ಪೋಸ್ಟರ್ ಅಭಿಯಾನ: ಕಾಂಗ್ರೆಸ್ ತಂತ್ರ... ಈಗ ತಿರುಮಂತ್ರ...
ಹಿಂದೆ 40% ಕಮಿಷನ್ ಆರೋಪ ಕುರಿತು ಕಿಡಿ ಹೊತ್ತಿಸಿದ್ದ ಪೋಸ್ಟರ್ ಅಭಿಯಾನ, ಕೇವಲ ರಾಜಕೀಯ ಚರ್ಚೆಗೆ ಮಾತ್ರ ಸೀಮಿತವಾಗದೆ, ಮತದಾರರ ಮನಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರಿತ್ತು. ಈಗ ಬಿಜೆಪಿ ಅದನ್ನು ಕಾಂಗ್ರೆಸ್ ಮೇಲೆ ಪ್ರಯೋಗಿಸಲು ಮುಂದಾಗಿದೆ.;
ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಡೆದ ‘ಪೇ ಸಿಎಂ’ ಪೋಸ್ಟರ್ ಅಭಿಯಾನ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆಗಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕುರಿತು ಕಾಂಗ್ರೆಸ್ ಪ್ರಾರಂಭಿಸಿದ್ದ ಆ ಅಭಿಯಾನದಿಂದ ಮುಂದೆ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು. 40% ಕಮಿಷನ್ ಆರೋಪ ಕುರಿತು ಕಿಡಿ ಹೊತ್ತಿಸಿದ್ದ ಆ ಅಭಿಯಾನ, ಕೇವಲ ರಾಜಕೀಯ ಚರ್ಚೆಗೆ ಮಾತ್ರ ಸೀಮಿತವಾಗದೆ, ಮತದಾರರ ಮನಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರಿತ್ತು. ಅದು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ಕಾರಣವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದೀಗ ಇದೇ ತಂತ್ರವನ್ನು ಕಾಂಗ್ರೆಸ್ ಮೇಲೆ ಪ್ರಯೋಗಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಬೀದರ್ನಲ್ಲಿ ಗುತ್ತಿಗೆದಾರ ಸಚಿನ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಪೋಸ್ಟರ್ ಅಭಿಯಾನ ಮೂಲಕ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲು ಬಿಜೆಪಿ ತೀರ್ಮಾನ ಮಾಡಿದೆ. ಡಿ. 31 ರಂದು ಬಿಜೆಪಿ ಶುರು ಮಾಡಿರುವ ಪೋಸ್ಟರ್ ಅಭಿಯಾನ ಜ. 4ರವರೆಗೆ ಮುಂದುವರೆಯಲಿದೆ.
ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಜೊತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಬಿಜೆಪಿ ಪೋಸ್ಟರ್ ಅಭಿಯಾನ ಶುರು ಮಾಡಿದೆ. ಇದೇ ಸಂದರ್ಭದಲ್ಲಿ ಮುಂದಿನ ಹೋರಾಟದ ಕುರಿತು ‘ದ ಫಡೆರಲ್ ಕರ್ನಾಟಕ’ದ ಜೊತೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗೂ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯ, ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ ವಿವರ ಹಂಚಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ
ಜನವರಿ 4 ರಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿಯಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ, ರಾಜ್ಯ ಬಿಜೆಪಿ ನಾಯಕರು ಹಾಗೂ 17 ಜನರಿರುವ ಸತ್ಯಶೋಧನಾ ಸಮಿತಿಯ ಎಲ್ಲ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಶ್ವಥ್ ನಾರಾಯಣ ವಿವರಿಸಿದ್ದಾರೆ. ಹೊಸವರ್ಷದಿಂದ ಅಂದರೆ ಜನವರಿ 1 ರಿಂದ 3ನೇ ತಾರೀಖಿನವರೆಗೆ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ತಪ್ಪು ಮಾಡಿದ ವ್ಯಕ್ತಿಯೇ (ಪ್ರಿಯಾಂಕ್ ಖರ್ಗೆ) ತನಿಖೆಯನ್ನು ಸಿಐಡಿಗೆ ಕೊಡಿ ಎಂದು ಹೇಗೆ ಶಿಫಾರಸು ಮಾಡುತ್ತಾರೆ? ಎಂದು ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಆರೋಪಿತರಾಗಿದ್ದಾರೆ. ಆರೋಪಿತರೆ ಸಿಐಡಿಗೆ ಕೊಡಿ ಎಂದು ಹೇಗೆ ಹೇಳುತ್ತಾರೆ? ಇಂಥದ್ದೆ ತನಿಖೆ ಮಾಡಿ ಎಂದು ಹೇಳಲು ಅವರು ಯಾರು? ಹಿಂದೆ ಕೆ.ಎಸ್. ಈಶ್ವರಪ್ಪ ಪ್ರಕರಣದಲ್ಲಿ ಅವರು ಇದನ್ನೇ ಹೇಳಿದ್ದರು. ಈಶ್ವರಪ್ಪ ರಾಜೀನಾಮೆಯನ್ನು ಪಡೆದುಕೊಂಡರು. ಹೀಗಾಗಿ ಈಗ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಡಲಿ. ನಂತರ ತನಿಖೆ ಮಾಡುವುದು ಸರ್ಕಾರದ ಕೆಲಸ. ಯಾವ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕು, ಹೇಗೆ ತನಿಖೆ ಆಗಬೇಕು ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಹಿಂದೆ ಈಶ್ವರಪ್ಪ ಕೇಸ್ನಲ್ಲಿಯೂ ಅವರ ಹೆಸರು ಉಲ್ಲೇಖ ಆಗಿರಲಿಲ್ಲ. ಆದರೂ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿತ್ತು. ಅದರಂತೆ ಅವರು ರಾಜೀನಾಮೆಯನ್ನು ಕೊಟ್ಟಿದ್ದರು. ಈಶ್ವರಪ್ಪ ಅವರಿಗೊಂದು ಮಾನದಂಡವೇ? ಎಂದು ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳಲ್ಲಿ ನೇರ ಕೈವಾಡವಿದೆ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ‘ದ ಫೆಡರಲ್ ಕರ್ನಾಟಕ‘ದೊಂದಿಗೆ ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ‘ರಾಜ್ಯದಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗಳಾಗುತ್ತಿವೆ. ಮಂಗಳವಾರ (ಡಿ.30) ಅಮೃತ್ ಶಿರಿಯೂರು ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಚಂದ್ರಶೇಖರ್, ಬೆಳಗಾವಿಯಲ್ಲಿ ರುದ್ರಣ್ಣ ಹೆಳವಣ್ಣರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎಲ್ಲ ಪ್ರಕರಣಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಚಿವರ ಹಸ್ತಕ್ಷೇಪ ಇದ್ದೇ ಇದೆ. ಅವರ ಪಿಎಸ್ಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.
ಸಿದ್ದಲಿಂಗೇಶ್ವರ ಸ್ವಾಮೀಜಿ, ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ, ಕಲಬುರಗಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಹಾಗೂ ಮಣಿಕಂಠ ರಾಠೋಡ್ ಅವರ ಹತ್ಯೆಗೆ ಸುಪಾರಿ ಕೊಟ್ಟಿರುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತೇವೆ. ನಾವು ವಿರೋಧ ಪಕ್ಷದಲ್ಲಿರುವವರು ಅವರನ್ನು ಪ್ರಶ್ನೆ ಮಾಡುತ್ತೇವೆ. ಜೊತೆಗೆ ಮಣಿಕಂಠ ರಾಠೋಡ್, ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ದರು. 10 ಸಾವಿರ ಮತಗಳ ಅಂತರದಿಂದ ಖರ್ಗೆ ಗೆದ್ದಿದ್ದಾರೆ. ಅವರು ಕಾನೂನು ಮೂಲಕ ಹೋರಾಟ ಮಾಡಲಿ. ಆದರೆ ಅವರು ಮಾಡುತ್ತಿರುವುದು ಏನು? ಎಂದು ಸುಪಾರಿ ವಿಚಾರಕ್ಕೆ ರವಿಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಚಿನ್ ಬರೆದಿದ್ದ ಡೆತ್ನೋಟ್ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ. ರಾಜು ಕಪನೂರ್ ಬೆಂಗಳೂರಿಗೆ ಸಚಿನ್ ಅನ್ನು ಕರೆದುಕೊಂಡು ಬಂದಿದ್ದಾರೆ. ಸರ್ಕಾರದ ಕಾರ್ಯದರ್ಶಿಗೆ ಫೋನ್ ಮಾಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಭೇಟಿ ಮಾಡಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ನೇರವಾಗಿ ಪ್ರಿಯಾಂಕ್ ಖರ್ಗೆ ಕೈವಾಡವಿದೆ. ಸಚಿನ್ ಪಾಂಚಾಳ ಸುಪಾರಿ ವಿಷಯವನ್ನು ತಿಳಿಸಿದ್ದರಿಂದ ಹೊರಗೆ ಬಂದಿದೆ ಎಂದು ರವಿಕುಮಾರ್ ವಿವರಿಸಿದರು.
ಮೃತನ ಕುಟುಂಬಕ್ಕೆ 1 ಕೋಟಿ ರೂ. ಕೊಡಬೇಕು. ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು, ಪ್ರಿಯಾಂಕ್ ಖರ್ಗೆ ರಾಜಿನಾಮೆ ಪಡೆದು ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ರವಿಕುಮಾರ್ ಆಗ್ರಹಿಸಿದ್ದಾರೆ.