ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿದ್ದರಾಮಯ್ಯ
ಕರ್ನಾಟಕ ಸುವರ್ಣೋತ್ಸವವನ್ನು ಸರ್ಕಾರ ಇಡೀ ವರ್ಷ ಆಚರಿಸುತ್ತಿದೆ. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆಯಾಗಿದೆ, ಆದರೆ, ಬಿಜೆಪಿ ಕರ್ನಾಟಕ ಸುವರ್ಣೋತ್ಸವವನ್ನು ಕೈ ಬಿಟ್ಟಿತ್ತು ಎಂದು ಸಿಎಂ ಆರೋಪಿಸಿದ್ದಾರೆ.;
ಕನ್ನಡಪರ ಹೋರಾಟಗಾರರ ಮೇಲೆ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ಕನ್ನಡ ನೆಲಕ್ಕಾಗಿ ಭಾಷೆಗಾಗಿ ಹೋರಾಟ ಮಾಡಿದ ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ಎಂದು ನಾಮಕರಣವಾಗಿ 2023 ಕ್ಕೆ 50 ವರ್ಷ ತುಂಬಿದರೂ ಅಂದಿನ ಬಿಜೆಪಿ ಸರ್ಕಾರ ಸುವರ್ಣೋತ್ಸವ ಆಚರಿಸದೇ ಕೈಬಿಟ್ಟಿತು. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದು ವರ್ಷ ತಡವಾಗಿ ಅಧಿಕಾರಕ್ಕೆ ಬಂದರೂ ಸುವರ್ಣೋತ್ಸವವನ್ನು ಇಡೀ ವರ್ಷ ಆಚರಿಸಲು ನಿರ್ಧರಿಸಿದೆ. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ ಭಾಷೆಯಾಗಲಿದೆ. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಾಡುವ, ವ್ಯವಹರಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಒಂದು ಭಾಷೆ ಮಾತನಾಡುವ ಜನ ಒಂದು ಆಡಳಿತದ ಸೂರಿನಡಿ ಬರಬೇಕು ಎನ್ನುವುದು ಕನ್ನಡ ಏಕೀಕರಣ ಚಳವಳಿಯ ಆಶಯ. ಈ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕನ್ನಡ ಓದು, ಬರೆಯುವುದನ್ನು ಹೆಚ್ಚು ಕಲಿಯಬೇಕು, ಕಲಿಸಬೇಕು ಎಂದು ಹೇಳಿದ್ದಾರೆ.