ಪರಪ್ಪನ ಅಗ್ರಹಾರದಲ್ಲಿ ರೌಡಿಗೆ ಜೈಲಲ್ಲೇ ಜನ್ಮದಿನದ ಸಂಭ್ರಮ!

ಒಂದೆಡೆ ರೌಡಿಶೀಟರ್‌ಗಳಿಗೆ ಜೈಲಿನಲ್ಲಿ ವಿಶೇಷ ಮರ್ಯಾದೆ ಸಿಗುತ್ತಿದ್ದರೆ, ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಜೈಲಿನಲ್ಲಿರುವ ನಟ ದರ್ಶನ್‌ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Update: 2025-10-05 04:53 GMT
Click the Play button to listen to article

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಕೊಲೆ ಪ್ರಕರಣದ ಆರೋಪಿಯಾಗಿರುವ ಕುಖ್ಯಾತ ರೌಡಿಶೀಟರ್‌ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ, ಜೈಲಿನೊಳಗೆಯೇ ತನ್ನ ಸಹಚರರೊಂದಿಗೆ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದಾನೆ. ಸೇಬಿನ ಹಾರ ಧರಿಸಿ, ಕೇಕ್ ಕತ್ತರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೈಲಿನ ಭದ್ರತಾ ವ್ಯವಸ್ಥೆ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಈ ಹಿಂದೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇತ್ತೀಚೆಗಷ್ಟೇ ಕಾರಾಗೃಹ ಇಲಾಖೆಯ ಎಡಿಜಿಪಿ ದಯಾನಂದ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ, ರೌಡಿಶೀಟರ್‌ವೊಬ್ಬ ರಾಜಾರೋಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಜೈಲಿನಲ್ಲಿ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯವನ್ನು ಬಯಲುಮಾಡಿದೆ. ಆತನ ಸಹಚರರು ಮೊಬೈಲ್ ಬಳಸಿ ಈ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿದು, ಜೈಲಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಗಂಭೀರ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ.

ದರ್ಶನ್‌ಗೆ ಸೌಲಭ್ಯ ನಿರಾಕರಣೆ: ವಕೀಲರಿಗೆ ಅಸ್ತ್ರವಾದ ಘಟನೆ

ಒಂದೆಡೆ ರೌಡಿಶೀಟರ್‌ಗಳಿಗೆ ಜೈಲಿನಲ್ಲಿ ವಿಶೇಷ ಮರ್ಯಾದೆ ಸಿಗುತ್ತಿದ್ದರೆ, ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಜೈಲಿನಲ್ಲಿರುವ ನಟ ದರ್ಶನ್‌ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರಾಕರಿಸಲಾಗುತ್ತಿದೆ. ತಮಗೆ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಕೋರಿ ದರ್ಶನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ. ಇದೀಗ, ರೌಡಿಶೀಟರ್‌ನ ಹುಟ್ಟುಹಬ್ಬದ ಆಚರಣೆಯ ಘಟನೆಯು ದರ್ಶನ್‌ ಪರ ವಕೀಲರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಜೈಲಿನಲ್ಲಿ ನಡೆಯುತ್ತಿರುವ ತಾರತಮ್ಯವನ್ನು ನ್ಯಾಯಾಲಯದ ಮುಂದೆ ಸಾಕ್ಷಿ ಸಮೇತ ಇಡಲು ಈ ಘಟನೆ ಸಹಕಾರಿಯಾಗಲಿದೆ. "ಕೆಲವರಿಗೆ ರಾಜಾತಿಥ್ಯ, ಇನ್ನು ಕೆಲವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ" ಎಂಬ ವಾದವನ್ನು ಮಂಡಿಸಲು ವಕೀಲರಿಗೆ ಇದು ಪ್ರಮುಖ ಆಧಾರವಾಗಿದೆ.

Tags:    

Similar News