Waqf Asset Dispute | ವಕ್ಫ್‌ ಕಾಯ್ದೆಗೆ ಅಗತ್ಯ ತಿದ್ದುಪಡಿ; ಧರಣಿ ಹಿಂಪಡೆದ ಬಿಜೆಪಿ

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿದೆ. ಕಾಯ್ದೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಿದೆ ಎಂದು ಜೆಪಿಸಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.;

Update: 2024-11-07 14:41 GMT

ವಕ್ಫ್ ಕಾಯ್ದೆಗೆ ಪಾರದರ್ಶಕ ತಿದ್ದುಪಡಿ ತರುವ ಕುರಿತು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಗುರುವಾರ ಸಂಜೆ ನಿಲ್ಲಿಸಲಾಗಿದೆ. 

ವಕ್ಫ್ ಹಠಾವೋ, ದೇಶ್‌ ಬಚಾವೋ ಘೋಷಣೆಯೊಂದಿಗೆ ಬಿಜೆಪಿ ಮುಖಂಡರು ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಗುರುವಾರ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು, ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿದೆ. ಕಾಯ್ದೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಿದೆ. ಕಾಯ್ದೆಯಲ್ಲಿರುವ ತೊಡಕುಗಳನ್ನು ಸರಿಪಡಿಸಿ, ಭವಿಷ್ಯದಲ್ಲಿ ಯಾರಿಗೂ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ತರಲಾಗುವುದು. ಇದಕ್ಕೆ ಪೂರಕವಾದ ಸಲಹೆಗಳನ್ನು ಜೆಪಿಸಿ ನೀಡಲಿದೆ ಎಂದು ಹೇಳಿದರು.

ರೈತರಿಗೆ ವಕ್ಫ್ ನೋಟಿಸ್ ನೀಡಿರುವ ಅಧಿಕಾರಿಗಳನ್ನು ಅಗತ್ಯಬಿದ್ದರೆ ದೆಹಲಿಗೆ ಕರೆಸಿ, ವಿಚಾರಣೆ ನಡೆಸಲಾಗುವುದು. ನಾನು ಕರ್ನಾಟಕಕ್ಕೆ ಭೇಟಿ ನೀಡಿರುವ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುವ ಬದಲು ರೈತರಿಗೆ ನೋಟಿಸ್ ನೀಡಿದ್ದೇಕೆ ಎಂಬುದಕ್ಕೆ ಉತ್ತರಿಸಲಿ ಎಂದು ತಿರುಗೇಟು ನೀಡಿದರು.

ನಾನು ಜೆಪಿಸಿ ಅಧ್ಯಕ್ಷನಾಗಿದ್ದೇನೆ. ರೈತರಿಗೆ ಆಗಿರುವ ತೊಂದರೆ ಆಲಿಸಲು ಯಾವ ರಾಜ್ಯಕ್ಕೆ ಬೇಕಾದರೂ ಹೋಗುತ್ತೇನೆ. ಕಾಯ್ದೆಗೆ ಪೂರಕವಾದ ಅಭಿಪ್ರಾಯ ಸಂಗ್ರಹಿಸುತ್ತೇನೆ. ಅದನ್ನು ಪ್ರಶ್ನಿಸುವ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ರಮೇಶ್ ಜಿಣಜಿಣಗಿ, ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಇತರರು ಇದ್ದರು.

Tags:    

Similar News