ಎಡಕುಮೇರಿ – ಕಡಗರವಳ್ಳಿ ಮಧ್ಯೆ ಭಾರೀ ಭೂ ಕುಸಿತ: ಮಂಗಳೂರು – ಬೆಂಗಳೂರಿಗೆ ರೈಲು ಪುನರಾರಂಭ ಯಾವಾಗ?
ಸ್ಥಗಿತಗೊಂಡ ರೈಲುಗಳು: ಕಣ್ಣೂರು ಎಕ್ಸ್‌ಪ್ರೆಸ್, ಕಾರವಾರ ಎಕ್ಸ್‌ಪ್ರೆಸ್, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ಮುರುಡೇಶ್ವರ ಎಕ್ಸ್‌ಪ್ರೆಸ್
2018ರ ಬಳಿಕ ಈ ವರ್ಷ ಹಾಸನ – ಮಂಗಳೂರು ರೈಲು ಸಂಪರ್ಕ ಭೂ ಕುಸಿತದ ಕಾರಣದಿಂದ ಕಡಿತಗೊಂಡಿದೆ. ರಾಜ್ಯದ ರಾಜಧಾನಿ ಮತ್ತು ಕರಾವಳಿ, ಕೇರಳವನ್ನು ಸಂಪರ್ಕಿಸುವ ಪ್ರಮುಖ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ.
ಎಡಕುಮೇರಿ – ಕಡಗರವಳ್ಳಿ ಮಧ್ಯೆ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಸುಮಾರು 30 ಮೀಟರ್ ಆಳಕ್ಕೆ ಹಳಿಯ ತಳಭಾಗದ ಮಣ್ಣು ಜರಿದು ಹೋಗಿದೆ. 100 ಮೀಟರ್ ಅಗಲದಷ್ಟು ತಡೆಗೋಡೆ ನಿರ್ಮಿಸಬೇಕಿದೆ. ಪ್ರತಿಕೂಲ ಹವಾಮಾನ ಮತ್ತು ಘಟನಾ ಸ್ಥಳಕ್ಕೆ ಯಾವುದೇ ರಸ್ತೆ ಇಲ್ಲದಿರುವುದು, ಸಾಮಗ್ರಿ ತರಲು ತೊಂದರೆಯಾಗಿರುವುದು ದುರಸ್ತಿ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಸುಮಾರು750ಕ್ಕೂ ಹೆಚ್ಚು ಕಾರ್ಮಿಕರು ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನು ಸುಮಾರು 10 ದಿನಗಳು ಬೇಕಾಗಬಹುದು ಎಂದು ರೈಲ್ವೆ ಮೂಲಗಳು ಹೇಳಿವೆ.
ಹಾಗಾಗಿ ಕಣ್ಣೂರು ಎಕ್ಸ್‌ಪ್ರೆಸ್, ಕಾರವಾರ ಎಕ್ಸ್‌ಪ್ರೆಸ್, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿವೆ.
ಹಳಿಯ ತಳವನ್ನು ಗಟ್ಟಿಗೊಳಿಸಲು ಸುಮಾರು 20 ವ್ಯಾಗನ್ಗಳಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಗುಡ್ಡ ಪ್ರದೇಶಗಳಿಗೆ ಬಳಸುವ ಗೇಬಿಯನ್ ಮೆಷ್ (ದಪ್ಪನಾದ ತಂತಿ ಬಲೆ) ಅನ್ನು ಬೇಲಿ ಹಾಕಿ, ಅದರೊಳಗೆ ಬಂಡೆಗಳನ್ನು ತುಂಬಬೇಕು. ಆದರೆ, ಗುಡ್ಡದ ಮಣ್ಣು ತೀರಾ ಮೃದುವಾಗಿರುವುದರಿಂದ ತಂತಿ ಬಲೆ ಹಾಕುವುದೂ ಕಷ್ಟವೆನಿಸಿದೆ. ಜೆಸಿಬಿ, ಕ್ರೇನ್‌ಗಳು ನಿರಂತರ ಕಾರ್ಯನಿರತವಾಗಿವೆ. ಆದರೆ, ಕೆಲವೆಡೆ ಯಂತ್ರಗಳನ್ನು ಒಯ್ಯಲಾಗದ ಸ್ಥಿತಿ ಇದೆ. ಹಾಗಾಗಿ ಬಹುತೇಕ ಕೆಲಸಗಳನ್ನು ಕಾರ್ಮಿಕರೇ ಮಾಡಬೇಕಿದೆ. ಈ ನಡುವೆ ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ಅವರ ನೇತೃತ್ವದ ಹಿರಿಯ ರೈಲ್ವೇ ಅಧಿಕಾರಿಗಳ ತಂಡ ಘಟನಾ ಆಗಮಿಸಿ ಪರಿಶೀಲನೆ ನಡೆಸಿದೆ.
ಈ ಹಿಂದೆ ಬೇಕೋ ಬೇಡವೋ ಎಂಬಂತಿದ್ದ ಈ ಮಾರ್ಗ ಇಂದು ರೈಲ್ವೆ ಇಲಾಖೆಗೆ ಅತ್ಯಂತ ಲಾಭದಾಯಕವಾದ ಮಾರ್ಗವಾಗಿಬಿಟ್ಟಿದೆ. ಕರಾವಳಿ- ರಾಜಧಾನಿ ಬೆಂಗಳೂರು ಮಧ್ಯೆ ರೈಲುಗಳು ಪ್ರಯಾಣಿಕರಿಂದ ಪೂರ್ಣ ತುಂಬಿಯೇ ಸಂಚರಿಸುತ್ತಿವೆ. ಅಲ್ಲದೇ ಪೆಟ್ರೋಲ್, ಅನಿಲ, ಕಲ್ಲಿದ್ದಲು ಮತ್ತು ಇತರ ಸರಕು ಸಾಗಣೆಗೂ ಈ ಮಾರ್ಗವೇ ಜೀವನಾಡಿ. ದೀರ್ಘಕಾಲ ಈ ರೈಲು ಮಾರ್ಗ ಬಂದ್ ಆದರೆ, ಅಗತ್ಯ ಸೇವೆಗಳಿಗೂ ರಾಜಧಾನಿ ಮತ್ತು ಕರಾವಳಿ ಭಾಗ ಪರದಾಡುವಂತಾಗುತ್ತದೆ. ಏಕೆಂದರೆ ಪರ್ಯಾಯವಾಗಿ ಹೋಗುವ ರಸ್ತೆ ಮಾರ್ಗವೂ ಸಹ ಸರಿಯಾಗಿಲ್ಲ. ಶಿರಾಡಿ ಘಾಟಿ ಬಳಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದು, ಅಲ್ಲಲ್ಲಿ ರಸ್ತೆ ಕಿತ್ತು ಹೋಗಿರುವ ಕಾರಣ ಸಂಚಾರ ಕಷ್ಟಕರವಾಗಿದೆ. ಆಗಾಗ ವಾಹನ ಸಂಚಾರ ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಳ್ಳುವುದೂ ಇದೆ. ಈಗಾಗಲೇ ಒತ್ತಡದಿಂದ ನಲುಗಿರುವ ಈ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.