KPSC Controversy | ಕನ್ನಡ ಭಾಷಾಂತರ ಲೋಪ; ಕೋರ್ಟ್ ಸೂಚನೆ ಬಳಿಕವೇ ನಿರ್ಧಾರ- ವಿಧಾನಸಭೆಯಲ್ಲಿ ಸಿಎಂ ಉತ್ತರ
ತಪ್ಪು ಭಾಷಾಂತರದಿಂದ ಅನ್ಯಾಯಕ್ಕೆ ಒಳಗಾದವರ ಪರವಾಗಿ ಸರ್ಕಾರವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ನಿಲುವಳಿ ಸೂಚನೆಗೆ ಉತ್ತರಿಸಿದರು. ಮುಂಬರುವ ದಿನಗಳಲ್ಲಿ ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಪರೀಕ್ಷೆ, ನೇಮಕಾತಿ ನಡೆಲಾಗುವುದು ಎಂದು ವಿಧಾನಸಭೆಗೆ ತಿಳಿಸಿದರು.;
ಕೆಪಿಎಸ್ಸಿ ಪರೀಕ್ಷೆ ಲೋಪಗಳಿಗೆ ಸಂಬಂಧಿಸಿ ನ್ಯಾಯಾಲಯದ ಸೂಚನೆ ಬಳಿಕ ಮರು ಪರೀಕ್ಷೆ ಕುರಿತು ಸರ್ವಪಕ್ಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಎಸ್‌ಸಿ ಪರೀಕ್ಷೆ ಭಾಷಾಂತರದಲ್ಲಾದ ಲೋಪಗಳ ಕುರಿತಂತೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಪಿಎಸ್‌ಸಿ ಅಕ್ರಮದಲ್ಲಿ ಭಾಗಿಯಾದವರು ಶಿಕ್ಷೆ ಅನುಭವಿಸಲೇಬೇಕು. ಸದಸ್ಯರ ಸಂಖ್ಯೆ ಕಡಿತ, ಸದಸ್ಯರ ಆಯ್ಕೆಗೆ ಶೋಧನಾ ಕಮಿಟಿ ರಚನೆ, ಪ್ರಾಮಾಣಿಕರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮರು ಪರೀಕ್ಷೆಗೆ ಸೂಚನೆ ಕೊಡಲು ಆಗುವುದಿಲ್ಲ. ನ್ಯಾಯಾಲಯದ ನಿರ್ದೇಶನದ ಬಳಿಕ ಈ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದರು.
ತಪ್ಪು ಭಾಷಾಂತರದಿಂದ ಅನ್ಯಾಯಕ್ಕೆ ಒಳಗಾದವರ ಪರವಾಗಿ ಸರ್ಕಾರವಿದೆ. ಮುಂಬರುವ ದಿನಗಳಲ್ಲಿ ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಪರೀಕ್ಷೆ, ನೇಮಕಾತಿ ನಡೆಲಾಗುವುದು ಎಂದು ವಿಧಾನಸಭೆಗೆ ತಿಳಿಸಿದರು.
ಈ ಹಿಂದೆ ಕೆಪಿಎಸ್‌ಸಿಯಲ್ಲಿ ಹಲವು ಬಾರಿ ಗೊಂದಲಗಳಾಗಿ ನ್ಯಾಯಾಲಯದ ಮೆಟ್ಟಿಲು ಏರಿರುವ ಚರಿತ್ರೆ ಇದೆ. ಭ್ರಷ್ಟಾಚಾರ ಕೆಪಿಎಸ್‌ಸಿ ಹೊರಗೆ ಹೋಗಬೇಕು. ಇದರ ಬಗ್ಗೆ ಎರಡು ಮಾತಿಲ್ಲ. ಕೆಪಿಎಸ್‌ಸಿ ಅವ್ಯವಹಾರಗಳ ಕುರಿತು ಮಾ.4 ರಂದು ವಿರೋಧ ಪಕ್ಷದ ಸದಸ್ಯರು ನಿಲುವಳಿ ಸೂಚನೆ ಮಂಡಿಸಿದ್ದರು. ನಿಲುವಳಿ ಸೂಚನೆಯನ್ನು ನಿಯಮ 69 ಕ್ಕೆ ಪರಿವರ್ತಿಸಿ ಬುಧವಾರ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.
ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪಗಳ ಕುರಿತು ಹಾಗೂ ಪರೀಕ್ಷೆಗಳು ನಡೆದು ಸಂದರ್ಶನಗಳನ್ನು ಮಾಡದೆ ಲೋಪ ಮಾಡಲಾಗುತ್ತಿದೆ ಎಂದು ನಿಲುವಳಿಯಲ್ಲಿಆರೋಪಿಸಲಾಗಿದೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಕೆಪಿಎಸ್‌ಸಿಯನ್ನು ರೋಗಗ್ರಸ್ತ ಸಂಸ್ಥೆ ಹಾಗೂ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡುವ ಸಂಸ್ಥೆ ಎಂದು ಟೀಕಿಸಿದ್ದರು.
ಕೆಪಿಎಸ್ಸಿ ಶುದ್ಧತೆಯೇ ಸರ್ಕಾರದ ಕಳಕಳಿ
ಕೆಪಿಎಸ್‌ಸಿ ಸರಿಯಾಗಬೇಕು ಎಂಬುದು ಸದನದ ಕಳಕಳಿಯಾಗಿದೆ. ನಮ್ಮ ಸರ್ಕಾರದ ಕಳಕಳಿ ಕೂಡ ಅದೇ ಆಗಿದೆ. ಅಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳಂಕರಹಿತವಾಗಿರಬೇಕು. ದಕ್ಷರೂ, ಪ್ರಾಮಾಣಿಕರೂ ಆದ ಅಧಿಕಾರಿಗಳು ರಾಜ್ಯದ ಆಡಳಿತ ಸೇವೆಗೆ ಬರಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆಯೋಗವು ತನ್ನ ಹಿಂದಿನ ಮರ್ಯಾದೆ ಹಾಗೂ ವೈಭವವನ್ನು ಮರಳಿ ತರುವ ಕೆಲಸ ಮಾಡಬೇಕು. ದೊಡ್ಡ ಪರಂಪರೆ ಹೊಂದಿರುವ ಕರ್ನಾಟಕ ಆಡಳಿತ ಸೇವೆಗೆ ಸೇರಬಯಸುವ ಅಧಿಕಾರಿಗಳ ಆಯ್ಕೆ ಮಾಡಿಕೊಡುವುದರಲ್ಲಿ ಆಯೋಗವು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿದೆ. ಕರ್ನಾಟಕದ ಅಧ್ಯಾಪಕರಲ್ಲಿ ಕನ್ನಡ ಅನುವಾದ ಮಾಡಲಾಗದ ದುಸ್ಥಿತಿ ಇದೆ. ಇಂಗ್ಲೀಷಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ ಎಂದರು.
ಲೋಕಸೇವಾ ಆಯೋಗಗಳ ಕುರಿತು ಸರ್ಕಾರಗಳು ನೇರವಾಗಿ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಇದು ಸಂವಿಧಾನಬದ್ಧವಾದ ಸಂಸ್ಥೆಯಾಗಿದೆ. ಲೋಕ ಸೇವಾ ಆಯೋಗಗಳು ಆರ್ಟಿಕಲ್ 315 ರಂತೆ ರಚನೆಯಾಗಿವೆ. ಲೋಕ ಸೇವಾ ಆಯೋಗಗಳ ಸದಸ್ಯರನ್ನು ತೆಗೆದು ಹಾಕಲು ಸುಪ್ರೀಂಕೋರ್ಟಿನ ಒಪ್ಪಿಗೆಯೊಂದಿಗೆ ರಾಷ್ಟ್ರಪತಿಗಳು ಆರ್ಟಿಕಲ್ 317 ರಂತೆ ತೆಗೆದು ಹಾಕಬೇಕು. ಹಾಗೆಂದು ಹೇಳಿ ನಾವು ಕೈಕಟ್ಟಿ ಕೂತುಕೊಳ್ಳುವಂತೆ ಇಲ್ಲ. ಏನಾದರೂ ಮಾಡಲೇಬೇಕು. ಸದನದ ಸದಸ್ಯರು ಮಾತನಾಡುವಾಗ ಸಲಹೆಗಳನ್ನು ನೀಡಿದ್ದರೆ ಉತ್ತಮವಿತ್ತು. ಆದರೂ ಸಹ ನಮ್ಮ ಸರ್ಕಾರ ಲೋಕ ಸೇವಾ ಆಯೋಗವನ್ನು ಸರಿದಾರಿಗೆ ತರಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು.
ಉತ್ತರ ಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆ ಇದೆ. ಅಲ್ಲಿ ಕೇವಲ 8 ಜನ ಸದಸ್ಯರಿದ್ದಾರೆ. ಆದರೆ, ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಗೆ 16 ಜನ ಸದಸ್ಯರಿದ್ದಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಆದರೆ, ಕೆ.ಪಿ.ಎಸ್.ಸಿ.ಯ ಸದಸ್ಯರ ಸಂಖ್ಯೆ ಅಧ್ಯಕ್ಷರೂ ಸೇರಿದಂತೆ 14 ರಿಂದ 16 ಕ್ಕೆ ಏರಿಸಿದ್ದು ಬೊಮ್ಮಾಯಿ ನೇತೃತ್ವದ ಸರ್ಕಾರ ಎಂದು ತಿರುಗೇಟು ನೀಡಿದರು.
384 ಹುದ್ದೆಗಳ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕನ್ನಡ ಭಾಷಾಂತರ ಲೋಪದೋಷಗಳ ಕುರಿತು ಪರಿಶೀಲಿಸಲು ಆಯೋಗವು ವಿಷಯ ತಜ್ಞರ ಸಮಿತಿ ರಚಿಸಿದೆ. ಸಮಿತಿಯು ಭಾಷಾಂತರ ಲೋಪದಿಂದ ಎರಡೂ ಪತ್ರಿಕೆಗಳಿಂದ ಒಟ್ಟು 10 ಪ್ರಶ್ನೆಗಳ ಕೀ-ಉತ್ತರಗಳು ಪರಿಷ್ಕೃತಗೊಳ್ಳಲಿವೆ ಎಂಬ ಅಭಿಪ್ರಾಯ ನೀಡಿದ್ದರು. ಆದಾಗ್ಯೂ, ಆಯೋಗವು ಮರು ಪರೀಕ್ಷೆ ನಡೆಸಿತ್ತು. ವಿಪರ್ಯಾಸವೆಂದರೆ ಮರು ಪರೀಕ್ಷೆಯಲ್ಲಿಯೂ ಸಹ ಕನ್ನಡ ಪ್ರಶ್ನೆಪತ್ರಿಕೆ ಭಾಷಾಂತರದಲ್ಲಿ ಲೋಪಗಳ ಬಗ್ಗೆ ದೂರು ಸ್ವೀಕೃತವಾಗಿತ್ತು. ಮತ್ತೊಮ್ಮೆ ತಜ್ಞರ ಸಮಿತಿ ಪರಿಶೀಲನೆ ನಡೆಸಿದ್ದು, ಕೃಪಾಂಕ ನೀಡಬಹುದೆಂದು ಅಭಿಪ್ರಾಯಪಟ್ಟಿದೆ ಎಂದರು.
ಮುಖ್ಯ ಪರೀಕ್ಷೆಗೆ ಈಗಾಗಲೇ ಅರ್ಜಿ ಆಹ್ವಾನಿಸಿ, ಆಯೋಗವು ಅಧಿಸೂಚನೆ ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಸರ್ಕಾರವು ಯಾವುದೇ ನಿರ್ಣಯ ಕೈಗೊಳ್ಳುವುದು ನ್ಯಾಯೋಚಿತವಲ್ಲ. ಪ್ರಕರಣ ಇತ್ಯರ್ಥವಾದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರವು ಆಯೋಗಕ್ಕೆ ಸೂಚನೆ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.