BJP Infighting | ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಂದೋಲನ; ಭಿನ್ನರಿಗೆ ಇಲ್ಲ ಸ್ಥಾನ
ರಾಜ್ಯ ಬಿಜೆಪಿಯಲ್ಲಿನ ಬಣ ತಿಕ್ಕಾಟವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು, ಭಿನ್ನರನ್ನು ದೂರವಿಟ್ಟು, ಸರ್ಕಾರದ ವಿರುದ್ಧ ಹೋರಾಟಕ್ಕೆ ಆಂದೋಲನ ಹಾಗೂ ಸತ್ಯಶೋಧನಾ ತಂಡಗಳನ್ನು ರಚಿಸಿದ್ದಾರೆ.;
ಬಾಣಂತಿಯರ ಸರಣಿ ಸಾವು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಬಿಜೆಪಿ ವರಿಷ್ಠರು ಆಂದೋಲನ ಹಾಗೂ ಸತ್ಯಶೋಧನಾ ಹೆಸರಿನಲ್ಲಿ ಎರಡು ತಂಡ ರಚಿಸಿದ್ದಾರೆ. ಆದರೆ, ಎರಡೂ ತಂಡಗಳಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಭಿನ್ನರ ಗುಂಪಿನ ನಾಯಕರಿಗೆ ಸ್ಥಾನ ಕಲ್ಪಿಸಿಲ್ಲ. ವರಿಷ್ಠರ ಈ ನಡೆ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಕ್ಫ್ ವಿರುದ್ಧದ ಹೋರಾಟದ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಣಗಳ ಮಧ್ಯೆ ಭಿನ್ನಮತ ಉಲ್ಭಣಿಸಿತ್ತು. ಎರಡೂ ಬಣಗಳು ಪ್ರತ್ಯೇಕವಾಗಿ ವಕ್ಫ್ ವಿರುದ್ಧ ಹೋರಾಟ ನಡೆಸಿದ್ದವು. ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟ ಹೈಕಮಾಂಡ್ ಅಂಗಳಕ್ಕೂ ತಲುಪಿತ್ತು. ಹೈಕಮಾಂಡ್ ನಾಯಕರು ಎರಡೂ ಕಡೆಯವರನ್ನು ದೆಹಲಿಗೆ ಕರೆಸಿ, ಬುದ್ದಿಮಾತು ಹೇಳಿದ್ದರು.
ರಾಜ್ಯ ಬಿಜೆಪಿಯಲ್ಲಿನ ಬಣ ತಿಕ್ಕಾಟವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ಭಿನ್ನರನ್ನು ದೂರವಿಟ್ಟು, ಸರ್ಕಾರದ ವಿರುದ್ಧ ಹೋರಾಟಕ್ಕೆ ಆಂದೋಲನ ಹಾಗೂ ಸತ್ಯಶೋಧನಾ ತಂಡಗಳನ್ನು ರಚಿಸಿದ್ದಾರೆ. ನಾಮಕಾವಸ್ತೆಯ ಹೋರಾಟ ಮಾಡದೇ ಆಕ್ರಮಣಕಾರಿ ಹೋರಾಟ ನಡೆಸಲು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ತಂಡಗಳು ಗರ್ಭಿಣಿಯರ ಸರಣಿ ಸಾವು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಆತ್ಮಹತ್ಯೆ ವಿಚಾರವಾಗಿ ಜನವರಿ ತಿಂಗಳಲ್ಲೇ ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಆಂದೋಲನ ನಡೆಸಲಿವೆ.
ಈ ಮಧ್ಯೆ, ಭಿನ್ನರ ಗುಂಪಿನ ನಾಯಕರನ್ನು ಸತ್ಯಶೋಧನಾ ಹಾಗೂ ಆಂದೋಲನ ತಂಡಗಳಿಂದ ಕೈಬಿಟ್ಟಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಹೋರಾಟಕ್ಕೆ ಭಿನ್ನರ ಬಣದ ನಾಯಕರಿಗೆ ಸ್ಥಾನ ಕಲ್ಪಿಸದ ಕ್ರಮದ ಬಗ್ಗೆ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಪಕ್ಷದಲ್ಲಿ ಮೂಡಿರುವ ಬಿರುಕು ಸರಿಪಡಿಸಲು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಹೋರಾಟ ನಡೆಸಬೇಕು. ಇಲ್ಲವಾದಲ್ಲಿ ಪಕ್ಷಕ್ಕೆ ಮತ್ತಷ್ಟು ಹಾನಿಯಾಗಲಿದೆ ಎಂದು ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
2ನೇ ಹಂತದ ವಕ್ಫ್ ಹೋರಾಟಕ್ಕೆ ಭಿನ್ನರ ಬಣ ಸಜ್ಜು
ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣದಲ್ಲಿ ಹೋರಾಟ ನಡೆಸಲು ಬಿಜೆಪಿ ವರಿಷ್ಠರು ಎರಡು ತಂಡಗಳನ್ನು ರಚಿಸಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಭಿನ್ನರ ಬಣ ವಕ್ಫ್ ವಿಚಾರವಾಗಿ ಎರಡನೇ ಸುತ್ತಿನ ಹೋರಾಟಕ್ಕೆ ತೀರ್ಮಾನಿಸಿದೆ. ಆದರೆ, ಹೀಗೆ ಒಂದೇ ವಿಷಯದ ಮೇಲೆ ಪಕ್ಷದ ಎರಡು ಪ್ರತ್ಯೇಕ ಹೋರಾಟಗಳು ನಡೆಯುವುದು ಪಕ್ಷದ ಬೆಳವಣಿಗೆಗೂ ತೊಂದರೆ ಆಗಲಿದೆ. ಜನವರಿ ತಿಂಗಳಲ್ಲಿ ನಾಯಕರ ನಡುವಿನ ಭಿನ್ನಮತ ಪರಿಹರಿಸಲು ಸಭೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದೊಳಗಿನ ಆಂತರಿಕ ಕಚ್ಚಾಟದದಿಂದ ಪಕ್ಷಕ್ಕೆ ಹಿನ್ನೆಡೆಯಾಗಬಹುದು. ಎರಡೂ ಗುಂಪುಗಳ ಸ್ವಪ್ರತಿಷ್ಠೆ ಅವರಿಗೇ ಮುಳುವಾಗಲಿದೆ. ತಕ್ಷಣ ಎಚ್ಚೆತ್ತುಕೊಳ್ಳದೇ ಹೋದರೆ ಯಾರೂ ಕೂಡ ರಕ್ಷಿಸಲು ಆಗುವುದಿಲ್ಲ ಎಂದು ಹೆಸರೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ವಕ್ಫ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದ್ದ ಬಿಜೆಪಿ ನಾಯಕರು ಶಾಸಕ ಬಸನ ಗೌಡ ಪಾಟೀಲ ಯತ್ನಾಳ ಬಣದ ನಾಯಕರನ್ನು ತಂಡದಿಂದ ಕೈ ಬಿಟ್ಟಿತ್ತು. ಈ ಬಗ್ಗೆ ಪಕ್ಷದಲ್ಲೇ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಸಮಿತಿಗೆ ಯತ್ನಾಳ್ ಸೇರಿ ಬಿನ್ನರ ಬಣದ ನಾಯಕರನ್ನು ಸೇರಿಸಲಾಗಿತ್ತು. ಆದರೂ, ಯತ್ನಾಳ ನೇತೃತ್ವದ ಬಣ ಪ್ರತ್ಯೇಕವಾಗಿ ಹೋರಾಟ ನಡೆಸಿತ್ತು.
ಆಂದೋಲನ ಸಮಿತಿಯಲ್ಲಿ ಯಾರಿಗೆ ಸ್ಥಾನ
ಆಂದೋಲನ ಸಮಿತಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಆರಗ ಜ್ಞಾನೇಂದ್ರ, ಎನ್.ಮಹೇಶ್, ಅಶ್ವತ್ಥನಾರಾಯಣ ಗೌಡ, ಬಸವರಾಜ ಮತ್ತಿಮೋಡ್, ಎನ್.ರವಿಕುಮಾರ್ ಸೇರಿ 17 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಸಮಿತಿಯು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಸಂಬಂಧ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಹೋರಾಟ ರೂಪಿಸಲಿದೆ.
ಸತ್ಯಶೋಧನಾ ಸಮಿತಿಯಲ್ಲಿ ಯಾರಿಗೆ ಸ್ಥಾನ
ಸತ್ಯಶೋಧನಾ ಸಮಿತಿಯಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್ ಜಾಧವ್, ಡಾ.ಚಂದ್ರು ಲಮಾಣಿ, ಡಾ.ಅಶ್ವಿನಿ ಗೌಡ, ಡಾ.ಬಸವರಾಜ್ ಕೇಲಗಾರ ಸೇರಿ 15 ಮಂದಿ ತಂಡದಲ್ಲಿದ್ದಾರೆ. ಈ ಸಮಿತಿಯು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವಿನ ಕುರಿತು ಪರಿಶೀಲನೆ ನಡೆಸಲಿದೆ. ಈ ಸಮಿತಿಯಲ್ಲಿ ಬಿಜೆಪಿ ಪಕ್ಷದಲ್ಲಿರುವ ವೈದ್ಯರನ್ನೇ ನಿಯೋಜಿಸಲಾಗಿದೆ.