ಅವನತಿಯ ಅಂಚಿನಲ್ಲಿ ಕೆಂಪೇಗೌಡರ ಕೋಟೆ ಕೊತ್ತಲಗಳು; ನಾಡಪ್ರಭು ನೆನಪು ಚುನಾವಣೆಗೆ ಮಾತ್ರ ಸೀಮಿತ!

ಒಕ್ಕಲಿಗ ಧರ್ಮ ಮಹಾಸಭಾ ಸಂಸ್ಥಾಪಕರಾದ ಸಿದ್ದರಾಮ ಚೈತನ್ಯ ಮಹಾಸ್ವಮೀಜಿ , ಮಾಗಡಿಯ ಚಕ್ರಬಾವಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಇತಿಹಾಸ ಸಂಶೋಧಕರಾದ ಶೇಖ್ ಮಸ್ತಾನ್, ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ. ಕೃಷ್ಣಮೂರ್ತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ ಗೌಡ ಮತ್ತಿತರರು ಕೆಂಪೇಗೌಡರ ಕುರುಹುಗಳ ರಕ್ಷಣೆಗೆ ಹೋರಾಟ ನಡೆಸಲು ಮುಂದಾಗಿದ್ದಾರೆ.;

Update: 2025-03-28 03:00 GMT

ಬೆಂಗಳೂರು ನಿರ್ಮಾತೃ ನಾಡಪ್ರಭು ಕಂಪೇಗೌಡರ ಕೋಟೆ ಕೊತ್ತಲಗಳು, ಸ್ಮಾರಕಗಳು ಅವನತಿ ಹಾದಿಯಲ್ಲಿರುವುದು ಕಂಡು ಬಂದಿದೆ. ಬೆಂಗಳೂರು ಸುತ್ತಲಿನ ಪ್ರದೇಶಗಳಾದ ಮಾಗಡಿ, ಯಲಹಂಕಗಳಲ್ಲಿ ಕೆಂಪೇಗೌಡರ ಕುರುಹುಗಳ ಮೇಲೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ  ಕೆಂಪೇಗೌಡರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಚುನಾವಣಾ ಸಂದರ್ಭದಲ್ಲಿ ಒಕ್ಕಲಿಗರ ಮತಗಳ ಕ್ರೂಢೀಕರಣಕ್ಕಾಗಿ ಎಲ್ಲ ಪಕ್ಷಗಳು ಕೆಂಪೇಗೌಡರ ಗುಣಗಾನ ಮಾಡುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಚಿಕ್ಕಪೇಟೆ ಹಾಗೂ ಬಸವನಗುಡಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್‌’ ರೂಪಿಸಲು ನಿರ್ಧರಿಸಲಾಗಿತ್ತು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೆಂಪೇಗೌಡರ ಹೆಸರು, ಪ್ರತಿಮೆ ಬಳಕೆಯಾಗುತ್ತಲೇ ಇದೆ. 

ಆದರೆ, ಕೆಂಪೇಗೌಡರ ಅಡಳಿತ ಕಾಲದ ಕುರುಹುಗಳು, ಶಾಸನಗಳು, ಕೋಟೆ ಕೊತ್ತಲಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಅಧ್ಯಯನಯೋಗ್ಯವಾಗುವಂತೆ ಮಾಡುವಲ್ಲಿ ಮಾತ್ರ ಎಲ್ಲರ ನಿರ್ಲಕ್ಷ್ಯ ಕಂಡುಬರುತ್ತಿದೆ.

ಪ್ರತಿರೋಧ

ಕೆಂಪೇಗೌಡರ ಅನೇಕ ತಾಣಗಳು ಅವಸಾನದ ಅಂಚಿನಲ್ಲಿವೆ. ಕೆಂಪೇಗೌಡರ ಮಹತ್ವಕ್ಕೆ ಸರ್ಕಾರ ಮಾನ್ಯತೆ ನೀಡುತ್ತಿಲ್ಲ ಎಂಬ ಬಗ್ಗೆ ಅನೇಕರು ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ. ಕೃಷ್ಣಮೂರ್ತಿ ಕೋಟೆ ಕಂದಕಗಳನ್ನು ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿದ್ದು, ಪುರಾತತ್ವ ದಾಖಲೆಗಳನ್ನು ಸಂಗ್ರಹಿಸಿ, ಕೆಂಪೇಗೌಡರ ಪರಂಪರೆ ಉಳಿಸಲು ಶ್ರಮಿಸುತ್ತಿದ್ದಾರೆ.

ಈಗ, ಒಕ್ಕಲಿಗ ಧರ್ಮ ಮಹಾಸಭಾ ಸಂಸ್ಥಾಪಕರಾದ ಸಿದ್ದರಾಮ ಚೈತನ್ಯ ಮಹಾಸ್ವಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಗಡಿಯ ಚಕ್ರಬಾವಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಇತಿಹಾಸ ಸಂಶೋಧಕರಾದ ಶೇಖ್ ಮಸ್ತಾನ್, ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ. ಕೃಷ್ಣಮೂರ್ತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ ಗೌಡ ಮತ್ತಿತರರು ಕೆಂಪೇಗೌಡರ ಕುರುಹುಗಳ ರಕ್ಷಣೆಗೆ ಹೋರಾಟ ನಡೆಸಲು ಮುಂದಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ, ಮಾಗಡಿ, ಬೆಂಗಳೂರು ಮತ್ತಿತರೆ ಪ್ರದೇಶಗಳಲ್ಲಿ ಕೆಂಪೇಗೌಡರ ಒಂದೊಂದೇ ಕುರುಹುಗಳು ನಾಶವಾಗುತ್ತಿವೆ. ಮಾಗಡಿಯಲ್ಲಿ ಇತಿಹಾಸದ ಗಂಧ, ಗಾಳಿ ಇಲ್ಲದವರು ಕೆಂಪೇಗೌಡರ ಕೋಟೆಯ ಕಂದಕಗಳನ್ನು ಪುರಾತತ್ವ ಇಲಾಖೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮುಚ್ಚುತ್ತಿದ್ದಾರೆ. ಅವುಗಳನ್ನು ಸಂರಕ್ಷಿಸಿ ಪ್ರವಾಸ ಯೋಗ್ಯ ತಾಣಗಳಾಗಿ ರೂಪಿಸಬೇಕಾಗಿದ್ದ ಸರ್ಕಾರ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ಯಲಹಂಕ ಮತ್ತು ಮಾಗಡಿ ಕೆಂಪೇಗೌಡರ ಇತಿಹಾಸದ ಪ್ರಮುಖ ತಾಣಗಳು. ಮಾಗಡಿ ಕೆಂಪೇಗೌಡರ ನೃಜ ಇತಿಹಾಸವನ್ನು ಅನಾವರಣಗೊಳಿಸುವ ಪ್ರದೇಶ. ಇಲ್ಲಿನ ಕೆಂಪೇಗೌಡರ ಕೋಟೆ ಅವ್ಯವಸ್ಥೆಯ ಆಗರವಾಗಿದ್ದು, ಸುತ್ತಲಿನ ಕಂದಕಗಳು ಮಾಯವಾಗಿವೆ. ದಕ್ಷಿಣ ಭಾಗದಲ್ಲಷ್ಟೇ ಉಳಿದಿರುವ ಕಂದಕವನ್ನು ಮುಚ್ಚಿ ಅದನ್ನು ನಾಮಾವಶೇಷ ಮಾಡಲು ಸ್ಥಳೀಯ ಪುರಸಭೆ ಮುಂದಾಗಿದೆ. ಇದನ್ನು ಖಂಡಿಸಿ ಕೋಟೆ ಕಂದಕವನ್ನು ಉಳಿಸುವಂತೆ ಅನೇಕ ಹೋರಾಟಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಪುರಾತತ್ವ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯ ಪುರಸಭೆ ಜಂಟಿ ಸರ್ವೆಗೆ ಆದೇಶಿಸಿದ್ದರೂ ಸರ್ವೆ ಕಾರ್ಯ ಪ್ರಾರಂಭವಾಗಿಲ್ಲ. ನಿದ್ರಾವಸ್ಥೆಯಲ್ಲಿರುವ ಈ ಸಂಸ್ಥೆಗಳು ತಕ್ಷಣವೇ ಜಂಟಿ ಸರ್ವೆ ನಡೆಸಿ ಮಾಗಡಿ ಕೋಟೆಯ ಕಂದಕಗಳ ರಕ್ಷಣೆ ಮಾಡಬೇಕು ಎಂದು ಸಿದ್ದರಾಮ ಚೈತನ್ಯ ಮಹಾಸ್ವಮೀಜಿ ಒತ್ತಾಯಿಸಿದ್ದಾರೆ.

ಬೆಂಗಳೂರು ಕೋಟೆ

ಬೆಂಗಳೂರು ಕೆ.ಆರ್. ಮಾರುಕಟ್ಟೆಯ ಕೋಟೆಯನ್ನು ಕೆಂಪೇಗೌಡರ ಇತಿಹಾಸ ಸಾರುವ ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು. ಈ ಕೋಟೆಯ ಹೆಬ್ಬಾಗಿಲ ನಿರ್ಮಾಣಕ್ಕಾಗಿ ತನ್ನ ಜೀವತ್ಯಾಗ ಮಾಡಿದ ಕೆಂಪೇಗೌಡರ ಸೊಸೆ ತ್ಯಾಗಮಯಿ ಲಕ್ಷ್ಮಿದೇವಿ ವಿಗ್ರಹವನ್ನು ಕೋಟೆ ಬಾಗಿಲ ಮುಂಭಾಗದಲ್ಲಿ ನಿರ್ಮಿಸಬೇಕು. ಲಕ್ಷ್ಮಿದೇವಿ ಕೊಡುಗೆ ಜಗತ್ತಿಗೆ ತಿಳಿಯುವಂತೆ ಮಾಡಬೇಕು ಎಂದು ಅವರು ಒತ್ತಿಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ ಅಧ್ಯಯನ ಕೇಂದ್ರದ ಕೆಲಸ ತಟಸ್ಥವಾಗಿದ್ದು,ಇದೀಗ ಆ ಜಾಗವೂ ಮಲಮೂತ್ರ ವಿಸರ್ಜನೆಯ ತಾಣವಾಗಿದೆ. ಬೆಂಗಳೂರು ವಿವಿ ಕುಲಪತಿಗಳು ಅಧ್ಯಯನ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡಬೇಕು. ಅಧ್ಯಯನ ಕೇಂದ್ರದ ಕಾಮಗಾರಿಯನ್ನು ತ್ವರಿತಗೊಳಿಸಿ ಕೆಂಪೇಗೌಡರ ಭವ್ಯ ಇತಿಹಾಸ ಮತ್ತು ದೂರದೃಷ್ಟಿ ಯೋಜನೆಗಳ ಕುರಿತ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರವನ್ನು ಪುನರ್ ರಚಿಸುವ ಜೊತೆಗೆ ಆರ್ಥಿಕ ಚೈತನ್ಯ ಕಲ್ಪಿಸಬೇಕು. ನೆನಗುದಿಗೆ ಬಿದ್ದಿರುವ ಮಾಗಡಿ ಕೆಂಪಸಾಗರದ ಹಿರಿಯ ಕೆಂಪೇಗೌಡರ ಸಮಾಧಿ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಬೇಕು. ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಪ್ರದೇಶಗಳಲ್ಲಿ ನಾಡಪ್ರಭುಗಳ ಇತಿಹಾಸ ಸಾರುವ ಸ್ಥಳಗಳನ್ನು ಸಂರಕ್ಷಿಸಿ ಅವುಗಳನ್ನು ಪ್ರವಾಸಿ ತಾಣಗಳಾಗಿ ರೂಪಿಸಬೇಕು. ಕೆಂಪೇಗೌಡರ ವಂಶಸ್ಥರ ಆಳ್ವಿಕೆಯಲ್ಲಿ ಸ್ಥಾಪಿಸಲಾದ, ಜೀರ್ಣೋದ್ಧಾರಗೊಂಡ ದೇವಾಲಯಗಳಲ್ಲಿ ನಾಡಪ್ರಭುಗಳು ನೀಡಿದ ಕೊಡುಗೆ, ದಾನದತ್ತಿಗಳ ವಿವರವಾದ ದೊಡ್ಡ ಫಲಕಗಳನ್ನು ಅಳವಡಿಸಿ ಅವರ ಸಾಧನೆಗಳು ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಎಂದರು.

Tags:    

Similar News