ಬೆಂಗಳೂರಿಗೆ ಸುರಂಗ ಮಾರ್ಗದ ಬೈಪಾಸ್ ‘ಶಸ್ತ್ರಚಿಕಿತ್ಸೆ’: ಭವಿಷ್ಯಕ್ಕೆ ಆತಂಕಕಾರಿ

ಈ ಶಸ್ತ್ರಚಿಕಿತ್ಸೆಯು 120 ಅಡಿ ಆಳದಲ್ಲಿ, ನಗರದ ಹೃದಯ ಭಾಗವನ್ನು ಕೊರೆಯುವ ಸುರಂಗ ರಸ್ತೆ ಜಾಲದ ರೂಪದಲ್ಲಿರಲಿದ್ದು, ಇದಕ್ಕಾಗಿ ಅತಿ ದುಬಾರಿ ವೆಚ್ಚ ತಗುಲಲಿದೆ.;

Update: 2025-07-23 05:22 GMT

ಉತ್ತರ-ದಕ್ಷಿಣ ಸುರಂಗವು ಸಂಚಾರಕ್ಕೆ ಕುಖ್ಯಾತವಾದ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಸಂಪರ್ಕಿಸುತ್ತದೆ.

ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಅಂದುಕೊಂಡಂತೆ ನಡೆದರೆ, ಬೆಂಗಳೂರು ಒಂದು ದೊಡ್ಡ ಮತ್ತು ಅಪಾಯಕಾರಿ "ಬೈಪಾಸ್ ಶಸ್ತ್ರಚಿಕಿತ್ಸೆ"ಗೆ ಒಳಗಾಗಲಿದೆ. ಈ ಶಸ್ತ್ರಚಿಕಿತ್ಸೆಯು 120 ಅಡಿ ಆಳದಲ್ಲಿ, ನಗರದ ಹೃದಯ ಭಾಗವನ್ನು ಕೊರೆಯುವ ಸುರಂಗ ರಸ್ತೆ ಜಾಲದ ರೂಪದಲ್ಲಿರಲಿದ್ದು, ಇದಕ್ಕಾಗಿ ಅತಿ ದುಬಾರಿ ವೆಚ್ಚ ತಗುಲಲಿದೆ.

ಬೆಂಗಳೂರಿನಲ್ಲಿ ಸಣ್ಣಪುಟ್ಟ ನಿರ್ಮಾಣ ಕಾಮಗಾರಿಗಳನ್ನೇ ಅತ್ಯಂತ ಕಳಪೆಯಾಗಿ ನಿರ್ವಹಿಸಿದ ಇತಿಹಾಸವನ್ನು ಗಮನಿಸಿದರೆ, ಈ ಬೃಹತ್ ಯೋಜನೆಯು ಸಹಜವಾಗಿಯೇ ಆತಂಕ ಮೂಡಿಸಿದೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಸರ್ಕಾರಗಳು, ಒಂದು ಸಣ್ಣ ಮೇಲ್ಸೇತುವೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಅಥವಾ ರಸ್ತೆಗುಂಡಿಗಳನ್ನು ಮುಚ್ಚಲು ನ್ಯಾಯಾಲಯದ ನಿರ್ದೇಶನ ಬೇಕಾಗುವಷ್ಟು ಅಸಮರ್ಥತೆಯನ್ನು ಪ್ರದರ್ಶಿಸಿವೆ.

ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ ಸರ್ಕಾರವು ಬರೋಬ್ಬರಿ 40,000 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಕೈಹಾಕಿದೆ. ಮೊದಲ ಹಂತಕ್ಕೇ 19,000 ಕೋಟಿ ರೂ. ವೆಚ್ಚವಾಗಲಿದೆ. ಫೈಲ್​​ಗಳಲ್ಲಿ ಮತ್ತು ಸುದ್ದಿಗಳ ರೂದದಲ್ಲಿ ಇದು ಆಕರ್ಷಕವಾಗಿ ಕಂಡರೂ, ಒಮ್ಮೆ ತನ್ನ ಹಸಿರು, ಸ್ವಚ್ಛತೆ ಮತ್ತು ಸುಸಜ್ಜಿತ ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿದ್ದ ಈ ನಗರದ ಭವಿಷ್ಯಕ್ಕೆ ಶಾಶ್ವತ ಮತ್ತು ಸರಿಪಡಿಸಲಾಗದ ಹೊಡೆತ ನೀಡುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ.

ಸಂಕುಚಿತ ‘ಸುರಂಗ’ ದೃಷ್ಟಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಲವಾಗಿ ಪ್ರತಿಪಾದಿಸುತ್ತಿರುವ ಈ ಸುರಂಗ ಜಾಲವು ಎರಡು ಹಂತಗಳನ್ನು ಹೊಂದಿದೆ. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸುಮಾರು 18 ಕಿ.ಮೀ. ಮತ್ತು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಸುಮಾರು 22 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ, ಹೊಸೂರು ರಸ್ತೆಯಲ್ಲಿರುವ, ಟ್ರಾಫಿಕ್ ಜಾಮ್‌ಗೆ ಕುಖ್ಯಾತವಾಗಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹಿಡಿದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿರುವ ಹೆಬ್ಬಾಳ ಮೇಲ್ಸೇತುವೆಯವರೆಗೆ ಸುರಂಗ ನಿರ್ಮಾಣವಾಗಲಿದೆ.

ಈ ಯೋಜನೆಯು ಮೊದಲ ನೋಟದಲ್ಲೇ ಅಪ್ರಾಯೋಗಿಕವೆನಿಸುತ್ತದೆ. ನಗರ ಯೋಜನಾ ತಜ್ಞರು ಇದರ ಉಪಯುಕ್ತತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಮುಖ್ಯವಾಗಿ ಖಾಸಗಿ ಕಾರು ಬಳಕೆದಾರರಿಗಾಗಿ ರೂಪಿಸಲಾಗಿದ್ದು, ಒಂದು ಬದಿಯ ಪ್ರಯಾಣಕ್ಕೆ ಸುಮಾರು 330 ರೂ. ಟೋಲ್ ಶುಲ್ಕ ವಿಧಿಸಬೇಕಾಗುತ್ತದೆ. ನಿರ್ಮಾಣದ ಸಮಯದಲ್ಲಿ ನಗರಕ್ಕಾಗುವ ಅನಾಹುತ, ಭೂಗರ್ಭದ ಸೂಕ್ಷ್ಮ ರಚನೆಗಳ ಮೇಲಾಗುವ ಅಜ್ಞಾತ ಪರಿಣಾಮಗಳನ್ನೆಲ್ಲಾ ಪರಿಗಣಿಸಿದರೆ, ಕೇವಲ ಶೇ. 1ರಷ್ಟು ಕಾರು ಬಳಕೆದಾರರಿಗಾಗಿ ಈ ಯೋಜನೆ ರೂಪಿಸಿರುವುದು ಸರ್ಕಾರದ ಸಂಕುಚಿತ ‘ಸುರಂಗ ದೃಷ್ಟಿಕೋನ’ವನ್ನು (Tunnel Vision) ಪ್ರತಿಬಿಂಬಿಸುತ್ತದೆ ಎಂದು ಹಿರಿಯ ಪತ್ರಕರ್ತ ರಶೀದ್ ಕಪ್ಪನ್ ಅಭಿಪ್ರಾಯಪಡುತ್ತಾರೆ.

 

ಪ್ರಮುಖ ಅಡಚಣೆಗಳು

ಭೂಮಿಯಿಂದ 120 ಅಡಿ ಆಳದಲ್ಲಿ ನಿರ್ಮಿಸಲಾಗುವ ಈ ಸುರಂಗವು, ನಗರವು ನಿಂತಿರುವ ಅಂತರ್ಜಲ ಮಾರ್ಗಗಳನ್ನು ಮತ್ತು ಇತರ ನೈಸರ್ಗಿಕ ಭೂವೈಜ್ಞಾನಿಕ ರಚನೆಗಳನ್ನು ಅಸ್ತವ್ಯಸ್ತಗೊಳಿಸಬಹುದು ಎಂದು ಜಲವಿಜ್ಞಾನಿಗಳಾದ ಜಿ.ವಿ. ಹೆಗಡೆ ಮತ್ತು ಕೆ.ಸಿ. ಸುಭಾಷ್ ಚಂದ್ರ ಎಚ್ಚರಿಸಿದ್ದಾರೆ. ಇತ್ತೀಚೆಗೆ ಮಳೆ ಕೊರತೆಯಿಂದ ಅಂತರ್ಜಲದ ಸಮಸ್ಯೆಯನ್ನು ಎದುರಿಸಿದ್ದ ಬೆಂಗಳೂರು, ಈ ಯೋಜನೆಯಿಂದ ಮತ್ತಷ್ಟು ಅಪಾಯಕ್ಕೆ ಸಿಲುಕಬಹುದು. ಏಕೆಂದರೆ ಈ ಸುರಂಗವು ಕನಿಷ್ಠ ಎರಡು ಪ್ರಮುಖ ಶುದ್ಧ ನೀರಿನ ಕೆರೆಗಳ ಸಮೀಪ ಹಾದುಹೋಗಲಿದೆ.

ವರದಿಗಳ ಪ್ರಕಾರ, ಬೆಂಗಳೂರಿನ ಐದು ಪ್ರತಿಷ್ಠಿತ ಸ್ಥಳಗಳಲ್ಲಿ, ವಿಶ್ವವಿಖ್ಯಾತ ಲಾಲ್‌ಬಾಗ್ ಸಸ್ಯೋದ್ಯಾನದ ಒಳಗೂ ಅಗೆಯುವ ಕಾರ್ಯ ನಡೆಯಲಿದೆ. ಇದು ಕನಿಷ್ಠ 250 ಕೋಟಿ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್‌ನ ಕಹಳೆ ಬಂಡೆಯ (gneiss hillock) ಸಮೀಪದಲ್ಲಿ ನಡೆಯಲಿದೆ ಎನ್ನಲಾಗಿದೆ. ಮತ್ತೊಂದು ಕೊರೆಯುವಿಕೆಯ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಸೇಂಟ್ ಜಾನ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದ್ದು, ಇದು ಆಸ್ಪತ್ರೆಯ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಬಹುದು ಎಂದು ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಪರ್ಯಾಯ ಮಾರ್ಗಗಳು

ನಗರದ ಬೆಳವಣಿಗೆ ಮತ್ತು ಸಂಚಾರ ದಟ್ಟಣೆಯನ್ನು ನಿವಾರಿಸಲು ಈ ಮೂಲಸೌಕರ್ಯ ‘ಶಸ್ತ್ರಚಿಕಿತ್ಸೆ’ ಅಗತ್ಯ ಎಂದು ಯೋಜನೆಯ ಪ್ರತಿಪಾದಕರು ವಾದಿಸಬಹುದು. ಆದರೆ ಇದನ್ನು ಮಾಡಲು ಸರಳ ಮಾರ್ಗಗಳಿವೆ. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವುದು, ಗುಂಡಿಗಳಿಲ್ಲದ ಉತ್ತಮ ರಸ್ತೆಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಉತ್ತಮ ಸಂಚಾರ ನಿರ್ವಹಣೆಯನ್ನು ಜಾರಿಗೊಳಿಸುವುದು ನಗರದ ಪ್ರಯಾಣದ ಗುಣಮಟ್ಟದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಆದರೆ ಈ ಪರ್ಯಾಯಗಳು ಸರ್ಕಾರವನ್ನು ಮೆಚ್ಚಿಸಿದಂತೆ ಕಾಣುತ್ತಿಲ್ಲ.

ನಗರದ ಯೋಜನಾಕಾರರು ಮತ್ತು ಸರ್ಕಾರಿ ಸಂಸ್ಥೆಗಳು ಈ ಬೃಹತ್ ಸುರಂಗ ಯೋಜನೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಸಮರ್ಥವೇ ಎಂಬುದು ಇಲ್ಲಿನ ಮೂಲ ಪ್ರಶ್ನೆ. ಇಲ್ಲಿಯವರೆಗೆ ಯಾವುದೇ ಮೂಲಸೌಕರ್ಯ ಯೋಜನೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿಲ್ಲ. ವಿಳಂಬಗಳು ಸರ್ವೇಸಾಮಾನ್ಯವಾಗಿದ್ದು, ಗುಣಮಟ್ಟವು ಅನುಮಾನಾಸ್ಪದವಾಗಿದೆ.

ಪ್ರಯಾಣಿಕರ ಸಂಕಷ್ಟ

ಯಾವುದೇ ನಿರ್ಮಾಣದ ಸಮಯದಲ್ಲಿ, ಪರ್ಯಾಯ ಮಾರ್ಗಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಾರೆ. ಮೆಟ್ರೋ ಮೊದಲ ಹಂತದ ನಿರ್ಮಾಣದ ಸಮಯದಲ್ಲಿ, ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಂತಹ ಪ್ರಮುಖ ಪ್ರದೇಶಗಳು ತಿಂಗಳುಗಟ್ಟಲೆ ಸ್ತಬ್ಧವಾಗಿದ್ದವು. ಈಗ ಪ್ರಸ್ತಾವಿತ ಸುರಂಗ ಯೋಜನೆಯಿಂದ ಉಂಟಾಗಬಹುದಾದ ಅಡಚಣೆಯನ್ನು ಊಹಿಸಲೂ ಭಯವಾಗುತ್ತದೆ.

ಸುಮಾರು 3 ಕಿ.ಮೀ. ಉದ್ದದ ಕೋರಮಂಗಲದ ಈಜಿಪುರ ಮೇಲ್ಸೇತುವೆ ಕಾಮಗಾರಿಯು ಎಂಟು ವರ್ಷಗಳಿಂದ ವಿಳಂಬವಾಗಿದ್ದು, ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಅಪೂರ್ಣ ಪಿಲ್ಲರ್‌ಗಳು, ದೂಳು ತುಂಬಿದ ವಾತಾವರಣದಿಂದಾಗಿ ಅಲ್ಲಿನ ಸಂಚಾರವೇ ಒಂದು ದುಃಸ್ವಪ್ನವಾಗಿದೆ. ಬೆಂಗಳೂರು ಮೆಟ್ರೋ ನಿರ್ಮಾಣವು ವಿಳಂಬಗಳ ಸರಮಾಲೆಯೇ ಆಗಿದೆ. ಇದು ನಗರದ ಕಳಪೆ ಕಾರ್ಯ ಸಂಸ್ಕೃತಿಯನ್ನು ತೋರಿಸುತ್ತದೆ.

ಮೇಲ್ಸೇತುವೆಗಳ ವೈಫಲ್ಯ

ರಾಜ್ಯ ಸರ್ಕಾರವು ಸರಿಯಾದ ಯೋಜನೆಯಿಲ್ಲದೆ ಕಾಮಗಾರಿಗಳನ್ನು ನಿರ್ವಹಿಸಿದ್ದಕ್ಕೆ ಹಲವು ಉದಾಹರಣೆಗಳಿವೆ. ಕಳಪೆ ವಿನ್ಯಾಸದಿಂದಾಗಿ ಅಸ್ತಿತ್ವದಲ್ಲಿದ್ದ ಮೇಲ್ಸೇತುವೆಗಳನ್ನೇ ಕೆಡವಲಾಗಿದೆ. ರಿಚ್ಮಂಡ್ ಮೇಲ್ಸೇತುವೆಯ ಮೇಲೆ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕಾಗಿ ಬಂದಿತ್ತು, ಏಕೆಂದರೆ ಅದರ ಕೆಟ್ಟ ವಿನ್ಯಾಸವು ಸಂಚಾರವನ್ನು ಸುಗಮಗೊಳಿಸುವ ಬದಲು ದಟ್ಟಣೆಗೆ ಕಾರಣವಾಗಿತ್ತು. 2003ರಲ್ಲಿ ನಿರ್ಮಿಸಲಾದ ಹೆಬ್ಬಾಳ ಮೇಲ್ಸೇತುವೆಯು ಅತ್ಯಂತ ಕೆಟ್ಟದಾಗಿ ಯೋಜಿಸಲ್ಪಟ್ಟಿದೆ ಎಂದರೆ, ಇಂದಿಗೂ ಅದು ಪ್ರಯಾಣಿಕರು ಮತ್ತು ಸಂಚಾರಿ ಪೊಲೀಸರಿಗೆ ತಲೆನೋವಾಗಿದೆ.

ಅಂಡರ್‌ಪಾಸ್‌ಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವುಗಳಲ್ಲಿನ ಒಳಚರಂಡಿ ವ್ಯವಸ್ಥೆಗಳು ಕಾರ್ಯನಿರ್ವಹಿಸದ ಕಾರಣ, ಸಾಮಾನ್ಯ ಮಳೆಗೂ ಅವು ಜಲಾವೃತಗೊಳ್ಳುತ್ತವೆ. ಇಂತಹದ್ದೇ ಒಂದು ದುರಂತದಲ್ಲಿ, ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆ.ಆರ್. ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ 23 ವರ್ಷದ ಮಹಿಳಾ ಟೆಕ್ಕಿ ಪ್ರಾಣ ಕಳೆದುಕೊಂಡಿದ್ದರು.

ಭ್ರಷ್ಟಾಚಾರದ ಭೂತ

ಇಲ್ಲಿರುವ ಅತಿದೊಡ್ಡ ಸಮಸ್ಯೆ ಎಂದರೆ ವ್ಯಾಪಕ ಭ್ರಷ್ಟಾಚಾರ. ಬಿಜೆಪಿ ಅಧಿಕಾರದಲ್ಲಿದ್ದಾಗ 40% ಕಮಿಷನ್ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿತ್ತು. ಈಗ ಅದೇ ಗುತ್ತಿಗೆದಾರರು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ.

ಇಂತಹ ಪ್ರಶ್ನಾರ್ಹ ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯ ದಾಖಲೆ, ಭ್ರಷ್ಟಾಚಾರದ ಆರೋಪಗಳು ಮತ್ತು ಉತ್ತರದಾಯಿತ್ವದ ಕೊರತೆಯಿರುವಾಗ, ಸರ್ಕಾರ ಪ್ರಾಯೋಜಿತ ಈ ಸುರಂಗ ರಸ್ತೆ ಯೋಜನೆಯು ನಗರದ ನಿವಾಸಿಗಳ ಬೆನ್ನಿನಲ್ಲಿ ನಡುಕ ಹುಟ್ಟಿಸುತ್ತಿರುವುದರಲ್ಲಿ ಆಶ್ಚರ್ಯವೇನಿದೆಯೇ?

Tags:    

Similar News