ಬೆಳಗಾವಿಯಲ್ಲಿ ಆಟೊ ರಿಕ್ಷಾದಲ್ಲೇ ಪ್ರೇಮಿಗಳ ದಾರುಣ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಅಪಘಾತ ಸ್ಥಳದಲ್ಲಿ ಪತ್ತೆಯಾದ ಆಟೊ ರಿಕ್ಷಾದ ಮೇಲ್ಭಾಗದ ಕಬ್ಬಿಣದ ಸಲಾಖೆಗೆ ಹಗ್ಗ ಕಟ್ಟಲಾಗಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.;

Update: 2025-07-01 10:12 GMT

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಯರಗಟ್ಟಿ ಸಮೀಪದ ಹಿರೇನಂದಿ ಗ್ರಾಮದ ಹೊರವಲಯದಲ್ಲಿ, ಪ್ರೇಮಿಗಳಿಬ್ಬರು ಆಟೊ ರಿಕ್ಷಾದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾದ ರಾಘವೇಂದ್ರ ನಾರಾಯಣ ಜಾಧವ (28) ಮತ್ತು ರಂಜಿತಾ ಅಡಿವೆಪ್ಪ ಚೌಬಾರಿ (25) ಆತ್ಮಹತ್ಯೆ ಮಾಡಿಕೊಂಡವರು. ಹಿರೇದನಂದಿ ಗ್ರಾಮವು ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮಕ್ಕೆ ಹೊಂದಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ಸತ್ತಿಗೇರಿ ಗ್ರಾಮಸ್ಥರಿಗೆ ಈ ವಿಷಯ ಗೊತ್ತಾಗಿದೆ. ಪ್ರೇಮಿಗಳು ಸೋಮವಾರ ರಾತ್ರಿ ಮೃತಪಟ್ಟಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಮೂಲಗಳ ಪ್ರಕಾರ, ರಾಘವೇಂದ್ರ ಮತ್ತು ರಂಜಿತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ರಂಜಿತಾ ಅವರಿಗೆ ಬೇರೊಬ್ಬ ಹುಡುಗನೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಅಪಘಾತ ಸ್ಥಳದಲ್ಲಿ ಪತ್ತೆಯಾದ ಆಟೊ ರಿಕ್ಷಾದ ಮೇಲ್ಭಾಗದ ಕಬ್ಬಿಣದ ಸಲಾಖೆಗೆ ಹಗ್ಗ ಕಟ್ಟಲಾಗಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮೃತರಾದ ರಾಘವೇಂದ್ರ ಅವರ ಸಹೋದರ ಸೋಮನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, "ನಮ್ಮ ಸಹೋದರ ಪ್ರೀತಿಯ ವಿಚಾರವಾಗಿ ಮನೆಯಲ್ಲಿ ಏನನ್ನೂ ಹೇಳಿರಲಿಲ್ಲ. ಅವನು ಆಟೊ ಓಡಿಸುತ್ತಿದ್ದ. ಸೋಮವಾರ ಮಧ್ಯಾಹ್ನ ಆಟೊ ತೆಗೆದುಕೊಂಡು ಕೆಲಸಕ್ಕೆ ಹೋದವನು ಮತ್ತೆ ಮನೆಗೆ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಪೊಲೀಸರು ವಿಷಯ ತಿಳಿಸಿದಾಗಲೇ ಘಟನೆ ಗೊತ್ತಾಗಿದೆ. ಚಿಕ್ಕ ಆಟೊದಲ್ಲೇ ಇಬ್ಬರೂ ಹಗ್ಗದಿಂದ ನೇಣು ಹಾಕಿಕೊಂಡ ರೀತಿ ಪತ್ತೆಯಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು," ಎಂದು ಒತ್ತಾಯಿಸಿದ್ದಾರೆ.

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ್ ಮೋಹಿತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. 

Tags:    

Similar News