Mysore MUDA Case| ಮುಡಾದಲ್ಲಿ ಮತ್ತೊಂದು ಅಕ್ರಮ; ಅಧಿಕಾರಿಗಳಿಂದಲೇ ವಂಚನೆ ಆರೋಪ
ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿ ಮತ್ತು ಪ್ರಾಧಿಕಾರದ ಕೆಲವು ಅಧಿಕಾರಿಗಳು ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ ಹಣ ಪಡೆದು, ಪ್ರಾಧಿಕಾರದ ಖಾತೆಗೆ ಹಣ ಜಮೆ ಮಾಡದೇ, ಜಮೆ ಮಾಡಿರುವ ರೀತಿಯಲ್ಲಿ ನಕಲಿ ಬ್ಯಾಂಕ್ ಚಲನ ಸೃಷ್ಟಿಸಿದ್ದಾರೆ. ಇದರಿಂದ ಮುಡಾಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರಿದೆ.;
ಮುಡಾ ನಿವೇಶನ ಹಂಚಿಕೆ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ತೀವ್ರಗೊಳಿಸಿರುವ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣದ ಆರೋಪ ಕೇಳಿಬಂದಿದೆ. ಪ್ರಾಧಿಕಾರದ ಕೆಲ ಅಧಿಕಾರಿಗಳು ಮುಡಾದ ಖಾತೆಗೆ ಹಣ ಜಮೆ ಮಾಡದೇ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ. ಪ್ರಾಧಿಕಾರದ ಹೊರಗುತ್ತಿಗೆ ನೌಕರರು, ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಅಕ್ರಮದಲ್ಲಿ ಶಾಮಿಲಾಗಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ ಹೋರಾಟಗಾರರ ವೇದಿಕೆ ಆರೋಪಿಸಿದೆ.
ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿ ಮತ್ತು ಪ್ರಾಧಿಕಾರದ ಕೆಲವು ಅಧಿಕಾರಿಗಳು ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ ಹಣ ಪಡೆದು, ಪ್ರಾಧಿಕಾರದ ಖಾತೆಗೆ ಹಣ ಜಮೆ ಮಾಡದೇ, ಜಮೆ ಮಾಡಿರುವ ರೀತಿಯಲ್ಲಿ ನಕಲಿ ಬ್ಯಾಂಕ್ ಚಲನ ಸೃಷ್ಟಿಸಿದ್ದಾರೆ. ಇದರಿಂದ ಮುಡಾಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರಿದೆ.
93 ಜನರು ಹಣ ಕಟ್ಟಿರುವ ಚಲನ್ಗಳು ಇವೆ. ಆದರೆ, ಹಣ ಮಾತ್ರ ಮುಡಾ ಖಾತೆಗೆ ಜಮೆಯಾಗಿಲ್ಲ. ಕೂಡಲೇ ಖಾತೆಗೆ ಹಣ ಜಮೆ ಮಾಡುವಂತೆ ಮುಡಾ ಹಣಕಾಸು ವಿಭಾಗವು ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು, ನೀವು ಕೇಳಿರುವ 93 ಚಲನ್ಗಳಲ್ಲಿ 92 ಚಲನ್‌ಗಳ ಹಣ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಮರು ಉತ್ತರ ನೀಡಿರುವ ನಂತರ ಅಕ್ರಮದ ಶಂಕೆ ವ್ಯಕ್ತವಾಗಿದೆ.
ಹಣ ಕಟ್ಟಿರುವ ಚಲನ್‌ನಲ್ಲಿ ಬ್ಯಾಂಕ್ ಮೊಹರು ಇದೆ. ಆದರೆ, ಖಾತೆಗೆ ಹಣ ಜಮೆಯಾಗದಿರುವ ಕುರಿತು ಮುಡಾದ ಹಣಕಾಸು ವಿಭಾಗದ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದು, ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಕುರಿತು ಈಗಾಗಲೇ ಸಿಎಂ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಈಗ ಇದರ ಬೆನ್ನಲ್ಲೇ ಮುಡಾ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಬ್ಯಾಂಕಿನ ನಕಲಿ ಮೊಹರು ಸೃಷ್ಟಿಸಿ ಮುಡಾಗೆ ವಂಚಿರುವ ಬಗ್ಗೆ ಗ್ರಾಹಕರು ವಿರುದ್ಧವೇ ಮುಡಾ ಎಫ್ಐಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ.