The Federal Interview: ವಿಜಯೇಂದ್ರ ಆಫರ್ ಮಾಡಿದ್ದು ನಿಜ: ಅನ್ವರ್ ಮಾಣಿಪ್ಪಾಡಿ

‘ಮಾಣಿಪ್ಪಾಡಿ ಅವರೆ ನೀವು 8-9 ವರ್ಷಗಳಿಂದ ಹೋರಾಟ ಮಾಡಿ ಮಾಡಿ ಸಿಕ್ಕಾಪಟ್ಟೆ ದಣಿದಿದ್ದೀರಿ. ನೀವು ಬೇಕಾದರೆ ಯಾವುದಾದರೂ ಒಂದು ಸಂಖ್ಯೆಯನ್ನು ಹೇಳಿ. ನಂತರ ನೀವು ಮೌನವಾಗಿರಬಹುದು ಎಂದು ವಿನಯೇಂದ್ರ ಹೇಳಿದ್ದು ನಿಜ," ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

By :  Anil Basur
Update: 2024-12-20 00:30 GMT
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ

‘ಮಾಣಿಪ್ಪಾಡಿ ಅವರೆ ನೀವು 8-9 ವರ್ಷಗಳಿಂದ ಹೋರಾಟ ಮಾಡಿ ಮಾಡಿ ಸಿಕ್ಕಾಪಟ್ಟೆ ದಣಿದಿದ್ದೀರಿ, ಸೋತಿದ್ದೀರಿ. ನೀವು ಬೇಕಾದರೆ ಯಾವುದಾದರೂ ಒಂದು ಸಂಖ್ಯೆಯನ್ನು ಹೇಳಿ. ಬೇಕಾದರೆ ತೆಗೆದುಕೊಳ್ಳಿ. ನಂತರ ನೀವು ಮೌನವಾಗಿರಬಹುದು’ ಎಂದು ಆಗ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಬಿ.ವೈ. ವಿಜಯೇಂದ್ರ ಹೇಳಿದ್ದು ನಿಜ ಎಂದು ಬಿಜೆಪಿ ನಾಯಕ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

ಆದರೆ ಅದರ ನಂತರ ಆಗಿದ್ದೇ ಬೇರೆ ಎಂಬುದನ್ನು ಅವರು ದ ಫೆಡರಲ್‌ ಕರ್ನಾಟಕಕ್ಕೆ ಸ್ಪಷ್ಟಪಡಿಸಿದ್ದಾರೆ. ಅನ್ವರ್‌ ಮಾಣಿಪ್ಪಾಡಿ ಅವರು ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ವೇಳೆ, 2012 ಮಾರ್ಚ್‌ 26 ರಂದು ಸರ್ಕಾರಕ್ಕೆ ವಿಶೇಷ ವರದಿ ಸಲ್ಲಿಸಿದ್ದರು. 2020ರಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅವರ ವರದಿಯನ್ನು ಮಂಡಿಸಲಾದರೂ ಅದರ ಬಗ್ಗೆ ಚರ್ಚೆಯಾಗಿಲ್ಲ ಹಾಗೂ ವಿಧಾನ ಮಂಡದಲ್ಲಿ ಸ್ವೀಕೃತವಾಗಿಲ್ಲ.

ಈ ಹಿಂದೆ ವರದಿ ಮುಚ್ಚಿಹಾಕಲು ಬಿ.ವೈ. ವಿಜಯೇಂದ್ರ 150 ಕೋಟಿ ಆಫರ್‌ ನೀಡಿದ್ದಾರೆ ಎಂಬರ್ಥ ಬರುವ ಮಾಣಿಪ್ಪಾಡಿ ಹೇಳಿಕೆಯಿರುವ ವಿಡಿಯೋ ವೈರಲ್‌ ಆದ ಬಳಿಕ ಆ ವಿಷಯವನ್ನು ಕಾಂಗ್ರೆಸ್‌ ಅಸ್ತ್ರವಾಗಿ ಬಳಸುತ್ತಿದೆ. ಈ ಬಗ್ಗೆ ಸ್ವತಃ ಮಾಣಿಪ್ಪಾಡಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ‘ದ ಫೆಡರಲ್ ಕರ್ನಾಟಕ’ಕ್ಕೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ವಕ್ಫ್ ಆಸ್ತಿ ಕಬಳಿಕೆ ಕುರಿತು ಕೊಟ್ಟಿರುವ ವರದಿ ಮತ್ತು ಬಿ.ವೈ. ವಿಜಯೇಂದ್ರ ಬಗ್ಗೆ ತಾವು ಈ ಹಿಂದೆ ನೀಡಿದ್ದ ಹೇಳಿಕೆ ಕುರಿತು ಅನ್ವರ್‌ ಮಾಣಿಪ್ಪಾಡಿ ಅವರು ಸವಿಸ್ತಾರವಾಗಿ ಮಾತನಾಡಿದ್ದಾರೆ.

ವಿಜಯೇಂದ್ರ ಆಫರ್ ಕೊಟ್ಟಿದ್ದು ಯಾಕೆ?

ನನ್ನ ವರದಿ ಕುರಿಗೆ ಯಾರಾದರೂ ತಡೆ ಒಡ್ಡಿದರೆ, ವಿರುದ್ಧವಾಗಿ ಮಾತನಾಡಿದರೆ, ನಿರ್ಲಕ್ಷ ಮಾಡಿದರೆ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು. ಹೀಗಿದ್ದಾಗ ಒಂದು ಸಲ ಆಗ ಬಿಜೆಪಿ ಉಪಾಧ್ಯಕ್ಷ ಆಗಿದ್ದ ವಿಜಯೇಂದ್ರ ಭೇಟಿ ಮಾಡಿದ್ದಾಗ, ‘ಮಾಣಿಪ್ಪಾಡಿ ಅವರೆ ನೀವು 8-9 ವರ್ಷಗಳಿಂದ ಹೋರಾಟ ಮಾಡಿ ಮಾಡಿ ಸಿಕ್ಕಾಪಟ್ಟೆ ದಣಿದಿದ್ದೀರಿ, ಸೋತಿದ್ದಿರಿ. ನೀವು ಬೇಕಾದರೆ ಯಾವುದಾದರೂ ಒಂದು ಸಂಖ್ಯೆಯನ್ನು ಹೇಳಿ. ಬೇಕಾದರೆ ತೆಗೆದುಕೊಳ್ಳಿ. ನಂತರ ನೀವು ಮೌನವಾಗಿರಬಹುದು’ ಎಂದಿದ್ದರು. ಅವರ ಮಾತನ್ನು ಕೇಳಿ ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ನಾನು ತಡೆದುಕೊಳ್ಳದೆ ತಕ್ಷಣ ಮಿಡಿಯಾದವರನ್ನು ಕರೆದು, ವಿಜಯೇಂದ್ರ ಬ್ರೋಕರ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರಗೆ ನಾನು ಬಾಯಿಗೆ ಬಂದ ಹಾಗೆ ಬೈದಿದ್ದೆ ಎಂದು ಆಗ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ, ಈಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ "ಆಗ ಏನು ಮಾತನಾಡಿದ್ದರು" ಎಂಬುದನ್ನು ವಿವರಿಸಿದರು.

ನಂತರ ಯಡಿಯೂರಪ್ಪ ಕರೆದು ಮಾತನಾಡಿದ್ದರು

ಆ ನಂತರ ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ, ನನ್ನನ್ನು ಕರೆದು "ನೀನು ಎಷ್ಟರಮಟ್ಟಿಗೆ ನೀನು ಗಟ್ಟಿಯಾಗಿ ವರದಿಯನ್ನು ಕೊಡತ್ತೀರಾ ಎಂಬುದನ್ನು ಪರೀಕ್ಷೆ ಮಾಡಲು ಹಾಗೆ ಮಾಡಿದ್ದೆವು," ಎಂದರು. " ಆದರೆ ನಾನು ದುಡುಕಿ ಮಾತನಾಡಿಬಿಟ್ಟಿದ್ದೆ. ನಂತರ ತಕ್ಷಣವೇ ಯಡಿಯೂರಪ್ಪ ವರದಿಯನ್ನು ಅಂಗೀಕಾರ ಮಾಡಿದ್ದರು," ಎಂದು ಮಾಣಿಪ್ಪಾಡಿ ವಿವರಿಸಿದರು.

"ಹಾಗಿದ್ದರೆ ನಿಮ್ಮ ಪಕ್ಷ ನಾಯಕರಿಗೆ ನಿಮ್ಮ ಮೇಲೆ ನಂಬಿಕೆ ಇರಲಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಣಿಪ್ಪಾಡಿ, "ನಂಬಿಕೆ ಪ್ರಶ್ನೆ ಅಲ್ಲ. ನನಗೆ ಸಾವಿರ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಕೊಡಲಿಕ್ಕೆ ತಯಾರಿದ್ದರು. ಒಂದು ವರ್ಷ ಅಮೆರಿಕಾಕ್ಕೆ ಹೋಗಿ ಇದ್ದು ಬಿಡಿ. ನೀವು ಕೇಳಿದಷ್ಟು ಹಣವನ್ನು ನಾವು ಕೊಡುತ್ತೇವೆ ಎಂದು ವಕ್ಫ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿದ್ದರು. ಹೀಗಾಗಿ ನಮ್ಮ ಪಕ್ಷದ ನಾಯಕರು ನನ್ನನ್ನು ಹಾಗೆ ಪ್ರಶ್ನೆ ಮಾಡಿದ್ದರು," ಎಂಬ ಸ್ಪಷ್ಟನೆಯನ್ನು ಮಾಣಿಪ್ಪಾಡಿ ಕೊಟ್ಟಿದ್ದಾರೆ.

ಮುಕ್ಕಾಲು ಭಾಗ ಕಾಂಗ್ರೆಸ್ ನಾಯಕರು ಜೈಲಿಗೆ

ವಕ್ಫ್ ಆಸ್ತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮುಕ್ಕಾಲು ಭಾಗದಷ್ಟು ನಾಯಕರು ಜೈಲಿಗೆ ಹೋಗೋದು ಗ್ಯಾರಂಟಿ ಎಂದು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ. ಖರ್ಗೆ, ಸಿ.ಎಂ. ಇಬ್ರಾಹಿಂ, ರೆಹಮಾನ್ ಖಾನ್ ಹೀಗೆ ಕಾಂಗ್ರೆಸ್ ಪಕ್ಷದ ನಾಯಕರು ಬೇರೆ ಬೇರೆ ರೀತಿಯಲ್ಲಿ ಆಮಿಷ ಒಡ್ಡಿದ್ದರು ಎಂದು ವಿವರಿಸಿದ್ದಾರೆ.

ವರದಿ ತಯಾರಾಗುವವರೆಗೆ ಇದ್ದ ಆಸಕ್ತಿ ನಂತರ ಯಾಕೆ ಬಿಜೆಪಿಗಿಲ್ಲ?

ವರದಿ ಸಿದ್ಧವಾಗುವವರೆಗೆ ಬಿಜೆಪಿ ಹಾಗೂ ಬಿಜೆಪಿ ಸರ್ಕಾರಕ್ಕಿದ್ದ ಆಸಕ್ತಿ ನಂತರ ಯಾಕೆ ಉಳಿದಿಲ್ಲ. ವರದಿ ಆಧರಿಸಿ ಕ್ರಮಕ್ಕೆ ಯಾಕೆ ಮುಂದಾಗಿಲ್ಲ ಎಂದು ʼದ ಫೆಡರಲ್‌ ಕರ್ನಾಟಕʼ ಪ್ರಶ್ನಿಸಿದಾಗ, "ಆ ಕುರಿತು ನನಗೂ ಬೇಜಾರಿದೆ. ಯಾಕೆ ಮಂಡನೆ ಮಾಡುತ್ತಿಲ್ಲ ಎಂದು ನಾನು ನನ್ನ ಪಕ್ಷದ ನಾಯಕರಿಗೆ ಆಗ ಕೇಳಿದ್ದೆ. ಸಮಯ ಕೂಡಿ ಬಂದಿಲ್ಲ, ಸಮಯ ಕೂಡಿ ಬಂದಿಲ್ಲ ಎಂಬ ಭರವಸೆಯನ್ನು ಕೊಡುತ್ತಲೇ ಬಂದರು. ಆದರೆ ಹಾಗೆ ಮಾಡಲಿಲ್ಲ," ಎಂದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ವರದಿ ಆಧರಿಸಿ ಸಿಬಿಐ ತನಿಖೆಗೆ ಕೊಡುತ್ತೇವೆ ಎಂದಿದ್ದಾರೆ. ಅವರು ಇಬ್ಬರೂ ಸೇರಿ ಅದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದರು.

ಒಟ್ಟು 2.3 ಲಕ್ಷ ಕೋಟಿ ರೂ. ಆಸ್ತಿ ಕಬಳಿಕೆ

ಒಟ್ಟು ಸುಮಾರು 2 ಲಕ್ಷ 30 ಸಾವಿರ ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆಯಾಗಿದೆ. ಅದೆಲ್ಲವದರ ಕುರಿತು 7 ಸಾವಿರ ಪುಗಳ ಸುದೀರ್ಘ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ. ವರದಿ ಆಧರಿಸಿ ಕ್ರಮವಾದರೆ ಮುಕ್ಕಾಲು ಭಾಗ ಕಾಂಗ್ರೆಸ್ ನಾಯಕರು ಜೈಲು ಸೇರೋದು ಗ್ಯಾರಂಟಿ ಎಂದು ಮಾಣಿಪ್ಪಾಡಿ ಹೇಳಿದ್ದಾರೆ.

ವಕ್ಫ್‌ ಆಸ್ತಿ ಕಬಳಿಕೆ ವಿವಾದ ಹಾಗೂ ಬಿ.ವೈ. ವಿಜಯೇಂದ್ರ ಅವರ ಪ್ರಕರಣದ ಕುರಿತು ವಿವರದವಾದ ಸಂದರ್ಶನ ಇಲ್ಲಿದೆ. ಕ್ಲಿಕ್‌ ಮಾಡಿ.

Full View

Tags:    

Similar News