ಕಚೇರಿಯ ಸಿಸಿಟಿವಿ ಕ್ಯಾಮರಾ ಆಫ್‌ ಮಾಡಿ ಬರ್ತ್‌ಡೇ ಆಚರಣೆ; ಐವರು ಸರ್ಕಾರಿ ಅಧಿಕಾರಿಗಳು ಅಮಾನತು

ಹೈಕೋರ್ಟ್ ಸಮೀಪದ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡಗಳ ಉಪ ವಿಭಾಗ ಕಚೇರಿಯಲ್ಲಿ ನಿಯಮಬಾಹಿರವಾಗಿ ಹುಟ್ಟುಹಬ್ಬ ಆಚರಿಸಲಾಗಿದೆ. ಜತೆಗೆ ಕಚೇರಿಯ ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಲಾಗಿತ್ತು!;

Update: 2025-04-09 13:38 GMT

ಹೈಕೋರ್ಟ್ ಸಮೀಪದ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡಗಳ ಉಪ ವಿಭಾಗ ಕಚೇರಿಯಲ್ಲಿ ನಿಯಮಬಾಹಿರವಾಗಿ ಹುಟ್ಟುಹಬ್ಬ ಆಚರಿಸಿದ ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ಮೀನಾ, ನವೀನ್, ಅಮೀನ್ ಎಸ್.ಆನದಿನ್ನಿ ಹಾಗೂ ಪ್ರಥಮ ದರ್ಜೆ ಸಹಾಯಕ ಜಿ.ಹೆಚ್.ಚಿಕ್ಕೇಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಿ ಲೋಕೋಪಯೋಗಿ ಇಲಾಖೆ (ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಹನುಮಂತರಾಜು ಎ. ಆದೇಶಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದೂರಿಗೆ ಸಂಬಂಧಿಸಿ ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡದ (ಕೇಂದ್ರ) ಮುಖ್ಯ ಎಂಜಿನಿಯರ್ ಅವರು ತನಿಖೆ ನಡೆಸಿದ್ದರು. ಈ ತನಿಖಾ ವರದಿ ಆಧರಿಸಿ ಅಧಿಕಾರಿಗಳು ಸೇವೆಯಿಂದ ಅಮಾನತು ಮಾಡಲಾಗಿದೆ.

ಅಮಾನತು ಅವಧಿಯಲ್ಲಿ ಆರೋಪಿತ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಹಾಯಕ ಎಂಜಿನಿಯರ್ ಮೀನಾ.ಎ.ಟಿ ಅವರು ನಿಯೋಜನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ಹುಟ್ಟುಹಬ್ಬವನ್ನು ಸೂಕ್ಷ್ಮ ಪ್ರದೇಶವಾದ ಹೈಕೋರ್ಟ್ನಲ್ಲಿರುವ ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಆಚರಿಸಿರುವುದು ಅಕ್ಷಮ್ಯ. ಹುಟ್ಟಹಬ್ಬ ಆಚರಣೆಯಲ್ಲಿ ಹೊರಗಿನ ಅಧಿಕಾರಿಗಳಾದ ಲಾವಣ್ಯ, ಅಮೀನ್ ಎಸ್. ಆನದಿನ್ನಿ, ನವೀನ್ ಅವರು ಭಾಗಿಯಾಗಿದ್ದರು.


ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿದ್ದರು

ಹುಟ್ಟುಹಬ್ಬ ಆಚರಣೆ ವೇಳೆ ಕಚೇರಿಯ ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿದ್ದ ಸಂಗತಿ ತನಿಖೆಯಿಂದ ತಿಳಿದು ಬಂದಿದೆ.

ಸಹಾಯಕ ಎಂಜಿನಿಯರ್‌ಗಳಾದ ನವೀನ್, ಅಮಿತ್ ಎಸ್ ಅನದಿನ್ನಿ, ಪ್ರಥಮ ದರ್ಜೆ ಸಹಾಯಕ ಜಿ.ಹೆಚ್.ಚಿಕ್ಕೇಗೌಡ, ದ್ವಿತೀಯ ದರ್ಜೆ ಸಹಾಯಕರಾದ ಅಂಬಿಕಾ, ಮೇಘಾ, ರಜನೀಶ್. ಎಸ್, ಡಿ-ಗ್ರೂಪ್ ನೌಕರರಾದ ವೆಂಕಟಮ್ಮ, ಬೇರೆ ಕಚೇರಿ ಸಿಬ್ಬಂದಿಯಾದ ಸಹಾಯಕ ಎಂಜಿನಿಯರ್ಗಳಾದ ಮೀನಾ, ಲಾವಣ್ಯ ಹಾಗೂ ಗುತ್ತಿಗೆದಾರರಾದ ಸಂಗಮೇಶ್, ಕಿರಣ್ ಅವರು ಸರ್ಕಾರಿ ಕಚೇರಿಯಲ್ಲಿ ನಿಯಮ ಬಾಹಿರವಾಗಿ ಹುಟ್ಟುಹಬ್ಬ ಆಚರಿಸಿರುವುದು ಕಂಡುಬಂದಿದೆ.

ಹೈಕೋರ್ಟ್ ಕಟ್ಟಡ ಸೂಕ್ಷ್ಮ ಪ್ರದೇಶ. ಹೀಗಿದ್ದಾಗಲೂ ಮೇಲಧಿಕಾರಿಗಳ ಗಮನಕ್ಕೆ ತರದೇ ಸಿ.ಸಿ ಕ್ಯಾಮರಾ ಸ್ವಿಚ್ ಆಫ್ ಮಾಡಿರುವುದು ಭದ್ರತೆ ಹಾಗೂ ಕರ್ತವ್ಯ ಲೋಪವಾಗಿದೆ. ಕಚೇರಿಯ ಘನತೆ ಗೌರವ ಕಾಪಾಡುವುದರಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ತನಿಖಾ ವರದಿ ಶಿಫಾರಸು ಮಾಡಿದೆ.

ಕಾರ್ಯಕ್ರಮದ ಸೂತ್ರಧಾರ ಚಿಕ್ಕೇಗೌಡ

ಪ್ರಥಮ ದರ್ಜೆ ಸಹಾಯಕ ಜಿ.ಹೆಚ್.ಚಿಕ್ಕೇಗೌಡ ಸೂಚನೆಯ ಮೇರೆಗೆ ಹುಟ್ಟುಹಬ್ಬ ಆಚರಿಸಿದ್ದ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಚಿಕ್ಕೇಗೌಡ ಅವರು ಕಾರ್ಯಕ್ರಮದ ತಯಾರಿಯನ್ನು ಅಂಬಿಕಾ, ಮೇಘಾ.ಡಿ, ರಜನೀಶ್.ಎಸ್. ವೆಂಕಟಮ್ಮ ಅವರಿಗೆ ವಹಿಸಿದ್ದರು. ಚಿಕ್ಕೇಗೌಡ ಸೂಚನೆಯ ಮೇರೆಗೆ ವೆಂಕಟಮ್ಮ ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಗಣ್ಯವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ನಿಯಮಬಾಹಿರವಾಗಿ ನಡೆದುಕೊಂಡಿರುವುದು ಗಂಭೀರ ಅಪರಾಧವಾಗಿದೆ ಎಂದು ತನಿಖಾ ವರದಿ ಬೊಟ್ಟು ಮಾಡಿದೆ.

Tags:    

Similar News