ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣ ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ವಿಚಾರಣೆ ನಡೆಸಿದ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ.ಎನ್. ಶಿವಕುಮಾರ್ ಅವರು, "ಸಂತ್ರಸ್ತೆಯ ಅಪಹರಣದಲ್ಲಿ ಭವಾನಿ ರೇವಣ್ಣ ಅವರ ಪಾತ್ರವಿದೆ ಎಂಬುದಕ್ಕೆ ಮೇಲ್ನೋಟಕ್ಕೆ ದಾಖಲೆಗಳಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Update: 2025-10-14 14:33 GMT

ಭವಾನಿ ರೇವಣ್ಣ

Click the Play button to listen to article

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ. ಪ್ರಕರಣದಿಂದ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

ವಿಚಾರಣೆ ನಡೆಸಿದ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ.ಎನ್. ಶಿವಕುಮಾರ್ ಅವರು, "ಸಂತ್ರಸ್ತೆಯ ಅಪಹರಣದಲ್ಲಿ ಭವಾನಿ ರೇವಣ್ಣ ಅವರ ಪಾತ್ರವಿದೆ ಎಂಬುದಕ್ಕೆ ಮೇಲ್ನೋಟಕ್ಕೆ ದಾಖಲೆಗಳಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ಭವಾನಿ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೆ, ಅಪಹರಣ ನಡೆದ ದಿನದಂದು ಭವಾನಿ ಮತ್ತು ಇತರ ಆರೋಪಿಗಳ ನಡುವಿನ ಕರೆ ದಾಖಲೆಗಳು (CDR) ಮತ್ತು ವಾಟ್ಸಾಪ್ ಕರೆಗಳ ವಿಶ್ಲೇಷಣೆ, ಪಿತೂರಿಗೆ ಪೂರಕವಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಇದೇ ಪ್ರಕರಣದಲ್ಲಿ, ಭವಾನಿ ಅವರ ಸೂಚನೆಯಂತೆ ಸಂತ್ರಸ್ತೆಯನ್ನು ತನ್ನ ತೋಟದ ಮನೆಯಲ್ಲಿ ಒತ್ತೆಯಾಳಾಗಿಟ್ಟಿದ್ದ ಆರೋಪ ಎದುರಿಸುತ್ತಿರುವ ಏಳನೇ ಆರೋಪಿ ಕೆ.ಎ. ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. ಆರೋಪಪಟ್ಟಿಯಲ್ಲಿನ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಈ ಹಂತದಲ್ಲಿ ಇಬ್ಬರನ್ನೂ ಆರೋಪ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ, ಹೊಳೆನರಸೀಪುರದ ಗನ್ನಿಗಢ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ಸಂತ್ರಸ್ತೆಯನ್ನು 2024ರ ಏಪ್ರಿಲ್ 29ರಂದು ಅಪಹರಿಸಲಾಗಿತ್ತು. ಈ ಬಗ್ಗೆ ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಮೇರೆಗೆ ಮೈಸೂರಿನ ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ವಿಶೇಷ ತನಿಖಾ ದಳ (SIT), ಭವಾನಿ ರೇವಣ್ಣ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಈ ಹಿಂದೆ, ಕರ್ನಾಟಕ ಹೈಕೋರ್ಟ್ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಮತ್ತು ಇತ್ತೀಚೆಗೆ ಹಾಸನ ಹಾಗೂ ಮೈಸೂರು ಜಿಲ್ಲೆಗಳಿಗೆ ಪ್ರವೇಶಿಸಲು ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಿತ್ತು. ಇದೀಗ ವಿಶೇಷ ನ್ಯಾಯಾಲಯವು ಆರೋಪ ಮುಕ್ತಿ ಅರ್ಜಿಯನ್ನು ತಿರಸ್ಕರಿಸಿರುವುದರಿಂದ, ಭವಾನಿ ರೇವಣ್ಣ ಅವರು ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.

Tags:    

Similar News