Bangalore Stampede | ಕಾಲ್ತುಳಿತ ದುರಂತ; ರಾಜ್ಯ ಸರ್ಕಾರದ ವಿರುದ್ಧ ಮಠಾಧೀಶರಿಂದಲೂ ದೂರು
ಕಲಬುರಗಿಯ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕುಂಬಾರ ಮಹಾಸಂಸ್ಥಾನ ಪೀಠ ಬಸವಮೂರ್ತಿ ಕುಂಬಾರ ಗುಂಡಯ್ಯಶ್ರೀ ಹಾಗೂ ಛಲವಾದಿ ಪೀಠದ ಬಸವನಾಗಿ ದೇವಶ್ರೀ ಸೇರಿ ಹಲವು ಸ್ವಾಮೀಜಿಗಳು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.;
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳ ಸಾವಿನ ಪ್ರಕರಣವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪೂರ್ವ ತಯಾರಿ ಇಲ್ಲದೇ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ ರಾಜ್ಯ ಸರ್ಕಾರ ವಿರುದ್ಧ ಈಗಾಗಲೇ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಮಠಾಧೀಶರು ಕೂಡ ಸರ್ಕಾರದ ವೈಫಲ್ಯವನ್ನು ಖಂಡಿಸಿದ್ದಾರೆ.
ಕಾಲ್ತುಳಿತ ಘಟನೆಗೆ ಕಾರಣವಾದ ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲು ಮಠಾಧೀಶರು ಮುಂದಾಗಿದ್ದಾರೆ. ಕಲಬುರಗಿಯ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕುಂಬಾರ ಮಹಾಸಂಸ್ಥಾನ ಪೀಠ ಬಸವಮೂರ್ತಿ ಕುಂಬಾರ ಗುಂಡಯ್ಯಶ್ರೀ ಹಾಗೂ ಛಲವಾದಿ ಪೀಠದ ಬಸವನಾಗಿ ದೇವಶ್ರೀ ಸೇರಿ ಹಲವು ಸ್ವಾಮೀಜಿಗಳು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಆರ್ಸಿಬಿ ಹಣಕಾಸು ವಹಿವಾಟಿನ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೂ ದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ, ಡಿ ಸಿಎಂ ವಿರುದ್ಧವೂ ದೂರು
ಕಾಲ್ತುಳಿತ ಘಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧವೂ ದೂರು ದಾಖಲಿಸಲು ಮಠಾಧೀಶರ ತಂಡ ಚಿಂತನೆ ನಡೆಸಿದೆ. ದುರಂತದ ನೈತಿಕ ಹೊಣೆ ಹೊತ್ತು ಈ ಮೂವರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಆರ್ಸಿಬಿ ತಂಡಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣಕಾಸಿನ ವ್ಯವಹಾರವಿದೆ. ಹೊರ ದೇಶದವರು ಈ ತಂಡದ ಮೇಲೆ ಭಾರೀ ಹಣ ಹೂಡಿಕೆ ಮಾಡಿದ್ದಾರೆ. ಆದ್ದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದ್ದಾರೆ. ಇನ್ನ ಘಟನೆಗೆ ಸಂಬಂಧಿಸಿ ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸಲು ಮಠಾಧೀಶರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.