ದಸರಾ ಉದ್ಘಾಟನಾ ವೇದಿಕೆಯಲ್ಲಿ ಬಾನು ಮುಷ್ತಾಕ್ ಬಗ್ಗೆ ಸಿಎಂ ಜತನ; ಎಲ್ಲ ವಿರೋಧಗಳಿಗೆ ಪ್ರತ್ಯುತ್ತರ?

ಕಾರ್ಯಕ್ರಮದ ಆರಂಭದಲ್ಲಿ, ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಹಿರಿಯ ವಯಸ್ಸಿನ ಬಾನು ಮುಷ್ತಾಕ್ ಅವರನ್ನು ಜಾಗರೂಕತೆಯಿಂದ ವೇದಿಕೆಯತ್ತ ಕರೆತಂದರು.

Update: 2025-09-22 16:09 GMT

ಐತಿಹಾಸಿಕ 2025ರ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರ ಬಗ್ಗೆ ತೋರಿದ ವಿಶೇಷ ಕಾಳಜಿ, ಗೌರವ ಚರ್ಚೆಗೆ ಕಾರಣವಾಯಿತು. ಅಲ್ಲದೆ, ತಮ್ಮ ನಿರ್ಧಾರವನ್ನು ಅವರು ಕಾರ್ಯಕ್ರಮದ ವೇಳೆ ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ದಸರಾ ಉದ್ಘಾಟಕರಾಗಿ ಮುಸ್ಲಿಂ ಸಮುದಾಯದ ಸಾಹಿತಿಯನ್ನು ಆಯ್ಕೆ ಮಾಡಿದ್ದಕ್ಕೆ ವ್ಯಕ್ತವಾದ ವಿರೋಧವನ್ನು ಕೋಮು ವಿಷಯವನ್ನಾಗಿ ಪರಿವರ್ತಿಸಲು ಬಿಡದೆ, ಮುಖ್ಯಮಂತ್ರಿಗಳು ತೋರಿದ ಪ್ರಬುದ್ಧತೆ ಮತ್ತು ಜತನದ ನಡವಳಿಕೆಗೆಯೂ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. 

ಬಾನು ಮುಷ್ತಾಕ್ ಅವರ ಹೆಸರನ್ನು ಪ್ರಕಟಿಸಿದಾಗಿನಿಂದ, ಕೆಲವು ಸಂಘಟನೆಗಳು ಮತ್ತು ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. "ದಸರಾ ಒಂದು ಧಾರ್ಮಿಕ ಆಚರಣೆಯಾಗಿದ್ದು, ಹಿಂದೂ ಧರ್ಮದ ನಂಬಿಕೆ ಇಲ್ಲದವರನ್ನು ಉದ್ಘಾಟನೆಗೆ ಕರೆಯುವುದು ಸರಿಯಲ್ಲ" ಎಂಬಂತಹ ಟೀಕೆಗಳು ಕೇಳಿಬಂದಿದ್ದವು. ಕೆಲವರು ಕೋರ್ಟ್​ ಮೆಟ್ಟಿಲೇರಿ ಸೋತರು. ಆದರೆ, ಈ ಎಲ್ಲಾ ವಿರೋಧಗಳಿಗೆ ಜಗ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಂತರು. ಕನ್ನಡದ ಹೆಮ್ಮೆಯ ಸಾಹಿತಿಗೆ, ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಿಳಾ ಲೇಖಕಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.

ಪ್ರತಿ ಹಂತದಲ್ಲೂ ಸಿಎಂ ಕಾಳಜಿ

ತಮ್ಮ ನಿರ್ಧಾರದ ಬದ್ಧತೆಯು ಉದ್ಘಾಟನಾ ಸಮಾರಂಭದ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿತು. ಕಾರ್ಯಕ್ರಮದ ಆರಂಭದಲ್ಲಿ, ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಹಿರಿಯ ವಯಸ್ಸಿನ ಬಾನು ಮುಷ್ತಾಕ್ ಅವರನ್ನು ಜಾಗರೂಕತೆಯಿಂದ ವೇದಿಕೆಯತ್ತ ಕರೆತಂದರು. ಪುಷ್ಪಾರ್ಚನೆಯ ನಂತರ, ವೇದಿಕೆ ಏರುವಾಗ ಮತ್ತು ತಮ್ಮ ಆಸನದಲ್ಲಿ ಕುಳಿತುಕೊಳ್ಳುವಾಗಲೂ ಅವರೊಂದಿಗೇ ಇದ್ದು, ಸೌಜನ್ಯ ಮೆರೆದರು.

 

ವೇದಿಕೆ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸುವ ಸರದಿ ಬಂದಾಗಲೂ, ಮುಖ್ಯಮಂತ್ರಿಗಳು ತಾವೇ ಖುದ್ದಾಗಿ ಮುಂದೆ ನಿಂತು, ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಫಲ -ತಾಂಬೂಲ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಬಾನು ಮುಷ್ತಾಕ್ ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ, ಅವರ ಯೋಗಕ್ಷೇಮ ವಿಚಾರಿಸುತ್ತಿದ್ದ ದೃಶ್ಯವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮತ್ತು ಸಾರ್ವಜನಿಕರ ಗಮನ ಸೆಳೆಯಿತು.

ಕೋಮು ರಾಜಕೀಯಕ್ಕೆ ಅವಕಾಶ ನೀಡದ ಸಿಎಂ

ತಮ್ಮ ನಿರ್ಧಾರದ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಪರವಾಗಿ ಗಟ್ಟಿಯಾಗಿ ನಿಂತಿದ್ದೇನೆ ಎಂಬ ಸಂದೇಶ ರವಾನಿಸಿದರು. ದಸರಾ ಉದ್ಘಾಟನೆಯನ್ನು ಕೋಮು ವಿಷಯವನ್ನಾಗಿ ಪರಿವರ್ತಿಸಿ, ರಾಜಕೀಯ ಲಾಭ ಪಡೆಯಲು ಯತ್ನಿಸಿದವರಿಗೆ ಅವರು ತಮ್ಮ ನಡವಳಿಕೆಯ ಮೂಲಕವೇ ತಕ್ಕ ಉತ್ತರ ನೀಡಿದರು. ಕಾರ್ಯಕ್ರಮದುದ್ದಕ್ಕೂ ಬಾನು ಮುಷ್ತಾಕ್ ಅವರಿಗೆ ನೀಡಿದ ಗೌರವ ಮತ್ತು ತೋರಿದ ಕಾಳಜಿಯು, ಟೀಕಾಕಾರರ ಬಾಯಿ ಮುಚ್ಚಿಸಿತು ಎಂಬುದಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಸಾಮಾಜಿಕ ಕಾರ್ಯಕರ್ತೆ, ವಕೀಲೆ ಹಾಗೂ ಪ್ರಗತಿಪರ ಚಿಂತಕಿಯಾಗಿರುವ ಬಾನು ಮುಷ್ತಾಕ್ ಅವರು, ತಮ್ಮ ‘ಹಾರ್ಟ್ ಲ್ಯಾಂಪ್’ ಕೃತಿಗೆ ಬೂಕರ್ ಪ್ರಶಸ್ತಿ ಗೆಲ್ಲುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಇಂತಹ ಮಹಾನ್ ಚೇತನಕ್ಕೆ ದಸರಾ ಉದ್ಘಾಟನೆಯ ಗೌರವ ನೀಡಿ, ವಿರೋಧಗಳ ನಡುವೆಯೂ ತಮ್ಮ ನಿರ್ಧಾರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಮತ್ತು ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಅವರನ್ನು ಅತ್ಯಂತ ಜತನದಿಂದ ನೋಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ, ಈ ಬಾರಿಯ ದಸರಾ ಉದ್ಘಾಟನೆಯನ್ನು ಸೌಹಾರ್ದತೆ ಮತ್ತು ಅಂತರ್ಗತ ಮೌಲ್ಯಗಳ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ದಾಖಲಿಸಿತು.

 

ಪೊಲೀಸ್ ಭದ್ರತೆ

ಬಾನು ಮುಷ್ತಾಕ್ ಅವರ ಮನೆಗೆ ಕಳೆದ ಕೆಲವು ದಿನಗಳಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇದು ದಸರಾ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಮತ್ತು ಮಹತ್ವದ ಬೆಳವಣಿಗೆ. ನಾಡಹಬ್ಬವನ್ನು ಉದ್ಘಾಟಿಸುವ ಗಣ್ಯರಿಗೆ ಈ ರೀತಿಯ ಬಿಗಿ ಭದ್ರತೆ ನೀಡುವುದು ಇದೇ ಹೊಸದು. ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ವಿವಾದಾತ್ಮಕ ಚರ್ಚೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಭದ್ರತೆಯನ್ನು ಒದಗಿಸಲಾಗಿತ್ತು.

ಆರಂಭದಿಂದಲೇ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿತ್ತು. ಒಬ್ಬ ಸಾಹಿತಿಯ ಮನೆಗೆ, ಅದೂ ದಸರಾ ಉದ್ಘಾಟನೆಯ ಹಿನ್ನೆಲೆಯಲ್ಲಿ ಈ ಪ್ರಮಾಣದ ಭದ್ರತೆ ಒದಗಿಸಿರುವುದು ಅಪರೂಪ ಎಂಬ ಚರ್ಚೆಯೂ ನಡೆದಿದೆ. 

Similar News