Metro Fare Hike : ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ 8ರಿಂದ 6 ಲಕ್ಷಕ್ಕೆ ಇಳಿಕೆ

Metro Fare Hike : ಪ್ರದೇಶಾವಾರು ಶೇಕಡಾ 100ರಷ್ಟು ಏರಿಕೆಯಾದ ಮೆಟ್ರೋ ಟಿಕೆಟ್ ದರವನ್ನು ಸರ್ಕಾರ 71% ಸೀಮಿತಗೊಳಿಸಿದರೂ ಪ್ರಯಾಣಿಕರ ಸಂಖ್ಯೆ ಇನ್ನೂ ಏರಿಲ್ಲ.;

Update: 2025-02-18 14:34 GMT
ಮೆಟ್ರೋ ಗೇಟ್​ (ಸಾಂದರ್ಭಿಕ ಚಿತ್ರ)

ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ದರ ಏರಿಕೆ ಮಾಡಿದ ಪರಿಣಾಮವಾಗಿ ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳು ಮಂಗಳವಾರ ತಿಳಿಸಿವೆ.

ಹೆಚ್ಚುವರಿ ದರ ಜಾರಿಗೆ ಮೊದಲು ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರು ಮೆಟ್ರೋ ರೈಲನ್ನು ಬಳಸುತ್ತಿದ್ದರು. ಫೆಬ್ರವರಿ 8 ರಂದು ಬಿಎಂಆರ್​ಸಿಪಿ ಅಧಿಕಾರಿಗಳು ಟಿಕೆಟ್ ದರವನ್ನು ಶೇಕಡಾ 100ರಷ್ಟು ಹೆಚ್ಚಿಸಿದ್ದರು. ಪೀಕ್ ಅವರ್' ವೇಳೆಯಲ್ಲಿ 5 ಶೇಕಡಾ ಹೆಚ್ಚುವರಿ ದರ ವಸೂಲಿ ಮಾಡಲು ಪ್ರಾರಂಭಿಸಿದ್ದರು. ಹೆಚ್ಚುವರಿ ದರ ಜಾರಿಗೆ ಬಂದ 10 ದಿನಗಳ ಬಳಿಕ, ಪ್ರತಿದಿನ ಪ್ರಯಾಣಿಸುವವರ ಸಂಖ್ಯೆ 6.3 ಲಕ್ಷಕ್ಕೆ ಕುಸಿದಿದೆ ಎಂದು ಬಿಎಂಆರ್​ಸಿಎಲ್​ ಮೂಲಗಳು ತಿಳಿಸಿವೆ.

"ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 2.3 ಲಕ್ಷ ಇಳಿಮುಖವಾಗಿದೆ. ಈ ದರ ಹೆಚ್ಚಳದಿಂದ ನಿರೀಕ್ಷಿತ ಆದಾಯ ಗಳಿಸಿಲಾಗಿಲ್ಲ. ಹೀಗಾಗಿ ನಮ್ಮ ಆದಾಯ ಫೆಬ್ರವರಿ 9 ರ ಮುಂಚಿನ ಮಟ್ಟದಲ್ಲಿಯೇ ಅಥವಾ ಅದಕ್ಕಿಂತಲೂ ಕಡಿಮೆಯಾಗಿದೆ," ಎಂದು BMRCL ಮೂಲಗಳು ಪಿಟಿಐಗೆ ತಿಳಿಸಿವೆ.

ಪ್ರದೇಶಾವಾರು ಶೇಕಡಾ 100ರಷ್ಟು ಏರಿಕೆಯಾದ ಮೆಟ್ರೋ ಟಿಕೆಟ್ ದರವನ್ನು ಸರ್ಕಾರ 71% ಸೀಮಿತಗೊಳಿಸಿದರೂ ಪ್ರಯಾಣಿಕರ ಸಂಖ್ಯೆ ಇನ್ನೂ ಏರಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ದರ ಏರಿಕೆ ಶೇಕಡಾ 100 ಕ್ಕಿಂತ ಹೆಚ್ಚಾಗಿರುವ ಪ್ರದೇಶದಲ್ಲಿ ಪುನರ್ ವಿಮರ್ಶೆ ಮಾಡಬೇಕೆಂದು ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರಿಗೆ ನಿರ್ದೇಶನ ನೀಡಿದ ನಂತರ, ಸಂಸ್ಥೆ ದರ ಪರಿಷ್ಕರಿಸಿತ್ತು.

ದರ ಏರಿಕೆಯ ಪರಿಣಾಮದ ಕುರಿತು ಮೌಲ್ಯಮಾಪನ ಮಾಡಲು ಮೆಟ್ರೋ ರೈಲು ಅಧಿಕಾರಿಗಳು ಮಾರ್ಚ್ 1 ರಂದು ಸಮೀಕ್ಷಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಂಸದ ಪಿ.ಸಿ. ಮೋಹನ್ ಮಂಗಳವಾರ ಮೆಟ್ರೋ ದರ ಏರಿಕೆಯಿಂದ ಬೀರಿರುವ ಪರಿಣಾಮದ ಬಗ್ಗೆ ಮಾಹಿತಿ ನೀಡಿದ್ದಾರೆ.

"ಕರ್ನಾಟಕ ಕಾಂಗ್ರೆಸ್ ಸರ್ಕಾರದ ತಪ್ಪು ನಿರ್ವಹಣೆಯಿಂದ ಬೆಂಗಳೂರು ಮೆಟ್ರೋಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಫೆಬ್ರವರಿ 9ರಿಂದ ದರ ಏರಿಕೆ ಜಾರಿಗೆ ಬಂದ ನಂತರ 6.26 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಕಳೆದುಕೊಂಡಿದೆ," ಎಂದು ಮೋಹನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. 

Tags:    

Similar News