Bird Survey | ಬಿಳಿಗಿರಿ ರಂಗನ ಬೆಟ್ಟದಲ್ಲಿ ಪಕ್ಷಿ ಗಣತಿ; ಹೊಸ ಪ್ರಭೇದಗಳ ದಾಖಲೀಕರಣಕ್ಕೆ ಅರಣ್ಯ ಇಲಾಖೆ ಸಜ್ಜು

ಪೂರ್ವ- ಪಶ್ಚಿಮ ಘಟ್ಟಗಳು ಸಂಧಿಸುವ ಚಾಮರಾಜನಗರ ಜಿಲ್ಲೆ ಜೀವವೈವಿಧ್ಯದ ತಾಣವಾಗಿದೆ. ಈಗಾಗಲೇ ಮಲೈ ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಒಟ್ಟು 253 ಪ್ರಭೇದದ ಪಕ್ಷಿಗಳನ್ನು ದಾಖಲಿಸಿದೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಈಗ ಪಕ್ಷಿ ಗಣತಿ ಆರಂಭವಾಗಲಿದೆ.;

Update: 2025-02-19 06:02 GMT

ಪೂರ್ವ- ಪಶ್ಚಿಮ ಘಟ್ಟಗಳು ಸಂಧಿಸುವ ಚಾಮರಾಜನಗರ ಜಿಲ್ಲೆ ಜೀವವೈವಿಧ್ಯದ ತಾಣವಾಗಿದೆ. ಇಲ್ಲಿನ ಬಂಡೀಪುರ, ಮಲೈ ಮಹದೇಶ್ವರ ಬೆಟ್ಟ ಹಾಗೂ ಬಿಳಿಗಿರಿ ರಂಗನಬೆಟ್ಟ ಪ್ರದೇಶದ ವನಸಿರಿಯಲ್ಲಿರುವ ಪ್ರಾಣಿ, ಪಕ್ಷಿ ಸಂಕುಲದ ಕಲರವ ಮನಸ್ಸಿಗೆ ಮುದ ನೀಡುವಂತಿದೆ.

ಬಿಳಿಗಿರಿ ರಂಗನ ಬೆಟ್ಟದ (ಬಿ.ಆರ್‌.ಹಿಲ್ಸ್‌) ರಾಷ್ಟ್ರೀಯ ಉದ್ಯಾನವನವು ಹುಲಿ, ಆನೆ, ಚಿರತೆ, ಕಾಡು ನಾಯಿ, ಕಾಡೆಮ್ಮೆ, ಚುಕ್ಕೆ ಜಿಂಕೆ ಸೇರಿ ನಾನಾ ಕಾಡುಪ್ರಾಣಿಗಳು, ಸರೀಸೃಪಗಳು, ಪಕ್ಷಿಗಳ ಆವಾಸ ಸ್ಥಾನವಾಗಿ ಗುರುತಿಸಿಕೊಂಡಿದೆ. ಇದೀಗ ಈ ರಾಷ್ಟ್ರೀಯ ಉದ್ಯಾನವನದಲ್ಲಿ ಪಕ್ಷಿ ಗಣತಿ ನಡೆಯಲಿದೆ. 

ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಹುಲಿ ಸಂರಕ್ಷಿತ ಅರಣ್ಯದಲ್ಲಿ 11 ವರ್ಷಗಳ ನಂತರ ಪಕ್ಷಿ ಗಣತಿ ನಡೆಯುತ್ತಿದೆ. ಅರಣ್ಯದಲ್ಲಿರುವ ಹೇರಳ ಪಕ್ಷಿ ಪ್ರಬೇಧಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಗಣತಿ ಕಾರ್ಯ ಆರಂಭವಾಗಿದೆ. ಫೆ.1ರಿಂದ 3ರವರೆಗೆ ಮಲೈಮಹದೇಶ್ವರ ವನ್ಯಧಾಮದಲ್ಲಿ ಗಣತಿ ಮುಗಿದಿದೆ.  

ಬಿ.ಆರ್‌.ಹಿಲ್ಸ್‌ನಲ್ಲಿ ಫೆ.26 ರಿಂದ ಪಕ್ಷಿ ಗಣತಿ

ಬಿಳಿಗಿರಿ ರಂಗನ ಬೆಟ್ಟದ ಹುಲಿ ಪ್ರದೇಶದಲ್ಲಿ ಪಕ್ಷಿ ಗಣತಿಗೆ ಸಿದ್ಧತೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಅಂತಾರಾಜ್ಯದ ನೂರಾರು ಸಂಖ್ಯೆಯ ಸ್ವಯಂಸೇವಕರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇಕೊ ವಾಲೆಂಟಿಯರ್ಸ್‌ ಆಫ್‌ ಇಂಡಿಯಾ  ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಣತಿ ನಡೆಯಲಿದೆ.  

ಗಣತಿ ಹೇಗೆ ನಡೆಯುತ್ತದೆ?

ಬಿ.ಆರ್‌.ಹಿಲ್ಸ್‌ ಅರಣ್ಯದಲ್ಲಿ ಈ ಹಿಂದೆ ಕಂಡು ಬಂದಿರುವ ಪಕ್ಷಿಗಳ ಕುರಿತು ಅರಣ್ಯ ಇಲಾಖೆ ಚೆಕ್‌ಲಿಸ್ಟ್‌ ನೀಡಲಿದೆ.  ಆ ಚೆಕ್‌ಲಿಸ್ಟ್‌ ನಲ್ಲಿ ದಾಖಲಾಗಿರದ ಹೊಸ ಪ್ರಭೇದದ ಪಕ್ಷಿಗಳನ್ನು ಗಣತಿಯಲ್ಲಿ ಪರಿಗಣಿಸಿ, ದಾಖಲು ಮಾಡಲಾಗುತ್ತದೆ. ಪ್ರಸಕ್ತ ಋತುವಿನಲ್ಲಿ ವಲಸೆ ಬಂದಿರುವ ಹಕ್ಕಿಗಳ ಕುರಿತು ಈಗಾಗಲೇ ಸ್ವಯಂಸೇವಕರಿಗೆ ಮಾಹಿತಿ ನೀಡಲಾಗುತ್ತದೆ. 

ಎಂ.ಎಂ.ಹಿಲ್ಸ್‌ನಲ್ಲಿ 253 ಪ್ರಭೇದದ ಪಕ್ಷಿಗಳು ದಾಖಲು

ಮಲೈ ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಎಕೋ ಟೂರಿಸಂ, ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ ಹಾಗೂ ಹೊಳೆಮತ್ತಿ ನೇಚರ್ ಫೌಂಡೇಷನ್ ಸಂಯುಕ್ತಾಶ್ರದಲ್ಲಿ ಪಕ್ಷಿ ಗಣತಿ ನಡೆದಿದೆ. ಗಣತಿಯಲ್ಲಿ ಒಟ್ಟು 253 ಪ್ರಭೇದದ ಪಕ್ಷಿಗಳನ್ನು ದಾಖಲಿಸಲಾಗಿದೆ. ಗಣತಿಗೆ ರಾಜ್ಯ ಹಾಗೂ ಅಂತರರಾಜ್ಯದ 500ಕ್ಕೂ ಹೆಚ್ಚು ಸ್ವಯಂಸೇವಕರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 120 ಪರಿಣತ ಸ್ವಯಂಸೇವಕರನ್ನು ಆಯ್ಕೆ ಮಾಡಿ ವಿವಿಧ ವಲಯಗಳಲ್ಲಿ ಎರಡು ದಿನಗಳ ಕಾಲ ಪಕ್ಷಿ ಗಣತಿ ನಡೆಸಲಾಗಿದೆ.

ಹೊಸ ಮತ್ತು ಹಳೆ ಪ್ರಭೇದದ ಪಕ್ಷಿಗಳು ಸೇರಿ ಅವನತಿ ಅಂಚಿನಲ್ಲಿರುವ ವಿವಿಧ ಪಕ್ಷಿಗಳು ಕಂಡಿದ್ದಲ್ಲದೇ, ವಿದೇಶದಿಂದ ವಲಸೆ ಬಂದ ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಗಣತಿ ಸಂದರ್ಭದಲ್ಲಿ ಒಟ್ಟು 253 ಪಕ್ಷಿ ಪ್ರಭೇದಗಳನ್ನು ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಣತಿ ಮಾಡಿ ಪಟ್ಟಿ ಮಾಡಿದ್ದರು. ಅಳಿವಿನಂಚಿನಲ್ಲಿರುವ 4 ವಿಶೇಷ ಪ್ರಭೇದದ ಹಕ್ಕಿಗಳು ಕಂಡು ಬಂದಿವೆ.

ರಾಜ್ಯವ್ಯಾಪಿ ಗಣತಿಗೆ ಮನವಿ

ರಾಜ್ಯವ್ಯಾಪಿ ಪಕ್ಷಿಗಳ ದಾಖಲೀಕರಣ ಸಲುವಾಗಿ ಬಿಆರ್‌ ಹಿಲ್ಸ್‌, ಎಂ.ಎಂ. ಹಿಲ್ಸ್‌ ಅಲ್ಲದೇ ಎಲ್ಲ ಕಡೆಯೂ ಗಣತಿ ನಡೆಸಿದ್ದರೆ ಸಾಕಷ್ಟು ಹೊಸ ಪ್ರಭೇದಗಳು ಪತ್ತೆಯಾಗುತ್ತಿದ್ದವು. ನಗರ ಪ್ರದೇಶಗಳಲ್ಲೇ ಬಾತುಕೋಳಿ ಜಾತಿಯ ಅನೇಕ ಪಕ್ಷಿಗಳು ಕಂಡು ಬಂದಿವೆ. ''ಬಹುತೇಕರಿಗೆ ಪಕ್ಷಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವು ನಮ್ಮ ಬದುಕಿನ ಭಾಗ ಎಂಬುದನ್ನೇ ಮರೆತಿದ್ದಾರೆ,'' ಎಂದು ಪರಿಸರವಾದಿ ದೊಡ್ಡಬಳ್ಳಾಪುರದ ಚಿದಾನಂದ್‌ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು.

"ಮನುಕುಲಕ್ಕೆ ಕಾಗೆ, ಹದ್ದುಗಳು ಕೂಡ ಸಾಕಷ್ಟು ಕೊಡುಗೆ ನೀಡುತ್ತಿವೆ. ಅವುಗಳು ಇಲ್ಲದೇ ಹೋಗಿದ್ದರೆ ದೊಡ್ಡ ಕಾಯಿಲೆಗಳು ಎದುರಾಗಲಿವೆ. ಎಲ್ಲೆಂದರಲ್ಲಿ ಸತ್ತುಬಿದ್ದಿರುವ ಇಲಿಗಳನ್ನು ತಿಂದು ನಗರವನ್ನು ಸ್ವಚ್ಛ ಮಾಡುವ ಜೊತೆಗೆ ಕಾಯಿಲೆ ಹರಡದಂತೆ ತಡೆಯುತ್ತವೆ. ಒಂದು ವೇಳೆ ಕಾಗೆ, ಹದ್ದು, ಗೂಬೆಗಳ ಸಂತತಿ ಇಲ್ಲದೇ ಹೋಗಿದ್ದರೆ ಕೋವಿಡ್‌ಗಿಂತ ದೊಡ್ಡ ಮಹಾಮಾರಿ ಕಾಯಿಲೆಗಳಾದ ಪ್ಲೇಗ್‌ ಹರಡುತ್ತಿತ್ತು. ಹಾಗಾಗಿ ಅವುಗಳನ್ನು ಗುರುತಿಸಿ, ಸಂರಕ್ಷಿಸುವ ಕೆಲಸಗಳು ಹೆಚ್ಚು ನಡೆಯಬೇಕಿದೆ,'' ಎಂದು ತಿಳಿಸಿದರು.

ಕಾಡು ಬೆಳೆಸುವ ಪಕ್ಷಿಗಳು

''ಪಕ್ಷಿಗಳು ಕಾಡು ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿವೆ. ಬೀಜ ತಿಂದು ಹಿಕ್ಕೆ ಹಾಕುವ ಮೂಲಕ ಅರಣ್ಯ ವೃದ್ಧಿಗೆ ನೆರವಾಗುತ್ತದೆ. ಇದರಿಂದ ವಿವಿಧ ಜಾತಿಯ ಸಸ್ಯ ಪ್ರಭೇದಗಳು ಅಭಿವೃದ್ಧಿಯಾಗುತ್ತವೆ. ಉದಾಹರಣೆಗೆ; ಮನೆ ಪಕ್ಕ ಜಾಗ ಖಾಲಿಯಿದ್ದರೆ  ಕೆಲ ದಿನಗಳಲ್ಲೇ  ವಿವಿಧ ಜಾತಿಯ ಸಸ್ಯಗಳು ಬೆಳೆದಿರುತ್ತವೆ. ಪಕ್ಷಿಗಳು ಬೀಜ ಪ್ರಸರಣ ಮಾಡುವುದರಿಂದ ಹುಟ್ಟಿಕೊಂಡಿವೆ ಎಂಬುದೇ ಅನೇಕರಿಗೆ ತಿಳಿದಿಲ್ಲ. ಮನುಷ್ಯ ಅರಣ್ಯ ಬೆಳೆಸುವುದಕ್ಕಿಂತ ಪಕ್ಷಿಗಳೇ ಹಚ್ಚು ಗಿಡಗಳನ್ನು ನೆಡುತ್ತವೆ. ಜೊತೆಗೆ ಕೀಟಗಳನ್ನು ನಿಯಂತ್ರಿಸಿ ರೈತರ ಬೆಳೆಗಳನ್ನು ಕಾಪಾಡುತ್ತವೆ.  ಹಾಗಾಗಿ ಅವುಗಳಿಗೆ ಕನಿಷ್ಠ ಗೌರವ ತೋರುವ ಕೆಲಸ ನಾವು ಮಾಡಬೇಕಿದೆ,'' ಎಂದು ಚಿದಾನಂದ್‌ ಹೇಳಿದರು.

''ಬಿಆರ್‌ ಹಿಲ್ಸ್‌ನಲ್ಲಿ ಹೊಸ ಪ್ರಭೇದದ ಪಕ್ಷಿಗಳು ಸಾಕಷ್ಟಿವೆ. ಅವುಗಳನ್ನು ದಾಖಲು ಮಾಡುವ ಸಲುವಾಗಿ ಪಕ್ಷಿ ಗಣತಿ ನಡೆಸಲಾಗುತ್ತಿದೆ.  ಪಕ್ಷಿ ತಜ್ಞರು, ಪಕ್ಷಿ ವೀಕ್ಷಣೆಯಲ್ಲಿ ಅನುಭವ ಹೊಂದಿರುವವರಿಗೆ ಗಣತಿಗೆ ಅವಕಾಶ ನೀಡಲಾಗುವುದು.  50ರಿಂದ 70 ಜನರಿಗೆ ಮಾತ್ರ ಅವಕಾಶ ಕೊಡಲು ಚಿಂತಿಸುತ್ತಿದ್ದೇವೆ' ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News