Oxygen Tragedy | ಬಿ.ಎ.ಪಾಟೀಲ ಆಯೋಗದ ವರದಿ ತಿರಸ್ಕೃತ; ಡಿ.ಕೆ.ಕುನ್ಹಾ ನೇತೃತ್ವದಲ್ಲಿ ಮರುತನಿಖೆ

ಕೋವಿಡ್‌ ಅವಧಿಯಲ್ಲಿ ಸಂಭವಿಸಿದ್ದ ಚಾಮರಾನಗರ ಆಕ್ಸಿಜನ್‌ ದುರಂತದ ಕುರಿತು ನ್ಯಾ.ಡಿ.ಕೆ ಕುನ್ಹಾ ಆಯೋಗದ ನೇತೃತ್ವದಲ್ಲೇ ಮರು ತನಿಖೆ ನಡೆಸಲು ಕೋವಿಡ್‌ ವರದಿ ಪರಿಶೀಲನೆಗೆ ನೇಮಿಸಿದ್ದ ಸಂಪುಟ ಉಪ ಸಮಿತಿ ನಿರ್ಣಯಿಸಿದೆ.;

Update: 2025-03-28 11:22 GMT

ಚಾಮರಾಜನಗರ ಆಕ್ಸಿಜನ್‌ ದುರಂತ ಪ್ರಕರಣದ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾ. ಬಿ.ಎ.ಪಾಟೀಲ ನೇತೃತ್ವದ ಏಕಸದಸ್ಯ ನ್ಯಾಯಾಂಗ ಆಯೋಗ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಅಲ್ಲದೇ ದುರಂತದ ಮರು ತನಿಖೆ ಜವಾಬ್ದಾರಿಯನ್ನು ನ್ಯಾ.ಜಾನ್‌ ಮೈಕೆಲ್‌ ಡಿ.ಕುನ್ಹಾ ಆಯೋಗಕ್ಕೆ ವಹಿಸಿದ್ದು, ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿಸಿದೆ.

ಕೋವಿಡ್‌ ಅವಧಿಯಲ್ಲಿ ಉಪಕರಣ ಖರೀದಿ ಅವ್ಯವಹಾರದ ತನಿಖೆ ಕೈಗೊಂಡಿರುವ ಮೈಕೆಲ್‌ ಡಿ.ಕುನ್ಹಾ ಆಯೋಗವು ಸರ್ಕಾರಕ್ಕೆ ಈಗಾಗಲೇ ವರದಿ ನೀಡಿದೆ. ಚಾಮರಾಜನಗರ ಆಕ್ಸಿಜನ್‌ ದುರಂತದ ಕುರಿತಂತೆಯೂ ಮರು ತನಿಖೆ ನಡೆಸಲಾಗುವುದು ಎಂದು ಕೋವಿಡ್‌ ವರದಿ ಪರಿಶೀಲನೆಗೆ ನೇಮಿಸಿದ್ದ ಸಂಪುಟ ಉಪ ಸಮಿತಿ ತಿಳಿಸಿದೆ.  

2021ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 36 ರೋಗಿಗಳು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದರು. ಮೈಸೂರಿನಿಂದ ಸಕಾಲಕ್ಕೆ ಆಮ್ಲಜನಕ ಪೂರೈಕೆಯಾಗದ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದರು. ಆದರೆ, ಅಂದಿನ ಬಿಜೆಪಿ ಸರ್ಕಾರವು ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿಯು ಒಟ್ಟು 36 ಮಂದಿ ಮೃತಪಟ್ಟಿರುವ ಕುರಿತು ವರದಿ ನೀಡಿತ್ತು. ಈ ಗೊಂದಲಗಳ ಹಿನ್ನೆಲೆಯಲ್ಲಿ 2022ರಲ್ಲಿ ಬಿಜೆಪಿ ಸರ್ಕಾರ ಹೈಕೋರ್ಟ್‌ ನಿವೃತ್ತ ನ್ಯಾ.ಬಿ.ಎ.ಪಾಟೀಲ್‌ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು.    

ಸಂಪುಟ ಉಪಸಮಿತಿ ಸಭೆಯ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಕೋವಿಡ್‌ ಅವಧಿಯ ಭ್ರಷ್ಟಾಚಾರ ಕುರಿತು ಮೈಕೆಲ್‌ ಡಿ.ಕುನ್ಹಾ ಆಯೋಗ ಸಮಗ್ರ ತನಿಖೆ ನಡೆಸುತ್ತಿದೆ. ಚಾಮರಾಜನಗರ ದುರಂತದ ಬಗ್ಗೆಯೂ ಮರು ತನಿಖೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ದುರಂತ ನಡೆದ ವೇಳೆ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೆವು. ಮೃತರ ಕುಟುಂಬದವರನ್ನೂ ಭೇಟಿ ಮಾಡಿದ್ದೆವು. ಆಮ್ಲಜನಕ ಕೊರತೆಗೆ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿತ್ತು. ಹೀಗಾಗಿ ದುರಂದ ಕುರಿತು ಸಮಗ್ರ ತನಿಖೆ ನಡೆಸಲು ಕುನ್ಹಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಇನ್ನು ಉಪಕರಣಗಳ ಖರೀದಿಯಲ್ಲಾಗಿರುವ ಅವ್ಯವಹಾರದ ಕುರಿತು ಈಗಾಗಲೇ ತನಿಖೆ ನಡೆಸಿರುವ ಮೈಕೆಲ್‌ ಡಿ.ಕುನ್ಹಾ ನೇತೃತ್ವದ ಆಯೋಗ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯನ್ನು ಪರಿಶೀಲಿಸಲು ಸಮಿತಿ ರಚಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕುನ್ಹಾ ಆಯೋಗದ ವರದಿಯಲ್ಲಿ ಹಿಂದಿನ ಆರೋಗ್ಯ ಸಚಿವರ ಪಾತ್ರದ ಕುರಿತ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರ ವಿರುದ್ಧ, ಯಾವ ಕ್ರಮ ಜರುಗಿಸಬೇಕು ಎಂಬ ಕುರಿತಂತೆ ಕಾನೂನು, ಕ್ರಿಮಿನಲ್ ಸಂಬಂಧಿತ ವಿಚಾರಗಳನ್ನು ಗಮನಿಸಲು ಸಹಾಯ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸುಮಾರು 29 ಜನ ಅಧಿಕಾರಿಗಳು ಸಮಿತಿ ನೀಡಿರುವ ನೋಟಿಸ್ ಗೆ ಉತ್ತರ ನೀಡಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಕುನ್ಹಾ ಅವರು ವರದಿಯಲ್ಲಿ ಅನೇಕ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ನಮಗೂ ಅರಿವಿದೆ. ಸೂಕ್ತಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮೈಕೆಲ್‌ ಡಿ.ಕುನ್ಹಾ ವರದಿಯಲ್ಲಿ ಅನೇಕ ವಿಚಾರಗಳಿವೆ. ಆದರೂ ಸಮಿತಿಯವರು ಇದೆಲ್ಲವನ್ನು ನೇರವಾಗಿ ನೋಡಿ ಪ್ರಮಾಣಿಸಬೇಕು, ನಮಗೂ ಇದು ಅರ್ಥವಾಗಬೇಕು. ಇಡೀ ಸಮಿತಿಯ ಸದಸ್ಯರು ಔಷಧಗಳು, ಉಪಕರಣಗಳನ್ನು ವೀಕ್ಷಣೆ ಮಾಡುತ್ತಾರೆ. ಅನೇಕ ಕಡೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಲ್ಲ ಎಂದು ಹೇಳಲಾಗಿದೆ. ಹಾಗಾದರೆ ಅದು ಏನಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಒಂದಷ್ಟನ್ನು ಉಗ್ರಾಣಗಳಿಗೆ, ಜಿಲ್ಲಾ ಕೇಂದ್ರಗಳಿಗೆ ಕಳಿಸಲಾಗಿದೆ ಎನ್ನುವ ಮಾಹಿತಿಯಿದೆ. ಅದಕ್ಕೆ ಸಮಿತಿಯವರು ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳು, ಬೆಂಗಳೂರಿನಲ್ಲೂ ಪರಿಶೀಲನೆ ನಡೆಸುತ್ತದೆ ಎಂದಿದ್ದಾರೆ.

ಕುನ್ಹಾ ವರದಿ ಅಧ್ಯಯನಕ್ಕೆ ಪ್ರತ್ಯೇಕ ತಂಡ

ಮೈಕೆಲ್‌ ಡಿ.ಕುನ್ಹಾ ಅವರ ವಿಸ್ತೃತ ವರದಿಯ ಅಧ್ಯಯನಕ್ಕೆ ಹೆಚ್ಚುವರಿ ಅಧಿಕಾರಿಗಳು ಬೇಕಾಗಿದ್ದಾರೆ. ಹೀಗಾಗಿ ಎರಡು ಅಥವಾ ಮೂವರು ಸದಸ್ಯರನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೋವಿಡ್ ವೇಳೆ ಹೆಚ್ಚುವರಿ 77 ಕೋಟಿ ರೂ. ಹಣ ಪಾವತಿಗೆ ಸಂಬಂಧಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 111 ಜನರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 52 ಜನ ಸಮಯ ಕೇಳಿದ್ದಾರೆ. 29ಮಂದಿ ನೋಟಿಸ್‌ಗೆ ಉತ್ತರವನ್ನೇ ಕೊಡಲಿಲ್ಲ. 31 ಜನರು ಮಾತ್ರ ಉತ್ತರ ಕೊಟ್ಟಿದ್ದಾರೆ. ಪ್ರತಿಕ್ರಿಯೆ ನೀಡದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚುವರಿ ಹಣ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದಲೇ ವಸೂಲಾತಿಗೆ ನಿರ್ದೇಶನ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದಾರೆ.

ಅವಧಿ ಮೀರಿದ ಔಷಧಗಳಿಗೆ 57.51 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ. ಇದರ ಪೈಕಿ 8.44 ಲಕ್ಷ ಕೋಟಿ ರೂ. ವಸೂಲಾಗಿದ್ದು, ಹೆಚ್ಚುವರಿ ಹಣ ಸ್ವೀಕಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್.ಕೆ ಪಾಟೀಲ್ ಹೇಳಿದ್ದಾರೆ.

Tags:    

Similar News