ಬೆಂಗಳೂರು: ವ್ಯಾಪಾರ ವೈಷಮ್ಯಕ್ಕೆ ಕೊಲೆಗೆ ಸುಪಾರಿ, ಅಂಗಡಿ ಮಾಲೀಕ ಸೇರಿ ಇಬ್ಬರ ಬಂಧನ
ವ್ಯಾಪಾರ ವೈಷಮ್ಯ ಬೆಳೆದು, ಫ್ಯಾಷನ್ಸ್ ಅಂಗಡಿ ಮಾಲೀಕನು ದೂರುದಾರರನ್ನು ಕೊಲೆ ಮಾಡಲು ರಾಜಸ್ಥಾನ ಮೂಲದ ವ್ಯಕ್ತಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ವ್ಯಾಪಾರದಲ್ಲಿನ ಪೈಪೋಟಿಯಿಂದಾಗಿ ಸಹವರ್ತಿ ವ್ಯಾಪಾರಿಯ ಕೊಲೆಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಬಟ್ಟೆ ಅಂಗಡಿ ಮಾಲೀಕ ಹಾಗೂ ಸುಪಾರಿ ಪಡೆದಿದ್ದ ಅಂತಾರಾಜ್ಯ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಗುಂಟೆ ಮುಖ್ಯರಸ್ತೆಯಲ್ಲಿ ಟೆಕ್ಸ್ಟೈಲ್ ಅಂಗಡಿ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಸೆಪ್ಟೆಂಬರ್ 17ರಂದು ಈ ಸಂಬಂಧ ದೂರು ನೀಡಿದ್ದರು. ದೂರುದಾರರ ಅಂಗಡಿಯ ಪಕ್ಕದಲ್ಲಿಯೇ "ಫ್ಯಾಷನ್ಸ್" ಎಂಬ ಬಟ್ಟೆ ಅಂಗಡಿ ಇತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಹೆಚ್ಚು ಸಂಬಳದ ಆಮಿಷವೊಡ್ಡಿ, ದೂರುದಾರರು ತಮ್ಮ ಅಂಗಡಿಗೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ದೂರುದಾರರ ವ್ಯಾಪಾರ ಉತ್ತಮವಾಗಿ ನಡೆಯುತ್ತಿದ್ದರೆ, ಪಕ್ಕದ ಫ್ಯಾಷನ್ಸ್ ಅಂಗಡಿಯ ವ್ಯಾಪಾರ ಕುಸಿದಿತ್ತು. ಇದರಿಂದಾಗಿ ವ್ಯಾಪಾರ ವೈಷಮ್ಯ ಬೆಳೆದು, ಫ್ಯಾಷನ್ಸ್ ಅಂಗಡಿ ಮಾಲೀಕನು ದೂರುದಾರರನ್ನು ಕೊಲೆ ಮಾಡಲು ರಾಜಸ್ಥಾನ ಮೂಲದ ವ್ಯಕ್ತಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ದೂರಿನ ಅನ್ವಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಸೆಪ್ಟೆಂಬರ್ 18, 2025 ರಂದು ಬಾಗಲಗುಂಟೆಯಲ್ಲಿರುವ ಫ್ಯಾಷನ್ಸ್ ಬಟ್ಟೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆತ ಕೊಲೆಗೆ ಸುಪಾರಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆತನ ಮಾಹಿತಿ ಆಧರಿಸಿ, ಅದೇ ದಿನ ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜತ್ ತಾಲ್ಲೂಕಿನಲ್ಲಿ ಸುಪಾರಿ ಪಡೆದಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಯಿತು. ಬಂಧಿತ ಇಬ್ಬರು ಆರೋಪಿಗಳನ್ನು ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.