ಸ್ಪೀಕರ್‌ ಸೌಂಡ್‌ ಜಾಸ್ತಿ ಇಟ್ಟಿದ್ದಕ್ಕೆ ಅಂಗಡಿ ಮಾಲೀಕನಿಗೆ ಥಳಿತ; ದೂರು

ಬೆಂಗಳೂರಿನಲ್ಲಿ ಭಾನುವಾರ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮುಕೇಶ್ ನೀಡಿದ ದೂರಿನ ಮೇರೆಗೆ ಸುಲೇಮಾನ್, ಶಾನವಾಜ್, ರೋಹಿತ್, ದ್ಯಾನಿಶ್, ತರುಣ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ;

Update: 2024-03-18 07:32 GMT

ಬೆಂಗಳೂರು: ಮೊಬೈಲ್ ಅಂಗಡಿಯಲ್ಲಿ ಲೌಡ್ ಸ್ಪೀಕರ್ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಡೆದಿದೆ.

ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಕೃಷ್ಣ ಟೆಲಿಕಾಂ ಮಾಲೀಕ ಮುಕೇಶ್‌ ಮೇಲೆ ಹಲ್ಲೆ ನಡೆಸಲಾಗಿದೆ. 

ಭಾನುವಾರ (ಮಾ.17) ಸಂಜೆ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮುಕೇಶ್ ನೀಡಿದ ದೂರಿನ ಮೇರೆಗೆ, ಹಲಸೂರು ಗೇಟ್‌ ಪೊಲೀಸರು, ಸುಲೇಮಾನ್, ಶಾನವಾಜ್, ರೋಹಿತ್, ದ್ಯಾನಿಶ್, ತರುಣ ಹಾಗೂ ಇತರರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. 

ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೈರಲ್‌ ವಿಡಿಯೋದಲ್ಲಿ ಮುಕೇಶ್ ಅಂಗಡಿಗೆ ಬರುವ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುತ್ತಾರೆ. ಮುಕೇಶ್ ಹಾಗೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಗುಂಪಿನಲ್ಲಿದ್ದ ಯುವಕನೊಬ್ಬ ಮುಕೇಶ್ ಮೇಲೆ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ನಂತರ ಹಲ್ಲೆಕೋರನಿಗೆ ಮತ್ತೋರ್ವ ಯುವಕನೂ ಸಾಥ್ ನೀಡಿದ್ದು, ತಕ್ಷಣವೇ ಅಂಗಡಿಯಿಂದ ಹೊರಗೆ ಹೋದ ಮುಕೇಶ್ ಹಲ್ಲೆಕೋರ ಯುವಕರಿಗೆ ತಿರುಗೇಟು ನೀಡುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಆರೋಪಿಗಳ ವಿರುದ್ಧ ಐಪಿಸಿ 506, 504, 149, 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದೆ.

ಟ್ವೀಟ್‌ ಮಾಡಿ ಬಿಜೆಪಿ ಆರೋಪ

ಘಟನೆಯನ್ನು ಬಿಜೆಪಿ ಖಂಡಿಸಿದ್ದು, “ಕರ್ನಾಟಕ ಕಾಂಗ್ರೆಸ್ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ. ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ ಎಂದರೆ, ಇದರ ಹಿಂದೆ ಮಜಾವಾದಿ ಸಿದ್ದರಾಮಯ್ಯ ಸರ್ಕಾರದ ಕಳಂಕಿತ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಕೂಡಲೇ ಪಾ'ಕೈ'ಸ್ತಾನ್ ಸರ್ಕಾರ ಮತಾಂಧ ಗೂಂಡಾ ಬ್ರದರ್ಸ್ಗಳನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ!” ಎಂದು ಟ್ವೀಟ್ ಮಾಡಿದೆ.

ದೂರುದಾರ ಹೇಳಿದ್ದೇನು?

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಖೇಶ್, ʼನಾನು ಸಂಜೆ ಆರು ಗಂಟೆಗೆ ಭಜನೆ ಹಾಡು ಇಟ್ಟಿದ್ದೆ, ನಮಗೆ ತೊಂದರೆ ಆಗ್ತಾ ಇದೆ ಹಾಡು ನಿಲ್ಲಿಸು ಅಂತಾ 6 ಮಂದಿ ಬಂದು ಗಲಾಟೆ ಮಾಡಿದ್ದಾರೆ. ನಂತರ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ರೋಲ್ ಕಾಲ್ ಮಾಡಲು ಅಂಗಡಿಗೆ ಬರುತ್ತಿದ್ದರು. ನಾನು ಕೊಡುತ್ತಿರಲಿಲ್ಲ. ಅದೇ ಹಗೆತನದ ಮೇಲೆ ಬಂದು ಗಲಾಟೆ ಮಾಡಿದ್ದಾರೆ. ನನಗೆ ಕನ್ನಡ ಓದಲು ಬರುವುದಿಲ್ಲ. ಎಫ್ಐಆರ್ ನಲ್ಲಿ ಏನು ಬರೆದಿದ್ದಾರೆ ಎಂದು ಗೊತ್ತಿಲ್ಲ. ಪೊಲೀಸರು ಅವರಿಗೆ ಬೇಕಾದ ಹಾಗೆ ಬರೆದಿರಬಹುದುʼ ಎಂದು ಹೇಳಿದ್ದಾರೆ.

Tags:    

Similar News