Bellandur Lake | ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ವಿಷಕಾರಿ ನೊರೆ ; ಆರೋಗ್ಯದ ಮೇಲೆ ಬೀರುವ ಪರಿಣಾಮವೇನು?
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಮಿಶ್ರಿತ ನೀರಿನ ಹರಿವು ಹೆಚ್ಚಾಗಿದ್ದು, ಭಾರೀ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ.;
ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಮಿಶ್ರಿತ ನೀರಿನ ಹರಿವು ಹೆಚ್ಚಾಗಿದ್ದು, ಭಾರೀ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ.
ಕೆರೆ ಕೋಡಿಯಲ್ಲಿ ನೊರೆ ಸಂಗ್ರಹವಾಗಿದ್ದು, ಗಾಳಿಯ ಮೂಲಕ ಜನವಸತಿ ಪ್ರದೇಶದ ಕಡೆಗೆ ಹಾರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಬೆಳ್ಳಂದೂರು, ಕರಿಯಮ್ಮ ಅಗ್ರಹಾರ, ಯಮಲೂರು, ಕೆಂಪಾಪುರ, ಚಲಘಟ್ಟ, ನಾಗಸಂದ್ರ ಇಬ್ಬಲೂರು, ದೇವರ ಬೀಸನಹಳ್ಳಿ ಕಾಡುಬೀಸನಹಳ್ಳಿ ಪ್ರದೇಶಗಳಲ್ಲಿ ವಿಷಕಾರಿ ನೊರೆಯಿಂದ ಜನ ಹೈರಣಾಗಿದ್ದಾರೆ.
ನೊರೆಗೆ ಕಾರಣವೇನು?
ಬೆಳ್ಳಂದೂರು ಸುತ್ತಮುತ್ತಲಿನ ಕೈಗಾರಿಕೆಗಳಿಂದ ಸಂಸ್ಕರಿಸದ ರಾಸಾಯನಿಕ ಮಿಶ್ರಿತ ನೀರು ಕೆರೆ ಸೇರುತ್ತಿದ್ದು, ಕೆರೆ ಸಂಪೂರ್ಣ ಕಲುಷಿತವಾಗಿದೆ. ಮಾಲಿನ್ಯಕಾರಿ ನೀರು ಕೆರೆಯಿಂದ ಹೊರ ಹೋಗಲು ಕನಿಷ್ಠ 10-15 ದಿನಗಳು ಬೇಕು. ಈ ಅವಧಿಯಲ್ಲಿ ಸಾವಯವ ವಸ್ತುಗಳು ಕೆರೆಯ ತಳ ಸೇರುತ್ತವೆ. ಬಳಿಕ ಕೆಸರಿನ ರೂಪ ಪಡೆದು ಅಲ್ಲಿಯೇ ಉಳಿಯಲಿವೆ. ಭಾರೀ ಮಳೆ ಸಂದರ್ಭಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಕೆಸರಿನ ರೂಪದಲ್ಲಿರುವ ಮಾಲಿನ್ಯಕಾರಕ ತ್ಯಾಜ್ಯ ಹಾಗೂ ಹೊಸ ಮಲಿನ ನೀರಿನ ಮಧ್ಯೆ ಮಂಥನ ನಡೆದು ನೊರೆ ಉತ್ಪತ್ತಿಯಾಗಲಿದೆ ಎಂಬುದು ತಜ್ಞರ ವಿಶ್ಲೇಷಣೆಯಾಗಿದೆ.
ಇದಲ್ಲದೆ ಕೆರೆಯ ಆಳದಲ್ಲಿರುವ ಗಾಳಿಗುಳ್ಳೆಗಳು ನೀರಿನ ಹರಿವು ಹೆಚ್ಚಾದಾಗ ಮೇಲಕ್ಕೆ ಬಂದು ಹಾರುತ್ತವೆ. ಘನತ್ಯಾಜ್ಯ ವಸ್ತುಗಳಲ್ಲಿರುವ ಬ್ಯಾಕ್ಟಿರಿಯಾಗಳಿಂದಲೂ ನೊರೆ ಸೃಷ್ಟಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ನೊರೆಯಿಂದ ಆರೋಗ್ಯ ಸಮಸ್ಯೆ
ಕಲುಷಿತ ಕೆರೆಯಲ್ಲಿ ಉತ್ಪತ್ತಿಯಾಗುವ ನೊರೆಯು ಜನವಸತಿ ಪ್ರದೇಶಗಳಿಗೆ ಹಾರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ.
ನೊರೆ ನೀರಿನ ದೀರ್ಘಕಾಲದ ಸಂಪರ್ಕದಿಂದ ದದ್ದುಗಳು, ತುರಿಕೆಯಂತಹ ಚರ್ಮರೋಗಗಳಿಗೆ ಕಾರಣವಾಗಬಹುದು. ಕಾಲಾಂತರದಲ್ಲಿ ಸೋರಿಯಾಸಿಸ್ ಕಾಣಿಸಿಕೊಳ್ಳಬಹುದು. ರಾಸಾಯನಿಕ ಮಿಶ್ರಿತ ನೊರೆ ಕಣ್ಣುಗಳಿಗೆ ತಾಕುವುದರಿಂದ ಉರಿ ಕಾಣಿಸಿಕೊಂಡು, ಕಣ್ಣಿಗೆ ಹಾನಿ ಉಂಟು ಮಾಡಬಹುದು.
ಮಕ್ಕಳು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಬರಬಹುದು.ಆಸ್ತಮಾ ಅಥವಾ ಬ್ರಾಂಕೈಟಿಸ್‌ನಂತಹ ಸಮಸ್ಯೆ ಇರುವವರಿಗೆ ಹೆಚ್ಚು ಅಪಾಯಕಾರಿ. ಕೆರೆಯಾ ಕಲುಷಿತ ನೀರಿನಲ್ಲಿರುವ ಅಮೋನಿಯಾ, ಸೀಸ ಹಾಗೂ ಪಾದರಸದಂತಹ ಭಾರ ಲೋಹಗಳು ವಾತಾವರಣಕ್ಕೆ ಸೇರುವುದರಿಂದ ಹಲವು ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿವೆ.
ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ನೊರೆ
ಬೆಳ್ಳಂದೂರು ಕೆರೆಯಲ್ಲಿ ಕೆಲ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ನೊರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಭಾರೀ ಪ್ರಮಾಣದ ನೊರೆಯಲ್ಲಿ ರಾಸಾಯನಿಕ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
ರಾಷ್ಟ್ರೀಯ ಹಸಿರುಪೀಠ ಮಧ್ಯ ಪ್ರವೇಶಿಸಿ ಕೆರೆಯ ಸ್ವಚ್ಛತೆಗೆ ಸೂಚಿಸಿತ್ತು. ಬಿಬಿಎಂಪಿ ಅಧಿಕಾರಿಗಳು ಕೆರೆ ಸ್ವಚ್ಛ ಮಾಡುವುದಾಗಿ ಹೇಳಿದ್ದರೂ ಇಲ್ಲಿಯವರೆಗೆ ಕೆರೆಯಲ್ಲಿ ಅಭಿವೃದ್ಧಿ ಕೆಲಸ ಆಗದಿರುವ ಕಾರಣ ಮತ್ತೆ ನೊರೆ ಕಾಣಿಸಿಕೊಂಡಿದೆ.