ಬೀದಿ ಶ್ವಾನಗಳಿಗೆ ಬೇಯಿಸಿದ ಮಾಂಸದೂಟ ; ಚರ್ಚೆಗೆ ಗ್ರಾಸವಾದ ಬಿಬಿಎಂಪಿಯ ನಡೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೀದಿ ಬದಿಯ ಶ್ವಾನಗಳಿಗೆ ಬೇಯಿಸಿದ ಊಟ ಒದಗಿಸುವ ಯೋಜನೆ ಜಾರಿಗೆ ಈಗಾಗಲೇ ಟೆಂಡರ್ ಕರೆದಿದೆ. ಆದರೆ, ಬಿಬಿಎಂಪಿಯ ಈ ನಿರ್ಧಾರ ಸಾರ್ವಜನಿಕರ ಟೀಕೆಗೆ ಗುರಿಯಾದರೆ, ಪ್ರಾಣಿ ಪ್ರಿಯರಿಂದ ಶ್ಲಾಘನೆ ವ್ಯಕ್ತವಾಗಿದೆ.;
ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹಸಿವು ನೀಗಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ ಬೀದಿ ಬದಿಯ ಶ್ವಾನಗಳಿಗೆ ಆಹಾರ ಒದಗಿಸುವ ಯೋಜನೆ ಜಾರಿಗೆ ಮುಂದಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶ್ವಾನಗಳಿಗೆ ಬೇಯಿಸಿದ ಊಟ ಒದಗಿಸುವ ಯೋಜನೆ ಜಾರಿಗೆ ಈಗಾಗಲೇ ಟೆಂಡರ್ ಕರೆದಿದೆ. ಆದರೆ, ಬಿಬಿಎಂಪಿಯ ಈ ನಿರ್ಧಾರ ಸಾರ್ವಜನಿಕರ ಟೀಕೆಗೆ ಗುರಿಯಾದರೆ, ಪ್ರಾಣಿ ಪ್ರಿಯರಿಂದ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿರುವ ಸಾವಿರಾರು ಬೀದಿ ಬದಿಯ ನಾಯಿಗಳ ಕಲ್ಯಾಣ ಹಾಗೂ ಮನುಷ್ಯರ ಮೇಲೆ ದಾಳಿ ತಡೆಯುವ ಉದ್ದೇಶದಿಂದ ಯೋಜನೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳ ಸಮರ್ಥಿಸಿಕೊಂಡಿದ್ದಾರೆ.
ಯೋಜನೆಗೆ ಟೆಂಡರ್ ಕರೆದ ಬಿಬಿಎಂಪಿ
ಶ್ವಾನಗಳಿಗೆ ಬೇಯಿಸಿದ ಆಹಾರ ಒದಗಿಸಲು ಬಿಬಿಎಂಪಿ 2.80 ಕೋಟಿ ರೂ. ಮೊತ್ತದ ಟೆಂಡರ್ ಕರೆದಿದೆ. ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಪ್ರತಿ ವಲಯದಲ್ಲಿ 600 ರಿಂದ 700 ನಾಯಿಗಳಿಗೆ ಮಾಂಸ, ಕೋಳಿ ಮತ್ತು ಮೊಟ್ಟೆ, ಅನ್ನ ಒದಗಿಸುವುದು ಯೋಜನೆಯಲ್ಲಿದೆ.
ಬೆಂಗಳೂರು ನಗರದಲ್ಲಿ ಶ್ವಾನಗಳ ಸಂಖ್ಯೆ, ಅವುಗಳ ಆರೋಗ್ಯಕ್ಕಾಗಿ ಈ ಯೋಜನೆ ಆರಂಭಿಸಲಾಗುತ್ತಿದೆ. ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದಿನಕ್ಕೆ ಗರಿಷ್ಠ 4000 ಶ್ವಾನಗಳಿಗೆ ಆಹಾರ ಸೇವೆ ಒದಗಿಸಲು ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ಎಲ್ಲಾ ಸೇವಾ ಪೂರೈಕೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಒಂದಕ್ಕಿಂತ ಹೆಚ್ಚು ವಲಯಗಳನ್ನು ಹಂಚಿಕೆ ಮಾಡುವ ನಿರ್ಧಾರವು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಒಟ್ಟು ಅರ್ಹ ಏಜೆನ್ಸಿಗಳ ಸಂಖ್ಯೆ ಅವಲಂಬಿಸಿರುತ್ತದೆ. ಸರಾಸರಿ 15 ಕೆ.ಜಿ ತೂಕದ ಶ್ವಾನಗಳಿಗೆ ದಿನಕ್ಕೆ 465-750 ಕೆ.ಸಿ.ಎಲ್ ಅಗತ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರಿಂದ ಆಕ್ಷೇಪ
ಶ್ವಾನಗಳಿಗೆ ಮಾಂಸದೂಟ ನೀಡುವ ಯೋಜನೆಯನ್ನು ಟೀಕಿಸಿರುವ ನಾಗರಿಕರು, ಸರ್ಕಾರದ ಆದ್ಯತೆ ಏನು ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಜನರು ಮೂಲಭೂತ ಆಹಾರ ಪಡೆಯಲು ಆಗುತ್ತಿಲ್ಲ. ಹೀಗಿರುವಾಗ ನಾಯಿಗಳಿಗೆ ಮಾಂಸದೂಟ ನೀಡುವ ನಿರ್ಧಾರ ಸರಿಯಿಲ್ಲ, ತೆರಿಗೆದಾರರ ಹಣ ದುರುಪಯೋಗವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿ ದಾಳಿ ತಡೆಯಲು ಈ ಕ್ರಮ
ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆ ಈ ಯೋಜನೆ ಜಾರಿಗೆ ಮುಂದಾಗಿರುವುದಾಗಿ ಬಿಬಿಎಂಪಿ ಹೇಳಿದೆ.
ನಾಯಿಗಳಿಗೆ ಹೊಟ್ಟೆ ತುಂಬಾ ಊಟ ಹಾಕುವುದರಿಂದ ಜನರ ಮೇಲೆ ದಾಳಿ ನಡೆಸುವುದಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ. ಬೆಂಗಳೂರಿನ ಕೆಲವು ವಾರ್ಡ್ ಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ, ಅಲ್ಲಿ ಯಶಸ್ವಿಯಾದ ಕಾರಣ ಎಲ್ಲಾ ಎಂಟು ವಲಯಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.