Basavaraj Horatti: ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ದಿಢೀರ್​ ರಾಜೀನಾಮೆ!

ಮಾ. 23ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, "ಇಂದಿನ ರಾಜಕಾರಣಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಸ್ಪಷ್ಟಪಡಿಸಿದ್ದರು.;

Update: 2025-03-23 12:10 GMT

ಹನಿಟ್ರ್ಯಾಪ್ ರಾಜಕಾರಣ ಕರ್ನಾಟಕದಲ್ಲಿ ಜೋರು ಸದ್ದು ಮಾಡುತ್ತಿರುವ ನಡುವೆಯೇ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಸ್ಥಾನಕ್ಕೆ ತಕ್ಕ ಗೌರವ ಸಿಗುತ್ತಿಲ್ಲ ಎಂದು ಬೇಸರಿಸಿಕೊಂಡಿರುವ ಅವರು ರಾಜೀನಾಮೆಯನ್ನು ಉಪಸಭಾಪತಿಗೆ ಸಲ್ಲಿಸಿದ್ದಾರೆ.

ಮಾ. 23ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, "ಇಂದಿನ ರಾಜಕಾರಣಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಸ್ಪಷ್ಟಪಡಿಸಿದ್ದರು.

ಮೇ 1ರಿಂದ ಅನ್ವಯವಾಗುವಂತೆ ರಾಜೀನಾಮೆ

ಹೊರಟ್ಟಿ ಅವರು ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಉಪಸಭಾಪತಿ ಡಾ. ಪ್ರಾಣೇಶ್ ಅವರಿಗೆ ರವಾನಿಸಿದ್ದಾರೆ. ಮಾರ್ಚ್ 18ರಂದೇ ಅವರು ರಾಜೀನಾಮೆ ಪತ್ರ ಕಳಿಸಿದ್ದಾಗಿ ತಿಳಿದುಬಂದಿದೆ , "ವೈಯಕ್ತಿಕ ಕಾರಣಗಳಿಂದ ನಾನು ಮೇ 1, 2025ರಿಂದ ಸಭಾಪತಿ ಹುದ್ದೆಯನ್ನು ಹೊಂದುವುದಿಲ್ಲ. ಹೀಗಾಗಿ ಮಾರ್ಚ್ 31ರೊಳಗೆ ರಾಜೀನಾಮೆ ಅಂಗೀಕರಿಸಿ, ಹುದ್ದೆಯಿಂದ ಮುಕ್ತಿಗೊಳಿಸಬೇಕಾಗಿ ವಿನಂತಿಸುತ್ತೇನೆ," ಎಂದು ಬರೆದಿದ್ದಾರೆ.

ಸದನದ ಬೆಳವಣಿಗೆಗಳಿಂದ ಬೇಸರ

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, “ಸದನದೊಳಗೆ ಸದಸ್ಯರ ವರ್ತನೆಗಳಿಂದ ನಾನು ಬೇಸರಗೊಂಡಿದ್ದೇನೆ. ಭಿತ್ತಿ ಪತ್ರಗಳ ಪ್ರದರ್ಶನ, ಸಭಾಪತಿ ಮಾತಿಗೆ ಅಗೌರವ ಅಸಹನೀಯವಾಗಿದೆ. ಹೀಗಿರುವಾಗ ಸದನದಲ್ಲಿ ನನ್ನ ಪಾತ್ರಕ್ಕೆ ಅರ್ಥವಿಲ್ಲ ಅನ್ನಿಸುತ್ತಿದೆ,” ಎಂದು ಹೇಳಿದ್ದರು.

“ನಾನು 45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಹುದ್ದೆ ತ್ಯಜಿಸಿ ಶಿಕ್ಷಕ ವೃತ್ತಿಗೆ ಮರಳುವ ಚಿಂತೆಯಲ್ಲಿದ್ದೇನೆ,” ಎಂದು ಅವರು ಹೇಳಿದರು.

ಮತ್ತೆ ಶಿಕ್ಷಣ ವೃತ್ತಿಗೆ 

ಹಿಂದೆಯೂ ರಾಜೀನಾಮೆ ಕುರಿತು ಹೊರಟ್ಟಿ ಮಾತನಾಡಿದ್ದರು. ಕೆಲ ದಿನಗಳ ಹಿಂದೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ತಯಾರಿ ನಡೆಸಿತ್ತು ಎಂಬ ಊಹಾಪೋಹಗಳ ನಡುವೆಯೇ, “ಅದಕ್ಕೂ ಮುನ್ನವೇ ನಾನು ರಾಜೀನಾಮೆ ನೀಡುತ್ತೇನೆ” ಎಂದು ಹೇಳಿದ್ದರು.

“ನಾನು ಮೇಷ್ಟ್ರಾಗಿ ಆರಂಭಿಸಿ ಇಂದು ಈ ಹುದ್ದೆಗೆ ಬಂದಿದ್ದೇನೆ. ನನ್ನ ಕರ್ತವ್ಯದ ಬಗ್ಗೆ ತೃಪ್ತಿ ಇದೆ. ಶಿಕ್ಷಕ ವೃತ್ತಿಗೆ ಹಿಂದಿರುಗಲು ನಾನು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದರು.

Tags:    

Similar News