ಮುಂದಿನ ತಿಂಗಳು ಹಳದಿ ಮಾರ್ಗಕ್ಕೆ ಮತ್ತೊಂದು ಕೋಚ್‌; ಟ್ರಿಪ್‌ ಅಂತರ 15 ನಿಮಿಷಕ್ಕೆ ಇಳಿಕೆ

ಟಿಟಾಗಢದಿಂದ 36 ರೈಲುಗಳನ್ನು ತರಿಸಲಾಗುತ್ತಿದ್ದು, ಅದರಲ್ಲಿ 34 ರೈಲುಗಳು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌)ಗೆ ಬರಲಿವೆ. 14 ರೈಲುಗಳು ಹಳದಿ ಮಾರ್ಗಕ್ಕೆ ಬಳಕೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Update: 2025-09-22 06:06 GMT

ಸಾಂದರ್ಭಿಕ ಚಿತ್ರ

Click the Play button to listen to article

ಹಳದಿ ಮೆಟ್ರೋ ರೈಲು ಮಾರ್ಗಕ್ಕೆ ಐದನೇ ರೈಲು ಅಕ್ಟೋಬರ್‌ ಅಂತ್ಯಕ್ಕೆ ತಲುಪಲಿದೆ. ಆ ಮೂಲಕ ಹಳದಿ ಮಾರ್ಗದಲ್ಲಿನ ಪ್ರತಿ ಟ್ರಿಪ್‌ ಅಂತರವು 15 ನಿಮಿಷಕ್ಕೆ ಇಳಿಕೆಯಾಗಲಿದೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕಾರ್ಯಾಗಾರದಿಂದ ಐದನೇ ರೈಲು ಕೋಚ್‌ ರವಾನೆಯಾಗಿದೆ. ನಗರದ ಹೆಬ್ಬಗೋಡಿಯಲ್ಲಿರುವ ʼನಮ್ಮ ಮೆಟ್ರೋʼ ಡಿಪೊಗೆ ತಲುಪಿದ ಬಳಿಕ ಆರಂಭಿಕ ಪರೀಕ್ಷೆಗಳು ನಡೆಯಲಿವೆ. ಬಳಿಕ ಎರಡು ವಾರ ವಾಣಿಜ್ಯ ಮಾರ್ಗದಲ್ಲಿ ರಾತ್ರಿ ವೇಳೆ ಪರೀಕ್ಷೆ ನಡೆಯಲಿದ್ದು, ಆ ನಂತರ ಸಂಚಾರಕ್ಕೆ ಲಭ್ಯವಾಗಲಿದೆ.

ಟಿಟಾಗಢದಿಂದ 36 ರೈಲುಗಳನ್ನು ತರಿಸಲಾಗುತ್ತಿದ್ದು, ಅದರಲ್ಲಿ 34 ರೈಲುಗಳು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್  (ಬಿಎಂಆರ್‌ಸಿಎಲ್‌)ಗೆ ಬರಲಿವೆ. 14 ರೈಲುಗಳು ಹಳದಿ ಮಾರ್ಗಕ್ಕೆ ಬಳಕೆಯಾಗಲಿದ್ದು, ಉಳಿದವು ಹಸಿರು ಮತ್ತು ನೇರಳೆ ಮಾರ್ಗದಲ್ಲಿರುವ ರೈಲುಗಳ ಕೊರತೆ ನೀಗಿಸಲಿವೆ. ಈಗಾಗಲೇ ಹಳದಿ ಮಾರ್ಗಕ್ಕೆ ನಾಲ್ಕು ರೈಲು ಮತ್ತು ನೇರಳೆ ಮಾರ್ಗಕ್ಕೆ ಒಂದು  ಕೋಚ್‌ಗಳು ಪೂರೈಕೆಯಾಗಿವೆ.

ಪ್ರತಿ ಟ್ರಿಪ್‌ ನಡುವೆ ಅಂತರ 15 ನಿಮಿಷಕ್ಕೆ ಇಳಿಕೆ

ಆರ್.ವಿ. ರಸ್ತೆ- ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಕೇವಲ ಮೂರು ಕೋಚ್‌ಗಳೊಂದಿಗೆ (ಆರು ಬೋಗಿಗಳ ಒಂದು ಸೆಟ್ ಒಂದು ಕೋಚ್) ಆ.11ಕ್ಕೆ ಆರಂಭಿಸಲಾಗಿತ್ತು. ಆಗ 25 ನಿಮಿಷಕ್ಕೊಂದರಂತೆ ಟ್ರಿಪ್‌ಗಳಿದ್ದವು. ಒಂದು ತಿಂಗಳ ಬಳಿಕ ನಾಲ್ಕನೇ ರೈಲು ಓಡಾಟ ಆರಂಭವಾದ ಮೇಲೆ ಟ್ರಿಪ್‌ಗಳ ನಡುವಿನ ಅಂತರ 19 ನಿಮಿಷಕ್ಕೆ ಇಳಿದಿತ್ತು. ಐದನೇ ರೈಲು ಬಂದಾಗ ಇನ್ನೂ ನಾಲ್ಕು ನಿಮಿಷ ಕಡಿಮೆಯಾಗಲಿದೆ.

ನವೆಂಬರ್‌ ಅಂತ್ಯಕ್ಕೆ  6, 7 ಹಾಗೂ 8ನೇ ಕೋಚ್‌ ಲಭ್ಯ 

ಅಕ್ಟೋಬ‌ರ್ ಕೊನೆ ವಾರದಲ್ಲಿ ಆರನೇ ರೈಲು ಕೋಚ್ ಟಿಟಾಗಢದಿಂದ ರವಾನೆಯಾಗಲಿದೆ. ನವೆಂಬರ್ ಮೊದಲ ವಾರದಲ್ಲಿ ಹೆಬ್ಬಗೋಡಿ ಡಿಪೊ ತಲುಪಲಿದೆ. ನವೆಂಬರ್ ಅಂತ್ಯದಲ್ಲಿ ಏಳು ಮತ್ತು ಎಂಟನೇ ರೈಲು ಕೋಚ್‌ಗಳು ರವಾನೆಯಾಗಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ದಟ್ಟಣೆ ಇಳಿಕೆ

ಐಟಿ ಹಬ್‌ ಆಗಿರುವ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್‌ಸಿಟಿ ರಸ್ತೆ ಕಡೆಗೆ ಹಳದಿ ಮಾರ್ಗ ಆರಂಭವಾಗುವ ಮೊದಲು ಈ ಮಾರ್ಗದಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿತ್ತು. ಆ.11 ರಿಂದ ಹಳದಿ ಮಾರ್ಗ ಆರಂಭವಾದಾಗಿನಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಶೇ.37 ಕಡಿಮೆಯಾಗಿದ್ದು, ನವೆಂಬರ್‌ ಅಂತ್ಯಕ್ಕೆ ೮ ಕೋಚ್‌ಗಳು ಲಭ್ಯವಾದರೆ ಮತ್ತಷ್ಟು ಟ್ರಾಫಿಕ್‌ ಇಳಿಕೆಯಾಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Tags:    

Similar News