ವಿಧಾನಮಂಡಲ ಅಧಿವೇಶನ | ಆರಂಭಕ್ಕೂ ಮುನ್ನವೇ ಸರ್ಕಾರಕ್ಕೆ ಪ್ರತಿಭಟನೆ ಬಿಸಿ
ಸೋಮವಾರದಿಂದ(ಜು.15) ಮೊದಲ ದಿನದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಸದನ ಆರಂಭಕ್ಕೂ ಮುನ್ನ ಸರ್ಕಾರದ ಸರಣಿ ಹಗರಣಗಳ ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿತು. ಶಾಸಕರ ಭವನದಿಂದ ವಿಧಾನಸೌಧದವರೆಗೂ ಸರ್ಕಾರದ ವಿರುದ್ಧ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಮಳೆಗಾಲದ ಅಧಿವೇಶನಕ್ಕೆ ಹೋರಾಟದ ಸ್ವಾಗತ ನೀಡಿದರು.
ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಬಿಜೆಪಿ ನಾಯಕರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು. ನಂತರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದರು. ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್, ವಿಶ್ವನಾಥ್ ಸೇರಿದಂತೆ ಬಿಜೆಪಿ ಶಾಸಕರು ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.
ಸದನದ ಮುಖ್ಯ ದ್ವಾರದಲ್ಲೇ ಬಿಜೆಪಿ ಶಾಸಕರು ಪೋಸ್ಟರ್ ಗಳನ್ನ ಹಿಡಿದು ಪ್ರವೇಶಿಸಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಅವರನ್ನು ಹುಡುಕಿ ಕೊಡಿ ಎಂದು ಘೋಷಣೆ ಕೂಗಿದರು. ನಂತರ ಪೊಲೀಸರು ಶಾಸಕರ ಬಳಿ ಇದ್ದ ಪ್ಲೇ ಕಾರ್ಡ್‌ಗಳನ್ನು ವಶಕ್ಕೆ ಪಡೆದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ʻʻಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಕಾಂಗ್ರೆಸ್ ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ. ಅಧಿವೇಶನದಲ್ಲಿ ಮೊದಲಿಗೆ ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳ ಹಗರಣ ಪ್ರಸ್ತಾಪಿಸುತ್ತೇವೆ. ನಂತರ ಮುಡಾ ನಿವೇಶನ ಹಂಚಿಕೆ ಅಕ್ರಮ ಕೈಗೆತ್ತಿಕೊಳ್ಳುತ್ತೇವೆ. ಅಧಿವೇಶನವನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇವೆʼʼ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ʻʻಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಾಗ್ಗೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳುತ್ತಿರುತ್ತಾರೆ. ಈಗ ಉಪ್ಪು ತಿಂದಿದ್ದಾರೆ, ನೀರು ಕುಡಿಸುತ್ತೇವೆʼʼ ಎಂದರು.
ʻʻಆಡಳಿತ ಪಕ್ಷ ಹಲವಾರು ತಪ್ಪುಗಳನ್ನು ಮಾಡಿ ಅನಾಯಾಸವಾಗಿ ಅನೇಕ ವಿಷಯವಸ್ತುಗಳನ್ನು ಪ್ರತಿಪಕ್ಷಗಳಿಗೆ ಕೊಟ್ಟಿದೆ. ಸಂವಿಧಾನದ ಪ್ರತಿ ಹಿಡಿದು ಓಡಾಡುವುದರಿಂದ ಹಕ್ಕು ರಕ್ಷಣೆಯಾಗದು. ಭ್ರಷ್ಟಾಚಾರ ಮುಚ್ಚಿಕೊಳ್ಳಲು ಜಾತಿ ಹೆಸರು ಮುನ್ನೆಲೆಗೆ ತಂದಿದ್ದಾರೆ. ಜಾತಿ ಹೆಸರಿನಲ್ಲಿ ಭ್ರಷ್ಟಾಚಾರ ರಕ್ಷಣೆಗೆ ನಮ್ಮ ಕಾನೂನು, ಸಂವಿಧಾನ ವ್ಯವಸ್ಥೆಯಲ್ಲಿ ಅವಕಾಶವಿಲ್ಲʼʼ ಎಂದು ಸಿ.ಟಿ.ರವಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ವಿಪರ್ಯಾಸವೆಂದರೆ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ಕೆಲವೇ ಕ್ಷಣದಲ್ಲಿ ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾಸಕ ದದ್ದಲ್ ವಿಧಾನಸೌಧದಲ್ಲಿ ಹಾಜರಾದರು.