ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ | ಸಿ.ಟಿ.ರವಿ ಮೇಲೆ ಬೆಂಬಲಿಗರಿಂದ ಹಲ್ಲೆ ಯತ್ನ

ಸುವರ್ಣಸೌಧದ ಪರಿಷತ್ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿ.ಟಿ. ರವಿ ಮೇಲೆ ಲಕ್ಷ್ಮಿ ಬೆಂಬಗಲಿಗರು ಏಕಾಏಕಿ ನುಗ್ಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಧಾನಸಭೆ ಮಾರ್ಷಲ್‌ಗಳು ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು

Update: 2024-12-19 13:24 GMT
ಸಿ.ಟಿ. ರವಿ ಮೇಲೆ ಲಕ್ಷ್ಮಿ ಹೆಬ್ಬಾಳಕರ್‌ ಬೆಂಬಲಿಗರಿಂದ ಹಲ್ಲೆ ಯತ್ನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಬಿಜೆಪಿ ಶಾಸಕ ಸಿ ಟಿ ರವಿ ಸದನದ ಒಳಗೆ ಅಶ್ಲೀಲ ಪದ ಬಳಸಿದ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಗುರುವಾರ ದೊಡ್ಡ ಹೈಡ್ರಾಮ ನಡೆಯಿತು. ಬಳಿಕ, ಕಲಾಪದ ಬಿಡುವಿನ ವೇಳೆಯಲ್ಲಿ ಸಿ.ಟಿ. ರವಿ ಮೇಲೆ ಲಕ್ಷ್ಮಿ ಹೆಬ್ಬಾಳಕರ್‌ ಬೆಂಬಲಿಗರು ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಬೆಳಗಾವಿ ಸುವರ್ಣ ವಿಧಾನಸೌಧದ ಪರಿಷತ್ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿ.ಟಿ. ರವಿ ಮೇಲೆ ಲಕ್ಷ್ಮಿ ಬೆಂಬಗಲಿಗರು ಏಕಾಏಕಿ ನುಗ್ಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೂ ಯತ್ನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಧಾನಸಭೆ ಮಾರ್ಷಲ್‌ಗಳು ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಉದ್ರಿಕ್ತರ ಗುಂಪಿನಿಂದ ಸಿ.ಟಿ. ರವಿ ಅವರನ್ನು ಬೇರೆಡೆ ಕರೆದುಕೊಂಡು ಹೋಗಲಾಯಿತು. 

ಲಕ್ಷ್ಮಿ ಹೆಬ್ಬಾಳಕರ್‌ ಬೆಂಬಲಿಗನೊಬ್ಬ ಏಕವಚನದಲ್ಲೇ ಸಿ.ಟಿ. ರವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಒದೆಯಲು ಮುಂದಾದ. ಧೈರ್ಯವಿದ್ದರೆ ಹೊರಗೆ ಬಾ ಎಂದು ಬೆದರಿಕೆ ಹಾಕಿದ್ದಾನೆ. ಆಗ ತಾಳ್ಮೆ ಕಳೆದುಕೊಂಡ ಸಿ.ಟಿ. ರವಿ, "ಬಾ, ಹೊಡಿ ಬಾ, ಅದೇನು ಮಾಡುತ್ತಾರೋ ಬಿಡಿ.." ಎಂದು ಮಾರ್ಷಲ್‌ಗಳಿಗೆ ಹೇಳಿರುವ ವಿಡಿಯೊ ವೈರಲ್ ಆಗಿದೆ.

ಸಿ.ಟಿ. ರವಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್‌ ಬೆಂಬಲಿಗರ ಮಧ್ಯೆ ಗಲಾಟೆ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಉದ್ರಿಕ್ತರನ್ನು ಚದುರಿಸಿದರು. ಈ ವೇಳೆ ಕೆಲ ಬೆಂಬಲಿಗರನ್ನು ವಶಕ್ಕೆ ಪಡೆದರು. ಗಲಾಟೆ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕೂಡ ಕಾಣಿಸಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. 

ಲಕ್ಷ್ಮಿ ಹೆಬ್ಬಾಳಕರ್‌ ಬೆಂಬಲಿಗರ ಗೂಂಡಾ ವರ್ತನೆಗೆ ಕಿಡಿಕಾರಿದ ಸಿ.ಟಿ. ರವಿ, ಸ್ಥಳದಲ್ಲೇ ಕುಳಿತು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಅವರು, ನನ್ನ ಮೇಲೆ ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಗರು ದಾಳಿಗೆ ಯತ್ನಿಸಿದ್ದಾರೆ. ಇದಕ್ಕೆಲ್ಲ ಹೆದರುವ ಜಾಯಮಾನ ನನ್ನದಲ್ಲ. ನಾನು ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸುತ್ತೇನೆ. ಕೆಲ ಗೂಂಡಾಗಳು ನನ್ನ ಕೊಲೆಗೆ ಸಂಚು ರೂಪಿಸಿ, ವಿಧಾನ ಪರಿಷತ್ ಮೊಗಸಾಲೆಗೆ ಬಂದಿದ್ದಾರೆ. ಕಾಂಗ್ರೆಸ್‌ ಸರ್ಕಾರ ಗೂಂಡಾ ರಾಜ್ಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಲಕ್ಷ್ಮಿ ಹೆಬ್ಬಾಳಕರ್‌ ಅವರ ವಿರುದ್ಧ ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ. ನಾನು ಆ ರೀತಿ ಪದಬಳಕೆ ಮಾಡಿದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ವಿಧಾನಸೌಧದಲ್ಲೇ ಒಬ್ಬ ಶಾಸಕರಿನಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಾಣಂತಿಯರ ಸಾವು, ವಕ್ಫ್ ವಿಚಾರವನ್ನು ದಿಕ್ಕು ತಪ್ಪಿಸಲು ಈ ಷಡ್ಯಂತ್ರ್ಯ ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಡಿಜಿಪಿಗೆ ಬಿಜೆಪಿ ನಾಯಕರ ತರಾಟೆ

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರ ಮೇಲೆ ಹಲ್ಲೆ‌ ಯತ್ನಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಅಧಿವೇಶನದ ಭದ್ರತಾ ಉಸ್ತುವಾರಿ ಹೊತ್ತಿರುವ ಎಡಿಜಿಪಿ ಹಿತೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ಬೆಂಬಲಿಗರನ್ನು ವಿಧಾನಸೌಧದ ಮೊಗಸಾಲೆಗೆ ಬಿಟ್ಟಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಗಲಾಟೆ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಮುಂದೆ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಬಂದೋಬಸ್ತ್ ನೇತೃತ್ವ ವಹಿಸಿದ್ದಾರೆ. 

ಡಾ.ಬಿ.ಆರ್‌.ಅಂಬೇಡ್ಕರ್‌ ವಿರುದ್ಧ ರಾಜ್ಯಸಭೆಯಲ್ಲಿ ಅವಮಾನಕರ ಹೇಳಿಕೆ ನೀಡಿದ ಅಮಿತ್‌ ಶಾ ವರ್ತನೆ ಖಂಡಿಸಿ ಪರಿಷತ್‌ನಲ್ಲೂ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಗದ್ದಲ ನಡೆಸಿದರು. ಕಾಂಗ್ರೆಸ್- ಬಿಜೆಪಿ ಸದಸ್ಯರ ಮಾತಿನ ಚಕಮಕಿ ವೇಳೆ ಸಿ.ರವಿ ಅವರು ಲಕ್ಷ್ಮಿ ಹೆಬ್ಬಾಳಕರ್‌ ವಿರುದ್ಧ ಅಶ್ಲೀಲ ಪದ ಬಳಸಿದ ಹಿನ್ನೆಲೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಈ ವೇಳೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಕಣ್ಣೀರು ಹಾಕುತ್ತಲೇ ಸದನದಿಂದ ಹೊರನಡೆದು, ತಮ್ಮ ವಿರುದ್ಧ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ. ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಸಭಾಪತಿಗಳಿಗೆ ದೂರು ನೀಡಿದ್ದರು.

Tags:    

Similar News