ಬೆಳಗಾವಿ ಅಧಿವೇಶನ | ಸಚಿವೆ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ನಿಂದನೆ: ಸಿ ಟಿ ರವಿ ವಿರುದ್ಧ ಸಭಾಪತಿಗೆ ದೂರು

ಸದನದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ಬಿಜೆಪಿ ಹಿರಿಯ ನಾಯಕ ಸಿ ಟಿ ರವಿ ವಿರುದ್ಧ ವಿಧಾನ ಪರಿಷತ್ ಸಭಾಪತಿಗಳಿಗೆ ದೂರು ನೀಡಲಾಗಿದೆ.

Update: 2024-12-19 11:15 GMT

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಕೊನೆಯ ದಿನ ಗುರುವಾರ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಈ ನಡುವೆ ಸದನದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ಬಿಜೆಪಿ ಹಿರಿಯ ನಾಯಕ ಸಿ ಟಿ ರವಿ ವಿರುದ್ಧ ವಿಧಾನ ಪರಿಷತ್ ಸಭಾಪತಿಗಳಿಗೆ ದೂರು ನೀಡಲಾಗಿದೆ.

ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ವಿರುದ್ಧ ರಾಜ್ಯಸಭೆಯಲ್ಲಿ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ದೇಶದ ಗೃಹ ಸಚಿವ ಅಮಿತ್ ಶಾ ವಿರುದ್ಧ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಅಂಬೇಡ್ಕರ್ ಅವರ ಫೋಟೋ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಆಡಳಿತ ಪಕ್ಷದ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ಈ ವೇಳೆ ಸದನ ತೀವ್ರ ಗದ್ದಲದಲ್ಲಿ ಮುಳುಗಿತ್ತು.

ಆ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಕಲಾಪ ಮುಂಡೂಡಿದ ಬಳಿಕವೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಪರಸ್ಪರ ಏರಿದ ದನಿಯ ವಾಗ್ವಾದದಲ್ಲಿ ಮುಳುಗಿದ್ದರು. ಮಾತಿನ ಚಕಮಕಿಯ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿ ನಾಯಕ ಸಿ ಟಿ ರವಿ ನಡುವೆ ಕೂಡ ಪರಸ್ಪರ ವಾಗ್ವಾದ ನಡೆಯಿತು.

ಈ ವೇಳೆ ಸಿ ಟಿ ರವಿ ಪ್ರಯೋಗಿಸಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಪದದ ಹಿನ್ನೆಲೆಯಲ್ಲಿ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.

ತಮ್ಮ ವಿರುದ್ಧ ಪ್ರತಿಪಕ್ಷ ಮುಖಂಡ ಪ್ರಯೋಗಿಸಿದ ಪದದಿಂದ ನೊಂದುಕೊಂಡ ಸಚಿವೆ, ಸದನದಲ್ಲೇ ಕಣ್ಣೀರು ಹಾಕುತ್ತಲೇ ಸದನದಿಂದ ಹೊರ ನಡೆದ ಘಟನೆಯೂ ನಡೆಯಿತು.

ಬಳಿಕ, ಸಿ ಟಿ ರವಿ ಅವರು ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದರು. ಸುಮಾರು ಹತ್ತು ಬಾರಿ ಆ ಪದ ಬಳಸಿ ತಮ್ಮನ್ನು ನಿಂದಿಸಿದರು. ಹಾಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಸಭಾಪತಿ ಹೊರಟ್ಟಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡಿದ್ದಾರೆ.

ಅಶ್ಲೀಲ ಪದ ಬಳಸಿ ನಿಂದಿಸಿದ ಹಿನ್ನೆಲೆಯಲ್ಲಿ ಸಿ ಟಿ ರವಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಪಟ್ಟು ಹಿಡಿದರು. ಬಳಿಕ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

ಅದರ ಬೆನ್ನಲ್ಲೇ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಚಿವೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ್ ಖರ್ಗೆ, ಬೋಸರಾಜ್, ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದರು.

ಆದರೆ, ಆ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ. ಅಂತಹ ಪದ ಬಳಸಿದ ಸಾಕ್ಷಿ ಇದ್ದರೆ ಕೊಡಲಿ. ಕಪೋಲ ಕಲ್ಪಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಅಸಭ್ಯ ನಿಂದನೆ ದೂರಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ಅದು ಕ್ರಿಮಿನಲ್ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಪರಿಷತ್ ಸಭಾಪತಿ ಯವರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಆದರೆ ಆ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Tags:    

Similar News