಗಸ್ಟ್ 23 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆಗೆ ಸಿದ್ಧಪಡಿಸಿರುವ 1400 ಜಾತಿಗಳ ಪಟ್ಟಿ ಘೋಷಿಸಿತ್ತು. ಆ ಪಟ್ಟಿಯಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು.
ಆಯೋಗಕ್ಕೆ ಪತ್ರ ಬರೆದಿರುವ ಬಿಜೆಪಿ
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರೈಸ್ತ ಧರ್ಮಕ್ಕೆ ಹಲವಾರು ಹಿಂದೂ ಜಾತಿಗಳನ್ನು ಸೇರಿಸಲಾಗಿದೆ ಎಂದು ಸಾರ್ವಜನಿಕವಾಗಿ ಆಕ್ರೋಶ ಹೆಚ್ಚಾದ ಹಿನ್ನಲೆ ಸರ್ಕಾರ 33 ಜಾತಿಗಳನ್ನು ಕೈ ಬಿಟ್ಟಿತ್ತು. ಆದರೆ ದಲಿತ ಕ್ರಿಶ್ಚಿಯನ್ ಜಾತಿಗಳನ್ನು ಕೈ ಬಿಡದೆ ಜಾತಿಗಣತಿ ಮುಂದುವರಿಸಿದ್ದು, ಕೂಡಲೇ ಕೈ ಬಿಡಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಆಗಸ್ಟ್ 23 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆಗೆ ಸಿದ್ಧಪಡಿಸಿರುವ 1400 ಜಾತಿಗಳ ಪಟ್ಟಿ ಘೋಷಿಸಿತ್ತು. ಆ ಪಟ್ಟಿಯಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು. ಈ 48 ಜಾತಿಗಳಲ್ಲಿ 15 ಪರಿಶಿಷ್ಟ ಜಾತಿಗಳು ಮತ್ತು 1 ಪರಿಶಿಷ್ಟ ಪಂಗಡ ಜಾತಿಗಳಿದ್ದವು. ರಾಜ್ಯಾದ್ಯಂತ ತೀವ್ರ ವಿರೋದ ವ್ಯಕ್ತವಾದ ಹಿನ್ನೆಲೆ 33 ಹಿಂದು ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ ತಂತ್ರಾಂಶದಿಂದ ತೆಗೆದುಹಾಕಿರುವುದಾಗಿ ಆಯೋಗ ಹೇಳಿತ್ತು. ಆದರೆ ಆಕ್ಷೇಪ ಇದ್ದದ್ದು 48 ಜಾತಿಗಳ ಬಗ್ಗೆ, ಆಯೋಗವು ಸರಿಪಡಿಸಿ ಸ್ಪಷ್ಟನೆ ಕೊಟ್ಟಿರುವುದು 33 ಜಾತಿಗಳ ಬಗ್ಗೆ, ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಯಾವ್ಯಾವ ಜಾತಿಗಳು ಉಳಿದಿವೆ?
ಆದಿ ಆಂಧ್ರ ಕ್ರಿಶಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಜಾತಿಗಳನ್ನು ತಂತ್ರಾಂಶದಿಂದ ತೆಗೆಯಬೇಕು ಎಂದಿದ್ದಾರೆ.
ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ
ಎರಡು ತಿಂಗಳ ಹಿಂದೆಯಷ್ಟೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ ಪರಿಶಿಷ್ಟ ಜಾತಿಗಳು ಇರಲಿಲ್ಲ. ನ್ಯಾ. ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿಯ ವರ್ಗೀಕರಣವಾಗಿದೆ. ಈಗ ನಿಮ್ಮ ಆಯೋಗದಿಂದ 15 ಹೊಸ ಕ್ರೈಸ್ತ ಪರಿಶಿಷ್ಟ ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನೆಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತದೆ. ಹೀಗಾಗಿ ನೀವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ನಮ್ಮ ಮನವಿಯಾಗಿದೆ ಎಂದರು.
ಆನ್‌ಲೈನ್‌ನಲ್ಲಿ ಲಭ್ಯವಿರುವ ತಮ್ಮ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪನ್ನು ಸರಿಪಡಿಸಿರುವುದು ನಿಜ. ಆದರೆ ಸಮೀಕ್ಷೆಗೆ ಬಳಸುವ ತಂತ್ರಾಂಶದಲ್ಲಿಯೂ ಈ 15 ಪರಿಶಿಷ್ಟ ಜಾತಿಗಳನ್ನು ತೆಗೆಯಬೇಕು. ಅದನ್ನು ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದಾರೆ.