ಬಿಲ್ ಬಾಕಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುತ್ತಿಗೆದಾರನ ಬೆದರಿಕೆ
ಕಾಮಗಾರಿ ಬಿಲ್ ಪಾಪತಿ ಮಾಡಿಲ್ಲ ಎಂದು ಆರೋಪಿಸಿ ಪಾವಗಡದ ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಸುಜಿತ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹೇಳಿಕೆ ನೀಡಿದ್ದು, ಆ ವಿಡಿಯೋ ವೈರಲ್ ಆಗಿದೆ.
ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ಮಂಡಳಿಗಳ ಕಾಮಗಾರಿ ಬಿಲ್ ಪಾಪತಿ ಮಾಡಿಲ್ಲ ಎಂದು ಆರೋಪಿಸಿ ಪಾವಗಡದ ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಸುಜಿತ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ.
ತಾವು ಒಬ್ಬ ಪ್ರಥಮ ದರ್ಜೆ ಗುತ್ತಿಗೆದಾರ ಎಂದು ಹೇಳಿಕೊಂಡಿರುವ ಸುಜಿತ್, "ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎಸ್ಸಿಪಿ ಅಡಿ ರಸ್ತೆ ಹಾಗೂ ಚೆಕ್ ಡ್ಯಾಮ್ಗಳನ್ನು ನಿರ್ಮಾಣ ಮಾಡಿಸಿದ್ದೇನೆ. ಆದರೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಕಾಮಗಾರಿ ಸರಿಯಾಗಿ ಆಗಿಲ್ಲ ಎಂದು ಖುದ್ದು ತಾವೇ ತನಿಖೆ ನಡೆಸಿದ್ದರು. ಆದರೆ ತನಿಖೆಯಲ್ಲಿ ಕಾಮಗಾರಿ ಸರಿಯಾಗಿ ಆಗಿದೆ ಎಂದು ಸಾಬೀತಾಗಿದೆ. ಆದರೂ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಸುಜಿತ್ ಅವರ 45 ಲಕ್ಷ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿಲ್ಲ" ಎಂದು ಆರೋಪಿಸಿದ್ದಾರೆ.
"ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಮಾಡಿಲ್ಲ. ನಾನು ಎಸ್ಸಿ ಆದ ಕಾರಣ ನನ್ನನ್ನು ತುಳಿಯುತ್ತಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಅವರೇ ಕಾರಣ. ಸಣ್ಣಚಿತ್ತಪ್ಪ ಅವರಿಗೆ ಗಲ್ಲು ಶಿಕ್ಷೆ ಆಗಬೇಕು" ಎಂದು ಸುಜಿತ್ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು, ಬಿಲ್ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಮೇ 31 ರಂದು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನ ಗುತ್ತಿಗೆದಾರ ಪಿಎಸ್ ಗೌಡರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ದಿಂದ 2023-24ನೇ ಸಾಲಿನ ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಮನನೊಂದು ಪಿಎಸ್ ಗೌಡರ್ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು.
ಇನ್ನು ಸದ್ಯ ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹರಗಣ ಸಾಕಷ್ಟು ಸದ್ದು ಮಾಡುತ್ತಿದ್ದು, ನಿಗಮದಲ್ಲಿ 90 ಕೋಟಿ ರೂ. ಹಗರಣ ನಡೆದಿದೆ ಎಂದು ಡೆತ್‌ನೋಟ್ ಬರೆದಿಟ್ಟು ಶಿವಮೊಗ್ಗದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು.