ದರ ಏರಿಕೆ ಶಾಕ್‌ | ವಿದ್ಯುತ್ ದರ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾವನೆ

2025-26ಕ್ಕೆ ಯೂನಿಟ್‌ಗೆ 67 ಪೈಸೆ, 2026-27ಕ್ಕೆ 74 ಪೈಸೆ ಮತ್ತು 2027-28ಕ್ಕೆ 91 ಪೈಸೆ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅನುಮೋದನೆಗಾಗಿ ಸಲ್ಲಿಸಲಾಗಿದೆ.

Update: 2024-12-07 02:00 GMT
ವಿದ್ಯುತ್‌ ಸರಬರಾಜು
Click the Play button to listen to article

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮುಂದಿನ ಮೂರು ವರ್ಷಗಳವರೆಗೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಇದು 2025 ರಿಂದ ಪ್ರಾರಂಭವಾಗುವ ವಿದ್ಯುತ್ ಬಿಲ್‌ಗಳ ಮೇಲೆ ದರ ಹೆಚ್ಚಳ ಮಾಡಲು ಈ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅನುಮೋದನೆಗಾಗಿ ಸಲ್ಲಿಸಲಾಗಿದೆ. 2025-26ಕ್ಕೆ ಯೂನಿಟ್‌ಗೆ 67 ಪೈಸೆ, 2026-27ಕ್ಕೆ 74 ಪೈಸೆ ಮತ್ತು 2027-28ಕ್ಕೆ 91 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2024-25ನೇ ಸಾಲಿಗೆ ದರ ಹೆಚ್ಚಳದ ಪ್ರಸ್ತಾವನೆಯನ್ನು ಈ ಹಿಂದೆ ಕೆಇಆರ್‌ಸಿ ತಿರಸ್ಕರಿಸಿತ್ತು.

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿಯಂತಹ ಸರ್ಕಾರಿ ಯೋಜನೆಗಳ ಫಲಾನುಭವಿಗಳಲ್ಲದವರಿಗೆ ಮಾತ್ರ ಈ ಏರಿಕೆ ಪರಿಣಾಮ ಬೀರಬಹುದು. ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆ ಎಲ್ಲಾ ಎಸ್ಕಾಂಗಳಿಗೆ ಒಟ್ಟಿಗೇ ಬಹುತೇಕ ಏಕ ಮಾದರಿಯಲ್ಲಿಯೇ ಆಗಲಿದೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಫೆಬ್ರವರಿಯಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಲಿದ್ದು, ಅಹವಾಲು ಸ್ವೀಕಾರ ಮಾಡಲಿದೆ. ಬಳಿಕ ಸಾಧಕ ಬಾಧಕಗಳ ಪರಿಶೀಲನೆ ಮಾಡಿ, ಪರ ವಿರೋಧಗಳ ಆಲಿಕೆ ನಂತರ ಮಾರ್ಚ್ ತಿಂಗಳಲ್ಲಿ ‌ದರ ಏರಿಕೆ ಬಗ್ಗೆ ಅಂತಿಮ ಆದೇಶ ಹೊರಡಿಸಲಿದ್ದು, ಏಪ್ರಿಲ್ 1, 2025 ರಿಂದ ನೂತನ ದರ ಜಾರಿ ಬರುವ ಸಾಧ್ಯತೆಗಳಿವೆ.

ಪ್ರಸ್ತಾವನೆಯಲ್ಲೇನಿದೆ?

ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್‌ಗೆ 67 ಪೈಸೆ, 75 ಪೈಸೆ ಹಾಗೂ 91 ಪೈಸೆಯಂತೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಮನವಿ ಸಲ್ಲಿಸಿದೆ. ತನ್ನ ದರ ಪರಿಷ್ಕರಣೆಯ ಮನವಿ ಪ್ರಸ್ತಾವನೆಯಲ್ಲಿ ಮುಂದಿನ ವರ್ಷದಲ್ಲಿ (2025-26) ಬೆಸ್ಕಾಂಗೆ 2,572.69 ಕೋಟಿ ರು.ಗಳಷ್ಟು ಆದಾಯ ಕೊರತೆ ಉಂಟಾಗಲಿದೆ. ಇದನ್ನು ನೀಗಿಸಲು 2025ರ ಏ.1ರಿಂದ ಅನ್ವಯವಾಗುವಂತೆ 2025-26ರ ಸಾಲಿಗೆ ಪ್ರತಿ ಯುನಿಟ್‌ಗೆ 67 ಪೈಸೆಯಂತೆ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದೆ.

ಇನ್ನು 2026-27ನೇ ಆರ್ಥಿಕ ವರ್ಷದಲ್ಲಿ 3,018.95 ಕೋಟಿ ರೂ. ಆದಾಯ ಕೊರತೆ ಉಂಟಾಗಲಿದೆ. ಹೀಗಾಗಿ 2026-27ನೇ ಸಾಲಿಗೆ ಪ್ರತಿ ಯುನಿಟ್‌ ಗೆ 75 ಪೈಸೆ ದರ ಹೆಚ್ಚಳ ಮಾಡಬೇಕು. 2027-28ರಲ್ಲಿ 3,882.69 ಕೊರತೆ ಉಂಟಾಗಲಿದ್ದು, ಪ್ರತಿ ಯುನಿಟ್‌ಗೆ 91 ಪೈಸೆ ಪರಿಷ್ಕರಣೆ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.

ಎಚ್‌ಟಿ ಗ್ರಾಹಕರಿಗೆ ನಿಗದಿತ ಶುಲ್ಕವನ್ನೂ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿ ಹಲವು ಅಂಶಗಳನ್ನು ಪ್ರಸ್ತಾವನೆಯಲ್ಲಿ ಸಲ್ಲಿಕೆ ಮಾಡಿದೆ. ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳು ದರ ಏರಿಕೆ ಬಗ್ಗೆ ಪ್ರಸ್ತಾವನೆ ಮಾತ್ರ ಸಲ್ಲಿಸಿವೆ. ಈ ಬಗ್ಗೆ ಕೆಇಆರ್‌ಸಿಯು ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿ ಎಲ್ಲಾ ವರ್ಗದವರಿಂದ ಅಹವಾಲು ಸ್ವೀಕರಿಸುತ್ತದೆ. ಬಳಿಕ ಅಂತಿಮವಾಗಿ ದರ ಹೆಚ್ಚಳದ ಅಂತಿಮ ಆದೇಶ ಹೊರಡಿಸುತ್ತದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಈ ಆದೇಶ ಹೊರ ಬೀಳಲಿದ್ದು, 2025ರ ಏ.1ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದುಬಂದಿದೆ.

Tags:    

Similar News