Namma Metro | ಮೆಟ್ರೋ ಸಿಬ್ಭಂದಿ ಮೇಲೆ ಹಲ್ಲೆ; ಮೂವರ ಬಂಧನ
ಕಾಡುಗೋಡಿ ಟ್ರೇ-ಪಾರ್ಕ್ ಮೆಟ್ರೊ ನಿಲ್ದಾಣದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.;
ಕಾಡುಗೋಡಿ ಟ್ರೇ-ಪಾರ್ಕ್ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೊಹ್ಮದ್ ಇದ್ರೀಸ್ (30), ಶ್ರೀಶೈಲ (28), ಮಡಿವಾಳಪ್ಪ (27) ಬಂಧಿತರು. ಮತ್ತೊಬ್ಬ ಆರೋಪಿ ವೀರೇಶ್ (30) ಎಂಬಾತ ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
'ಮೆಟ್ರೊ ನಿಲ್ದಾಣದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿ ಭದ್ರತಾ ಸಿಬ್ಬಂದಿಯ ಉಸ್ತುವಾರಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಮೆಟ್ರೊ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿತ್ತು' ಎಂದು ಪೊಲೀಸರು ತಿಳಿಸಿದರು.
ಮದ್ಯದ ಅಮಲಿನಲ್ಲಿ ನಾಲ್ವರು ಮೆಟ್ರೊ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿ ಅವರನ್ನು ತಡೆದಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.