ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ: ಹೆಚ್ ವಿಶ್ವನಾಥ್
ʻʻಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಪರಸ್ಪರ ಏಕವಚನದಲ್ಲಿ ಕಿತ್ತಾಡುತ್ತಿರುವುದು ನೋಡಿದರೆ ಥೂ...ಛೀ...ಎನಿಸುತ್ತಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆʼʼ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಒಂದು ಕಡೆ ಬಿಜೆಪಿ-ಜೆಡಿಎಸ್ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದನ್ನೆಲ್ಲಾ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಮಾತಿನ ಪ್ರಯೋಗಗಳು ಅಸಹ್ಯ ಹುಟ್ಟಿಸುತ್ತಿವೆʼʼ ಎಂದು ಟೀಕಿಸಿದ್ದಾರೆ.
ʻʻಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಪರಸ್ಪರ ಏಕವಚನದಲ್ಲಿ ಕಿತ್ತಾಡುತ್ತಿರುವುದು ನೋಡಿದರೆ ಅಸಹ್ಯ ಅನಿಸುತ್ತದೆ. ಕನ್ನಡ ಭಾಷೆಯ ಅತ್ಯಾಚಾರ ಆಗುತ್ತಿದೆ. ನಮ್ಮ ಕನ್ನಡ ಚಳವಳಿಗಾರರು ಈಗ ಸಿಡಿದೇಳಬೇಕು. ಇವರು ಜನರೆದುರು ಬೆತ್ತಲಾಗುತ್ತಿದ್ದಾರೆʼʼ ಎಂದು ಕಿಡಿಕಾರಿದರು.
ʻʻಏಕವಚನದ ರುವಾರಿ ನಮ್ಮ ಸಿದ್ದರಾಮಯ್ಯ, ಹೇ...ಹೇ... ಎಂದು ಮಾತನಾಡುತ್ತಾ ಎಲ್ಲರಿಗೂ ದಾರಿ ಮಾಡಿಕೊಟ್ಟಿದ್ದಾರೆ. ಇನ್ನು ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ತಮ್ಮ ಮಕ್ಕಳನ್ನು ಮುಂದೆ ತರಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ಕೌಟುಂಬಿಕ ಹಿತಾಸಕ್ತಿಯೇ ಹೆಚ್ಚಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡದೇ ಇವರ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ನೀನು ಕಳ್ಳ, ನಿಮ್ಮಪ್ಪ ಕಳ್ಳ ಎಂದು ಮೂರು ಪಕ್ಷದವರೂ ಹೊಡೆದಾಡುತ್ತಿದ್ದಾರೆʼʼ ಎಂದು ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.