Arkavathi Layout Issue | ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು
ಅರ್ಕಾವತಿ ಲೇಔಟ್ ರೀಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸವಾಲು ಎದುರಾಗಿದೆ.
ಅರ್ಕಾವತಿ ಲೇಔಟ್ ರೀ ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ.
ಅರ್ಕಾವತಿ ಬಡಾವಣೆ ನಿವೇಶನದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಸಿಂಗ್ ಗೆಹಲೋಟ್ ಅವರಿಗೆ ದೂರು ನೀಡಿದ್ದಾರೆ.
ಅರ್ಕಾವತಿ ಲೇಔಟ್ ನಿವೇಶನದಾರರಾಗಿರುವ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ರಾಜಶೇಖರ್ ಎಂಬುವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಡಿಎ ಆಯುಕ್ತ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
“ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅರ್ಕಾವತಿ ಲೇಔಟ್ನಲ್ಲಿ ಹಂಚಿಕೆಯಾಗಿದ್ದ ನಿವೇಶನಗಳು ಭೂಗಳ್ಳರ ಪಾಲಾಗುತ್ತಿವೆ. ಅಧಿಕಾರ ದುರ್ಬಳಕೆಯಿಂದ ನಿವೇಶನದಾರರಿಗೆ ತೊಂದರೆಯಾಗುತ್ತಿದೆ” ಎಂದು ಸಿಎಂ ಸಿದ್ದರಾಮಯ್ಯ ಮತ್ತು ಬಿಡಿಎ ಆಯುಕ್ತು ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಏನಿದು ಅರ್ಕಾವತಿ ಲೇಔಟ್ ಪ್ರಕರಣ?
ಬೆಂಗಳೂರು ಹೊರ ವಲಯದ ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು, ಕೆ.ನಾರಾಯಣಪುರ ಸೇರಿ 16 ಹಳ್ಳಿಗಳ ಸುಮಾರು 800 ಎಕರೆ ಜಮೀನನ್ನು ರೈತರಿಂದ ಖರೀದಿಸಿ, ಬಿಡಿಎ ನಿವೇಶನಗಳಾಗಿ ಪರಿವರ್ತನೆ ಮಾಡಿದೆ. ಈ ಜಾಗಗಳನ್ನು ಸೇರಿಸಿ ಬಿಡಿಎ ನಿರ್ಮಿಸಿರುವ ಹೊಸ ಬಡಾವಣೆಗೆ ಅರ್ಕಾವತಿ ಲೇಔಟ್ ಎಂದು ಹೆಸರಿಸಲಾಗಿದೆ. 2004ರಲ್ಲಿ ಬಿಡಿಎ ಅರ್ಕಾವತಿ ಲೇಔಟ್ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ನಿವೇಶನಕ್ಕಾಗಿ ಅರ್ಜಿ ಹಾಕಿದ್ದರು.
2006 ರಲ್ಲಿ ಬಿಡಿಎ 20 ಸಾವಿರ ಜನರನ್ನು ಫಲಾನುಭವಿಗಳಾಗಿ ಮತ್ತು 12 ಸಾವಿರ ಜನರನ್ನು ನಿವೇಶನ ಕೊಂಡುಕೊಳ್ಳುವುವವರಾಗಿ ಪರಿಗಣಿಸಿತ್ತು. ಬಿಡಿಎಯ ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಬಿಡಿಎ ಕೈತೊಳೆದುಕೊಂಡಿತು. ಮತ್ತು 30X40 ನಿವೇಶನಕ್ಕೆ ಎರಡೂವರೆ ಲಕ್ಷ ರೂ. ಮತ್ತು 40X60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ರೂ. ನಂತೆ ಹಣ ಪಡೆದು ಬಿಡಿಎ 12 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡಿತ್ತು. ಇವರಿಗೆ ಬಿಡಿಎ ರಿಜಿಸ್ಟರ್ ಕಮ್ ಸೇಲ್ ಡೀಡ್ ನೀಡಿತ್ತು. ರಿಜಿಸ್ಟರ್ ಕಮ್ ಸೇಲ್ ಡೀಡ್ ಆಗಿದ್ದರಿಂದ ನಿವೇಶನದಾರರು ನಿವೇಶನವನ್ನು ಕನಿಷ್ಠ ಹತ್ತು ವರ್ಷ ಮಾರಾಟ ಮಾಡುವಂತಿಲ್ಲ. ನಿವೇಶನದಾರರು 2006ರಿಂದ ಈವರೆಗೂ ನಿವೇಶನ ಸಂಬಂಧ ತೆರಿಗೆ ಕಟ್ಟುತ್ತಿದ್ದಾರೆ.
ಆದರೆ 2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಕಾವತಿ ನಿವೇಶನಗಳನ್ನು ಹಿಂಪಡೆಯಿತು. ಇದರಿಂದ ನಿವೇಶನದಾರರಿಗೆ ತಮ್ಮ ನಿವೇಶನಕ್ಕೆ ಹೋಗಲು ಬಿಡುತ್ತಿಲ್ಲ. ಇತ್ತ ವಶಪಡಿಸಿಕೊಂಡ ಜಮೀನು ರೈತರಿಗೂ ಹಿಂದಿರುಗಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅರ್ಕಾವತಿಯಲ್ಲಿ ನಿವೇಶನ ಇಲ್ಲ ಕೆಂಪೇಗೌಡ ಲೇಔಟ್ನಲ್ಲಿ ಕೊಡಿಸೋಣ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ನಿವೇಶನದಾರರು ದೂರುತ್ತಿದ್ದಾರೆ.