ಅರಮನೆ ಮೈದಾನದ ಜಾಗ ಬಳಸಿಲ್ಲ, ಟಿಡಿಆರ್‌ ಕೊಡಲ್ಲ; ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪ್ರಬಲ ವಾದ

ರಾಜಮನೆತನದ 15.39 ಎಕರೆ ಜಾಗವನ್ನು ಬಳಕೆ ಮಾಡಿಲ್ಲ. ಇದಕ್ಕೆ ಸಾವಿರಾರು ಕೋಟಿ ಟಿಡಿಆರ್‌ ನೀಡಲಾಗದು” ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದೆ.;

Update: 2025-03-22 02:49 GMT

ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರು ಅರಮನೆ ಭೂಮಿಯನ್ನು ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಬಳಸಿಲ್ಲ. ಹಾಗಾಗಿ ಟಿಡಿಆರ್‌ ರೂಪದಲ್ಲಿ ₹3,011 ಕೋಟಿ ರೂಪಾಯಿ ನೀಡಲಾಗದು. ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದೆ.

ಮೈಸೂರು ರಾಜಮನೆತನವು ಟಿಡಿಆರ್‌ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಅರವಿಂದ್‌ ಕುಮಾರ್‌ ಅವರ ಪೀಠವು ನಡೆಸಿತು.

ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರಿನಲ್ಲಿರುವ 472 ಎಕರೆ ಮತ್ತು 16 ಗುಂಟೆ ಜಾಗವನ್ನು ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ 1996ರ ಅನ್ವಯ ಸ್ವಾಧೀನಪಡಿಸಿಕೊಂಡಿದೆ. ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ವ್ಯವಸ್ಥೆಯು 2004ರಲ್ಲಿ ಜಾರಿಗೆ ಬಂದಿರುವುದರಿಂದ ಮೈಸೂರಿನ ರಾಜವಂಶಸ್ಥರಿಗೆ ₹3,011 ಕೋಟಿ ಟಿಡಿಆರ್‌ ನೀಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದಾರೆ.

“ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ರಾಜ್ಯ ಸರ್ಕಾರದ ಬಳಿ ಇದ್ದ ಭೂಮಿಯನ್ನು ಮಾತ್ರ ಬಳಕೆ ಮಾಡಲಾಗಿದೆ. ರಾಜಮನೆತನದ 15.39 ಎಕರೆ ಜಾಗವನ್ನು ಬಳಕೆ ಮಾಡಿಲ್ಲ. ಇದಕ್ಕೆ ಸಾವಿರಾರು ಕೋಟಿ ಟಿಡಿಆರ್‌ ನೀಡಲಾಗದು” ಎಂದು ಆಕ್ಷೇಪಿಸಲಾಗಿದೆ.

“ಕಾಯಿದೆಯನ್ನು ಎತ್ತಿ ಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್‌ ಸರ್ಕಾರದ ಪರ ಆದೇಶ ಮಾಡಿದೆ. ಆದರೆ, ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕಾಯಿದೆ ಎತ್ತಿ ಹಿಡಿದಿರುವುದಕ್ಕೆ ವಿರುದ್ಧವಾದ ಆದೇಶವಿದೆ. ಕಾಯಿದೆಯ ಸೆಕ್ಷನ್‌ 14ಬಿ ಅನ್ವಯಿಸದಿದ್ದರೂ ರಾಜವಂಶಸ್ಥರಿಗೆ ₹3,011 ಕೋಟಿ ಟಿಡಿಆರ್‌ ಪಾವತಿಸಬೇಕು ಎಂದು ಹೇಳಲಾಗಿದೆ. ಇದು ಸ್ವಾಧೀನ ಪ್ರಕರಣವಲ್ಲ. ಕಾಯಿದೆ ಅನ್ವಯ ಅರಮನೆ ಆಸ್ತಿಯನ್ನು ಸರ್ಕಾರ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಿರುವಾಗ 14ಬಿ ಎಲ್ಲಿ ಅನ್ವಯಿಸುವುದಿಲ್ಲ” ಎಂದು ವಾದಿಸಲಾಗಿದೆ.

“ರಾಜಮನೆತನದವರು ಟಿಡಿಆರ್‌ಗೆ ಅರ್ಹರಲ್ಲ ಎಂಬುದು ಮೊದಲಿನಿಂದ ಸರ್ಕಾರದ ನಿಲುವಾಗಿದೆ. ಒಂದೊಮ್ಮೆ ಅವರು ಅರ್ಹರಾದರೆ ಭೂಸ್ವಾಧೀನ ಕಾಯಿದೆ ಅಡಿ ಪರಿಹಾರಕ್ಕೆ ಮಾತ್ರ ಅರ್ಹರಾಗಿದ್ದಾರೆ” ಎಂದು ವಾದಿಸಲಾಗಿದೆ.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು “ಪ್ರಕರಣದಲ್ಲಿ ಕಾನೂನಿನ ಸೂಕ್ಷ್ಮ ಅಂಶಗಳಿದ್ದು, ಉಭಯ ಪಕ್ಷಕಾರರ ನಡುವೆ ಸಮತೋಲನ ಸಾಧಿಸಬೇಕಿದೆ. ಅಲ್ಲದೇ, ಕಾಯಿದೆ 1996ರ ಕಾಯಿದೆ ಸಿಂಧುತ್ವ ಎತ್ತಿ ಹಿಡಿದಿರುವ ಆದೇಶ ಪ್ರಶ್ನಿಸಿರುವ ಮೇಲ್ಮನವಿಯ ವಿಚಾರವು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಸೆಕ್ಷನ್‌ 14ಬಿ ಅನ್ವಯಿಸುವುದು ಅಥವಾ ಅನ್ವಯಿಸದೇ ಇರುವುದರ ಪರಿಣಾಮವು ಮೇಲ್ಮನವಿಯ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ” ಎಂದು ಹೇಳಿ, ವಿಚಾರಣೆ ಮುಂದೂಡಿದೆ.

Tags:    

Similar News